ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mysuru Dasara 2026: ಮೈಸೂರು ದಸರಾ ನಿಶಾನೆ ಆನೆಯಾಗಿ ʼಅಭಿಮನ್ಯುʼ ಆಯ್ಕೆ; ಸುದೀರ್ಘ ಸೇವೆಗೆ ರಾಜ್ಯ ಸರ್ಕಾರದಿಂದ ಗೌರವ

Nishane elephant Abhimanyu: 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ಈ ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಿ, ಗೌರವಯುತ ಬೀಳ್ಕೊಡುಗೆ ನೀಡಲಾಗಿತ್ತು. ದಸರಾದಲ್ಲಿ ಹಲವು ವರ್ಷಗಳ ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ಬಾರಿ ಅಭಿಮನ್ಯುವನ್ನು ನಿಶಾನೆ ಆನೆಯನ್ನಾಗಿ

ದಸರಾ ಆನೆ ಅಭಿಮನ್ಯು.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ (Mysuru Dasara 2026) ಅಭಿಮನ್ಯು ಆನೆಯ ಹಲವು ವರ್ಷಗಳ ಅಮೂಲ್ಯ ಸೇವೆಗೆ ರಾಜ್ಯ ಸರ್ಕಾರ ವಿಶೇಷ ಗೌರವ ಸಲ್ಲಿಸಿದೆ. ಈ ಬಾರಿಯ ಮೈಸೂರು ದಸರಾ-2026ರ ಜಂಬೂಸವಾರಿಗೆ ಅಭಿಮನ್ಯುವನ್ನು (Elephant Abhimanyu) ‘ನಿಶಾನೆ ಆನೆ’ಯನ್ನಾಗಿ ಆಯ್ಕೆ ಮಾಡಲಾಗಿದ್ದು, ಅದಕ್ಕೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ ಗೌರವಪೂರ್ವಕವಾಗಿ ಮುಂಚೂಣಿಯಲ್ಲಿ ಮುನ್ನಡೆಸಲು ಅರಣ್ಯ ಇಲಾಖೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚಿಸಿದ್ದಾರೆ.

60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ಈ ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಿ, ಆಗಸ್ಟ್ 26ರ ಗಜಪಯಣದ ವೇಳೆ ಗೌರವಯುತ ಬೀಳ್ಕೊಡುಗೆ ನೀಡಲಾಗಿತ್ತು. ಆದರೆ, ದಸರಾ ಆನೆಗಳ ಪಟ್ಟಿಯಲ್ಲಿ ಅಭಿಮನ್ಯು ಹೆಸರು ಇಲ್ಲದಿರುವುದಕ್ಕೆ ಅಭಿಮಾನಿಗಳು ತೀವ್ರ ಬೇಸರ ಹೊರಹಾಕಿದ್ದರು. ಇದೀಗ ಅಭಿಮನ್ಯುವನ್ನು ಜಂಬೂಸವಾರಿಯಲ್ಲಿ ನಿಶಾನೆ ಆನೆಯನ್ನಾಗಿ ಕಳುಹಿಸಲು ಸರ್ಕಾರ ಹಸಿರು ನಿಶಾನೆ ನೀಡಿದೆ.



ಅರಣ್ಯ ಇಲಾಖೆಗ ಸಚಿವ ರಾಮಲಿಂಗಾರೆಡ್ಡಿ ಪತ್ರ

ಅಭಿಮನ್ಯುವನ್ನು ‘ನಿಶಾನೆ ಆನೆ’ಯನ್ನಾಗಿ ಆಯ್ಕೆ ಮಾಡಿರುವ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ವೈಭವವನ್ನು ವಿಶ್ವದಾದ್ಯಂತ ಸಾರುವ ಐತಿಹಾಸಿಕ ಉತ್ಸವವಾಗಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಉತ್ಸವದಲ್ಲಿ ದಸರಾ ಗಜಪಡೆಯ ಆನೆಗಳು ವರ್ಷಗಳಿಂದಲೂ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ.

ಈ ಮಹತ್ವದ ದಸರಾ ಪರಂಪರೆಯಲ್ಲಿ ಅಭಿಮನ್ಯು ಆನೆಯ ಸೇವೆ ಅತ್ಯಂತ ವಿಶೇಷ ಹಾಗೂ ಸ್ಮರಣೀಯವಾಗಿದೆ. ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿದೆ.

ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಇತ್ತೀಚೆಗೆ ಆಯೋಜಿಸಲಾದ ಅಭಿಮನ್ಯು ಆನೆಯ ಬೀಳ್ಕೊಡುಗೆ/ಗೌರವ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿದ್ದು, ಸಾರ್ವಜನಿಕರು ಹಾಗೂ ದಸರಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮವು ಅಭಿಮನ್ಯುವಿನ ಸೇವೆಗೆ ಸಲ್ಲಿಸಿದ ಗೌರವದ ಪ್ರತೀಕವಾಗಿದೆ.

ಇದರ ಮುಂದುವರಿದ ಭಾಗವಾಗಿ, ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲಿಯೂ ಅಭಿಮನ್ಯುವನ್ನು ಹೆಮ್ಮೆಯಿಂದ ಹಾಗೂ ಗೌರವಪೂರ್ವಕವಾಗಿ ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಈ ವರ್ಷದ ಉತ್ಸವದಲ್ಲಿ ಘನ ಉಪಸ್ಥಿತಿವಹಿಸಿ ವಿಶೇಷ ಸ್ಥಾನ ಕಲ್ಪಿಸುವುದು ಸೂಕ್ತವಾಗಿದೆ.

ಮೈಸೂರು ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಭಿಮನ್ಯುವಿಗೆ ನಿವೃತ್ತಿ, ಭೀಮನಿಗೂ ಮಿಸ್‌ ಆಯ್ತಾ ಚಾನ್ಸ್‌?

ಅಭಿಮನ್ಯುವಿನಂತಹ ದಸರಾ ಪರಂಪರೆಯ ಹೆಮ್ಮೆಯ ಆನೆಯ ಹಲವು ವರ್ಷಗಳ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ 2026ರ ಜಂಬೂಸವಾರಿಯಲ್ಲಿ ಗೌರವಪೂರ್ವಕವಾಗಿ ಉಪಸ್ಥಿತಿಗೊಳಿಸುವುದರಿಂದ ದಸರಾ ಮಹೋತ್ಸವದ ವೈಭವ ಹಾಗೂ ಪರಂಪರೆಗೆ ಮತ್ತಷ್ಟು ಮೆರುಗು ಬರಲಿದೆ. ಆದ್ದರಿಂದ, ಮೈಸೂರು ದಸರಾ -2026ರ ಜಂಬೂಸವಾರಿ ಉತ್ಸವದಲ್ಲಿ ಅಭಿಮನ್ಯು ಆನೆಯನ್ನು ನಿಶಾನೆ ಆನೆಯನ್ನಾಗಿಸಿ, ಇದರ ಸೇವೆಯನ್ನು ಸ್ಮರಿಸುವಂತೆ ಸೂಕ್ತ ವ್ಯವಸ್ಥೆ ಹಾಗೂ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರದ ಮೂಲಕ ಸಚಿವರು ಸೂಚಿಸಿದ್ದಾರೆ.