ಮೈಸೂರು: ಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap simha) ಅವರ ವಿರುದ್ಧ ತಿ.ನರಸೀಪುರ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಜಾತಿ ಹೆಸರಿನಲ್ಲಿ ಬೆದರಿಕೆ ಹಾಗೂ ಜಾತಿ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಧು ಅವರು ಪ್ರಕರಣ ದಾಖಲಿಸಿದ್ದಾರೆ.
ಮಧು ಅವರು ನೀಡಿದ ದೂರಿನಲ್ಲಿ, "ಮೈಸೂರು ಜಿಲ್ಲೆಯ ತಿ. ನರಸೀಪುರ ಪೊಲೀಸ್ ಠಾಣೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಣೇಶ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಬಹಿರಂಗವಾಗಿ ದಲಿತ ಸಮುದಾಯವನ್ನು ಸಾರ್ವಜನಿಕವಾಗಿ ಹೀಯಾಳಿಸುವ ಮತ್ತು ಕೀಳಾಗಿ ಚಿತ್ರಿಸುವ ದುರುದ್ದೇಶದಿಂದಲೇ ಅತ್ಯಂತ ಅವಹೇಳನಕಾರಿ ಮತ್ತು ನಿಂದನಾತ್ಮಕ ಭಾಷಣ ಮಾಡಿದ್ದಾರೆ.
ತಮ್ಮ ಭಾಷಣದಲ್ಲಿ, ದಲಿತ ಸಮುದಾಯದ ಕಾರ್ಯಕರ್ತರನ್ನು ನೇರವಾಗಿ ಗುರಿಯಾಗಿಸಿ, "ನೀವು ಕೇವಲ ನೀಲಿ ಶಾಲು ಹೊದ್ದು ಉದರ ನಿಮಿತ್ತವಾಗಿ ಬಂದು ನಿಲ್ಲುತ್ತೀರಿ, ನಿಮಗೆ ಅಂಬೇಡ್ಕರ್ ಅವರ ಬಗ್ಗೆ ಏನು ಗೊತ್ತಿಲ್ಲ. ಮೊದಲು ಅಂಬೇಡ್ಕರ್ ಅವರನ್ನು ಓದಿ" ಎಂದು ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಈ ಮೂಲಕ ಇಡೀ ದಲಿತ ಸಮುದಾಯದ ಸಾಂಸ್ಕೃತಿಕ ಅಸ್ಮಿತೆಯಾದ ನೀಲಿ ಶಾಲಿನ ಗೌರವವನ್ನು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಸಾರ್ವಜನಿಕವಾಗಿ ಹೀಯಾಳಿಸಿದ್ದಾರೆ. ಇದು ನಮ್ಮ ಸಂವಿಧಾನದ ವಿಧಿ 21ರ ಅಡಿಯಲ್ಲಿ ದೊರೆತಿರುವ ಗೌರವದಿಂದ ಬದುಕುವ ಮೂಲಭೂತ ಹಕ್ಕಿನ ಮತ್ತು ಪರಿಶಿಷ್ಟ ಜಾತಿಯ ಆತ್ಮಗೌರವಕ್ಕೆ ಎಸಗಿದ ಘೋರ ಅಪಮಾನವಾಗಿದೆ" ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪಟ್ಟಣದ ಸಾರ್ವಜನಿಕ ಶಾಂತಿ, ಸೌಹಾರ್ದತೆ ಮತ್ತು ಸಂವಿಧಾನದ ಹಕ್ಕುಗಳ ರಕ್ಷಣೆಯ ಹಿತದೃಷ್ಟಿಯಿಂದ ಈ ದೂರನ್ನು ಸ್ವೀಕರಿಸಿ, ಆರೋಪಿ ಪ್ರತಾಪ್ ಸಿಂಹ ಹಾಗೂ ಶೋಭಾಯಾತ್ರೆಯ ಮುಖ್ಯ ಆಯೋಜಕರ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿಸುತ್ತೇನೆ ಎಂದು ದೂರಿನಲ್ಲಿ ಕೋರಿದ್ದಾರೆ.
KPSC ಮುಚ್ಚುತ್ತೇವೆ ಎಂಬ ಸಿಎಂ ಹೇಳಿಕೆ ಬುದ್ಧಿಗೇಡಿತನ, ಹೊಣೆಗೇಡಿತನ, ಅಜ್ಞಾನದ ಪರಮಾವಧಿ: ಎಚ್‌ಡಿಕೆ ಟೀಕೆ
ದೂರಿನ ಹಿನ್ನೆಲೆ ತಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ನಿಬಂಧನೆಗಳು ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 (ಶಾಂತಿ ಭಂಗದ ಉದ್ದೇಶದಿಂದ ಮಾಡುವ ಉದ್ದೇಶಪೂರ್ವಕ ಅವಮಾನ ಮತ್ತು ಪ್ರಚೋದನೆ) ಮತ್ತು ಸೆಕ್ಷನ್ 356 (ಮಾನನಷ್ಟ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆೆ ಎಂದು ತಿಳಿದುಬಂದಿದೆ.