BY Vijayendra: ಯಾವುದೇ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ: ಬಿ.ವೈ.ವಿಜಯೇಂದ್ರ
BY Vijayendra: ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಅವರ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನಲ್ಲಿ ಯುದ್ಧ ಪ್ರಾರಂಭವಾಗಿ 15 ದಿನಗಳಾಗಿವೆ. ಯಾರ‍್ಯಾರು ಬಡಿಗೆ, ಯಾರ‍್ಯಾರು ಕುಡುಗೋಲು ತೆಗೆದುಕೊಂಡು ಬರುತ್ತಾರೆ? ಎಂದು ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಮೈಸೂರು, ಜ. 17, 2025: ಅಲ್ಪಸಂಖ್ಯಾತ ದೇಶದ್ರೋಹಿಗಳನ್ನು ಮಟ್ಟ ಹಾಕುವ ಕೆಲಸ ನಡೆಯುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ರಾಜ್ಯದ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಆರೋಪಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದು ದೂರಿದ ಅವರು, ಕಲಬುರಗಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕಡಿದು ಹಾಕಿದ್ದಾರೆ. ಬೀದರ್‌ನಲ್ಲೂ ಎಟಿಎಂ ದರೋಡೆ ನಡೆದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಮತ್ತೊಂದೆಡೆ ಭ್ರಷ್ಟಾಚಾರವೂ ತೀವ್ರವಾಗಿದೆ. ಕಲಬುರಗಿ ಗುತ್ತಿಗೆದಾರನ ಆತ್ಮಹತ್ಯೆ ನಡೆದಿದೆ. ಬಳಿಕ ಪೊಲೀಸ್ ಗೂಂಡಾಗರ್ದಿ ನಡೆದಿದೆ. ದೂರು ನೀಡಲು ಹೋದ ಗುತ್ತಿಗೆದಾರನ ಸಹೋದರಿಯರ ಜತೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ತಿಳಿದೇ ಇದೆ. ಬಿಜೆಪಿ ಹೋರಾಟ ಮಾಡಿದ್ದರಿಂದ ಕಾಂಗ್ರೆಸ್ ಪುಡಾರಿಯನ್ನು ಬಂಧಿಸಿ ರಾಜಾತಿಥ್ಯ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರ ಸರ್ಕಾರವು ಅಭಿವೃದ್ಧಿ ಬಗ್ಗೆ ಚಕಾರವನ್ನೂ ಎತ್ತುತ್ತಿಲ್ಲ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಜಿಲ್ಲೆಗೆ ಆದ್ಯತೆ ಕೊಟ್ಟಿದ್ದರು. ಸರ್ವತೋಮುಖ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ಕೊಟ್ಟಿದ್ದರು. ಸಿದ್ದರಾಮಯ್ಯನವರು ಈ ಜಿಲ್ಲೆಗೆ ಎಷ್ಟು ಕೋಟಿ ರೂ. ಕೊಟ್ಟಿದ್ದಾರೆ ಎಂದು ಕೇಳಿದರು.
ಸಿದ್ದರಾಮಯ್ಯ ಅವರು ಅವಧಿ ಪೂರ್ಣಗೊಳಿಸಲು ಸಾಧ್ಯವಿಲ್ಲ
ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಅವರ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಕಾಂಗ್ರೆಸ್ಸಿನಲ್ಲಿ ಯುದ್ಧ ಪ್ರಾರಂಭವಾಗಿ 15 ದಿನಗಳಾಗಿವೆ. ಯಾರ‍್ಯಾರು ಬಡಿಗೆ, ಯಾರ‍್ಯಾರು ಕುಡುಗೋಲು ತೆಗೆದುಕೊಂಡು ಬರುತ್ತಾರೆ? ಇದು ಗೊತ್ತಾಗಲಿದೆ. ಸಿಎಂ ಸ್ಥಾನದ ಕುರಿತ ಬೀದಿ ರಂಪವು ಮುಂದುವರಿದಿದೆ. ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಇಳಿಯುವುದಿಲ್ಲ ಎಂದರೆ, ಡಿ.ಕೆ.ಶಿವಕುಮಾರ್ ತಾವು ಸಿಎಂ ಆಗಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಇದು ಯಾವ ತಿರುವನ್ನು ಪಡೆಯಲಿದೆ ಎಂದು ಕಾದುನೋಡಿ ಎಂದು ವಿಜಯೇಂದ್ರ ಅವರು ಪ್ರಶ್ನೆಗೆ ಉತ್ತರ ನೀಡಿದರು.
ಯಾವುದೇ ಕ್ಷಣದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದು ಎಂದು ತಿಳಿಸಿದ ಬಿ.ವೈ.ವಿಜಯೇಂದ್ರ, ಡಿ.ಕೆ. ಶಿವಕುಮಾರ್ ಜತೆಗೆ 8ರಿಂದ 10 ಸಚಿವರು ತಾವೂ ಸಿಎಂ ಆಗಬೇಕೆಂದು ಆಕಾಂಕ್ಷಿಗಳಾಗಿ ಸಾಲಿನಲ್ಲಿ ನಿಂತಿದ್ದಾರೆ. ಇದರ ನಡುವೆ ರಾಜ್ಯವು ಅಭಿವೃದ್ಧಿ ಇಲ್ಲದೆ ಬಡವಾಗಿದೆ. ಕಿಯೋನಿಕ್ಸ್ ಸಂಬಂಧ ಗುತ್ತಿಗೆದಾರರು ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
ಜಾತಿಗಣತಿ ಎಂಬ ರಾಜಕೀಯ ಅಸ್ತ್ರ
ಅಭಿವೃದ್ಧಿ ಬಗ್ಗೆ ಚಿಂತನೆಯನ್ನೂ ಮಾಡದ ರಾಜ್ಯ ಸರ್ಕಾರ ಇಲ್ಲಿದೆ. ರೈತರೂ ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮತ್ತೊಂದು ಕಡೆ ಸಿದ್ದರಾಮಯ್ಯ ಅವರ ಬುದ್ಧಿವಂತಿಕೆ, ಜಾತಿ ಜನಗಣತಿ ಹೆಸರಿನಲ್ಲಿ ಪಗಡೆಯಾಟ ಎಂದೇ ಭಾವಿಸಿದ್ದಾರೆ. ಅದನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | Reliance: ಡಿಸೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ದಾಖಲೆಯ 21,930 ಕೋಟಿ ರೂ. ಲಾಭ!
ಹಿಂದೆ ಅವರ ಸರ್ಕಾರ ಇದ್ದಾಗ 2016 ರಲ್ಲೇ ಜಾತಿಗಣತಿ ವರದಿಯನ್ನು ಅವಸರದಿಂದ ತಯಾರಿಸಿದರು. ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೂ ಯಾಕೆ ಅದನ್ನು ಅನುಷ್ಠಾನ ಮಾಡಿಲ್ಲ ಎಂದು ಕೇಳಿದ ಅವರು, ಕುರ್ಚಿ ಅಲ್ಲಾಡುವಾಗ ಜಾತಿ ಜನಗಣತಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ಇದೊಂದು ಅವೈಜ್ಞಾನಿಕ ವರದಿ. ಒಕ್ಕಲಿಗ, ವೀರಶೈವ ಸಮಾಜ ಸೇರಿ ಬೇರೆಬೇರೆ ಸಮಾಜಗಳೂ ಅದನ್ನು ವಿರೋಧಿಸಿವೆ ಎಂದು ತಿಳಿಸಿದ ಅವರು, ಜಾತಿ ಗಣತಿ ಸಂಬಂಧಿತ ವರದಿಯ ಮಾಹಿತಿಗಳು ಸೋರಿಕೆ ಆಗಿವೆ. ಅದರ ಆಧಾರದಲ್ಲಿ ಹೇಳುವುದಾದರೆ ರಾಜಕೀಯ ಪಿತೂರಿ ಇದರ ಹಿಂದೆ ಇರುವುದು ಗೋಚರವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದರು.