ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mysuru Dasara 2026: ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದೇ ದಸರಾ: ಸಿಎಂ ಡಿಕೆಶಿ

ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಬದುಕಿನ ಸ್ಮರಣೀಯ ಕ್ಷಣ. ಇವತ್ತು ಚಾಮುಂಡಿಯ ದರ್ಶನ ಪಡೆದು, ಶ್ರೀಗಳ ಕೈಯಲ್ಲಿ ದಸರಾ ಉದ್ಘಾಟನೆ ಮಾಡಿಸಿರುವುದು ನನಗೆ ಸಿಕ್ಕ ಭಾಗ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು‌ ಹೇಳಿದರು.

ಮೈಸೂರು: ಅಜ್ಞಾನದ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆಯುವುದು ಅಕ್ಷರ, ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದು ಈ ದಸರಾ (Mysuru Dasara 2026) ಆಗಿದೆ. ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಶ್ರೀಗಳು ದಸರಾ ಉದ್ಘಾಟನೆ ಮಾಡಿ, ಹೊಸ ಶಕ್ತಿ, ಹೊಸ ಹುರುಪು ನೀಡಿ ನಾಡಹಬ್ಬಕ್ಕೆ ಹೊಸ ಮೆರುಗು ತಂದಿದ್ದಾರೆ. ಇದಕ್ಕಾಗಿ ನಾನು ಅವರ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಅರ್ಪಿಸಲು ಬಯಸುವೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ (CM DK Shivakumar) ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದು ನನ್ನ ಬದುಕಿನ ಸ್ಮರಣೀಯ ಕ್ಷಣ. ಇವತ್ತು ಚಾಮುಂಡಿಯ ದರ್ಶನ ಪಡೆದು, ಶ್ರೀಗಳ ಕೈಯಲ್ಲಿ ದಸರಾ ಉದ್ಘಾಟನೆ ಮಾಡಿಸಿರುವುದು ನನಗೆ ಸಿಕ್ಕ ಭಾಗ್ಯ ಎಂದು ಹೇಳಿದರು.



ದಸರಾ ನಾಲ್ಕು ವಿಚಾರ ಜ್ಯೋತಿಗಳ ಸಂಗಮದ ಹಬ್ಬ ಎಂದು ಶ್ರೀಗಳು ನಮ್ಮ ಗಮನ ಸೆಳೆದಿದ್ದಾರೆ. ಚಾಮುಂಡಿ ಶಕ್ತಿಯ ಜ್ಯೋತಿ, ಶ್ರೀಗಳ ಅರಿವಿನ ಜ್ಯೋತಿ, ದಸರಾ ಸಂಸ್ಕೃತಿಯ ಜ್ಯೋತಿ ಹಾಗೂ ಸರ್ಕಾರದ ಸಮಾನತೆಯ ಜ್ಯೋತಿ, ಇದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಶಕ್ತಿಯಿಂದ ಸಾಧನೆ, ಅರಿವಿನಿಂದ ಅಭಿವೃದ್ಧಿ, ಸಂಸ್ಕೃತಿಯಿಂದ ಸಮಾನತೆ, ಸಮಾನತೆಯಿಂದ ಶಾಂತಿ ಎಂದು ಹೇಳಲು ನನಗೆ ಸಂತೋಷವಾಗುತ್ತೆ. ಅದಕ್ಕೆ ಕುವೆಂಪು ಅವರ ಶಾಂತಿಯ ತೋಟದ ಗೀತೆಯನ್ನು ವೇದಿಕೆಯಲ್ಲಿ ಹಾಡಲಾಗಿದೆ ಎಂದು ಹೇಳಿದರು.

ಕೊಪ್ಪಳ ಗವಿ ಶ್ರೀಗಳ ಮಠ ಎಂದರೆ ಸರ್ವಜನಾಂಗದ ಶಾಂತಿಯ ಮಠ. ಬರವನ್ನು ಎದುರಿಸಲು ಜಲದೀಕ್ಷೆ ನೀಡುವ ಭಗೀರಥರು ಶ್ರೀಗಳು, ನೀರನ್ನು ವ್ಯರ್ಥ ಮಾಡುವುದು ಮುಂದಿನ ಪೀಳಿಗೆಯ ರಕ್ತ ಹೀರಿದಂತೆ ಎಂದು ಶ್ರೀಗಳು ಈ ಹಿಂದೆ ಹೇಳಿರುವುದನ್ನು ನೆನೆಯಲು ಬಯಸುವೆ. ಇಡೀ ರಾಜ್ಯಕ್ಕೆ ಈಗ ಜಲದೀಕ್ಷೆ ಬೇಕಾಗಿದೆ ಎಂದರು.

ದೇವರು ದೇವಸ್ಥಾನದಲ್ಲಿ ಕಾಣುವುದು ಭಕ್ತಿ, ದೇವರನ್ನು ಮನುಷ್ಯನಲ್ಲಿ ಕಾಣುವುದು ಮಾನವೀಯತೆ. ಇನ್ನು ಹಬ್ಬ ಇದ್ದ ಕಡೆ ಸಂಸ್ಕೃತಿ ಇರುತ್ತೆ, ಸಂಸ್ಕೃತಿ ಇದ್ದ ಕಡೆ ಸರಸ್ವತಿ ಇರುತ್ತಾಳೆ, ಸರಸ್ವತಿ ಇರುವ ಕಡೆ ಕಲೆ ಇರುತ್ತದೆ. ಕಲೆ ಇದ್ದ ಕಡೆ ಬೆಲೆ ಇರುತ್ತದೆ, ಅದಕ್ಕೆ ಇವತ್ತಿನ ದಸರಾ ಸಾಕ್ಷಿಯಾಗಿದೆ ಎಂದು ಹೇಳಿದರು.