ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ (Mysuru Dasara 2025) ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸಾಹಿತಿ ಬಾನು ಮುಷ್ತಾಕ್ ಅವರು ಸೋಮವಾರ ಬೆಳಗ್ಗೆ ಉದ್ಘಾಟಿಸಿದರು. ಇದಕ್ಕೂ ಮೊದಲು ಅವರು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಿಎಂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟದಲ್ಲಿ ಈಡುಗಾಯಿ ಒಡೆದರು. ಅರ್ಚಕರು ಪೂಜೆ ಸಲ್ಲಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಬಾನು ಮುಷ್ತಾಕ್ ಅವರಿಗೆ ಸನ್ಮಾನಿಸಿದರು. ನಾಡದೇವಿಗೆ ಬಾನು ಮುಷ್ತಾಕ್ ಅವರು ಪೂಜೆ ಸಲ್ಲಿಸಿ ಭಕ್ತಿಯಿಂದ ಭಾಗಿಯಾಗಿ ಮಹಾಮಂಗಳಾರತಿ ಸ್ವೀಕರಿಸಿದರು. ದೇವಿಯ ದರ್ಶನ ಪಡೆದು ಭಾವುಕರಾದರು.
ಹಸಿರು ಬಾರ್ಡರ್ ಇರುವ ಹಳದಿ ಮೈಸೂರು ರೇಷ್ಮೆ ಸೀರೆ, ತಲೆಗೆ ಮೈಸೂರು ಮಲ್ಲಿಗೆ ಮುಡಿದು ಬಾನು ಮುಷ್ತಾಕ್ ದೇವಸ್ಥಾನಕ್ಕೆ ಆಗಮಿಸಿದ್ದರು.
ಈ ವೇಳೆ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಸಚಿವ ಎಚ್ ಸಿ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ, ಸಚಿವ ವೆಂಕಟೇಶ್, ಶಾಸಕ ಜಿಟಿ ದೇವೇಗೌಡ, ಹರೀಶ್ ಗೌಡ ತನ್ವೀರ್ ಸೇಟ್ ಅನಿಲ್ ಚಿಕ್ಕಮಾದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಮೈಸೂರು ಜಿಲ್ಲೆಯ ಪ್ರಮುಖ ನಾಯಕರು ಉಪಸ್ಥಿತರಿದ್ದರು.