ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (S Janaki) ಅವರ ಅಂತ್ಯಸಂಸ್ಕಾರ ಸಾವಿರಾರು ಜನರ ಸಮ್ಮುಖದಲ್ಲಿ ಮೈಸೂರು ಜಿಲ್ಲೆ ಎಚ್.ಡಿ. ಕೋಟೆಯ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದ ತೋಟದಲ್ಲಿ ಭಾನುವಾರ ಸಂಜೆ ನೆರವೇರಿತು. ಜಾನಕಿ ಅವರ ಆಸೆಯಂತೆ ತಮ್ಮ ತೋಟದಲ್ಲೇ ಅಂತ್ಯಕ್ರಿಯೆ ಮಾಡಲಾಗಿದೆ.
ತೆಲುಗು ಬ್ರಾಹ್ಮಣ ಸಂಪ್ರದಾಯ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ಜಾನಕಿ ಅವರ ಮೊಮ್ಮಗಳು ಅಪ್ಸರಾ ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು.

ಇದಕ್ಕೂ ಮುನ್ನ ಜಾನಕಿ ಅವರಿಗೆ ಜಿಲ್ಲಾಡಳಿತದಿಂದ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಸರ್ಕಾರದ ಪರವಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅಂತಿಮ ನಮನ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಪೊಲೀಸರಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಮೃತರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು.
S Janaki: ದಕ್ಷಿಣ ಭಾರತದ ಗಾನ ಕೋಗಿಲೆ ಎಸ್ ಜಾನಕಿ ಮೊದಲ ಹಾಡು ಹಾಡಿದ್ದು ಯಾವಾಗ?

ಇನ್ನು ಬೆಳಗ್ಗೆಯಿಂದ ಸಂಜೆವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಗೀತ ನಿರ್ದೇಶಕ ಹಂಸಲೇಖ, ಗಾಯಕ ವಿಜಯ್ ಪ್ರಕಾಶ್, ನಟಿ ಜಯಮಾಲಾ, ತಾರಾ, ಉಮಾಶ್ರೀ, ಗಾಯಕಿ ಕೆ.ಎಸ್. ಚಿತ್ರ, ಗಾಯಕ ರಾಜೇಶ್ ಕೃಷ್ಣನ್, ನಟ ಶ್ರೀನಾಥ್, ವಿನೋದ್ ರಾಜ್, ಸಾಧು ಕೋಕಿಲ, ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಸೇರಿ ವಿವಿಧ ಗಣ್ಯರು, ಸಾವಿರಾರು ಅಭಿಮಾನಿಗಳು ಅಂತಿಮ ದರ್ಶನ ಪಡೆದರು.

ನಂತರ ಮಹಾರಾಜ ಕಾಲೇಜು ಮೈದಾನದಿಂದ ಕಣಿಯನಹುಂಡಿವರೆಗೆ ವಾಹನದಲ್ಲಿ ಅಂತಿಮ ಯಾತ್ರೆ ನಡೆಯಿತು. ಬಳಿಕ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಕನ್ನಡ ಸೇರಿ 17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಖ್ಯಾತ ಗಾಯಕಿ ಎಸ್. ಜಾನಕಿ (88) ಅವರು ವಯೋಸಹಜ ಕಾಯಿಲೆಯಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದರು. ಇವರು ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇವರ ಪೂರ್ಣ ಹೆಸರು ಸಿಸ್ಟ್ಲಾ ಶ್ರೀರಾಮಮೂರ್ತಿ ಜಾನಕಿ. 1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಲ ಗ್ರಾಮದಲ್ಲಿ ಜನಸಿದ ಅವರು ಬಾಲ್ಯದಲ್ಲೇ ಸಂಗೀತದತ್ತ ಆಕರ್ಷಿತರಾಗಿದ್ದರು.
S Janaki: ಸರ್ಕಾರ ಎಸ್. ಜಾನಕಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಿ: ಬಸವರಾಜ ಬೊಮ್ಮಾಯಿ
ಕೇವಲ 3ನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದ ಜಾನಕಿ ಪೈಡಿಸ್ವಾಮಿ ಎಂಬ ನಾದಸ್ವರ ವಿದ್ವಾನರಿಂದ ಸಂಗೀತದ ಮೂಲ ಪಾಠಗಳನ್ನು ಕಲಿತರು. ವಿಶೇಷ ಎಂದರೆ ಯಾವುದೇ ಶಾಸ್ತ್ರೀಯ ಸಂಗೀತದ ಔಪಚಾರಿಕ ತರಬೇತಿಯನ್ನು ಪೂರ್ತಿಯಾಗಿ ಪಡೆಯದಿದ್ದರೂ ಹಲವು ದಶಕಗಳ ಕಾಲ ಸಂಗೀತ ಲೋಕವನ್ನು ಅಕ್ಷರಶಃ ಆಳಿದ್ದರು. ಇವರ ನಿಧನಕ್ಕೆ ಚಿತ್ರರಂಗ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.