ಮೈಸೂರು: ಕಳೆದ ಮೂರು ವರ್ಷಗಳ ಹಿಂದೆ ಸಿಎಂ ಆದಾಗ ಸಂಭ್ರಮದಿಂದ ಅಧಿಕಾರ ವಹಿಸಿಕೊಂಡಿದ್ದ ಸಿದ್ದರಾಮಯ್ಯ ಅವರು, ನೆನ್ನೆ ಯಾವುದೇ ರಂಪ, ರಗಳೆ ಇಲ್ಲದೆ ಗೌರವಯುತವಾಗಿ ಸಿಎಂ ಕುರ್ಚಿಯಿಂದ ಕೆಳಗಿಳಿದಿದ್ದಾರೆ. ಈ ಸಮಯದಲ್ಲಿ ಅವರ ವಿರುದ್ಧ ಯಾವುದೇ ಟೀಕೆ ಮಾಡಲ್ಲ. ರಾಜಕೀಯದ ಕಡೆಯ ಕಾಲಘಟ್ಟದಲ್ಲಿ ಇರುವ ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಬಗ್ಗೆ ಅವರು ಪ್ರತಿಕ್ರಿಯಿಸಿ, ಕಳೆದ ಮೂರು ವರ್ಷಗಳಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಿದ್ದರಾಮಯ್ಯ ಅವರು ನೆನ್ನೆ ರಾಜೀನಾಮೆ ನೀಡಿದ್ದಾರೆ. ಮಾಧ್ಯಮಗಳ ವರದಿಯಂತೆ ಒಂದೆರಡು ದಿನಗಳಲ್ಲಿ ಡಿಕೆ ಶಿವಕುಮಾರ್ ಅವರು ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಈವರೆಗೂ ಸಿದ್ದರಾಮಯ್ಯ ಸಾಹೇಬರ ಸರ್ಕಾರದ ಆಡಳಿತ ವೈಖರಿ ಬಗ್ಗೆ ಸಾಕಷ್ಟು ಟೀಕೆ ಟಿಪ್ಪಣಿ ಮಾಡಿದ್ದೇನೆ. ಆದರೆ, ಅವರು ರಾಜೀನಾಮೆ ನೀಡಿ, ಕುರ್ಚಿಯನ್ನು ಡಿಕೆಶಿ ಅವರಿಗೆ ಬಿಟ್ಟುಕೊಡುತ್ತಿರುವ ಸಂದರ್ಭದಲ್ಲಿ ನಾನು ಅವರ ಬಗ್ಗೆ ಏನೂ ಟೀಕೆ ಅಪದ್ದದ ಮಾತು ಆಡುವುದಿಲ್ಲ ಎಂದು ಹೇಳಿದ್ದಾರೆ.
Karnataka New CM: ನಾಳೆಯೇ ನೂತನ ಸಿಎಂ ಆಯ್ಕೆ; ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಲ್‌ಪಿ ಸಭೆ ನಿಗದಿ
ಇನ್ನು 2028ಕ್ಕೆ ಬಿಜೆಪಿ -ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತರಲು ರಾಜ್ಯದ ಜನ ಈಗಾಗಲೇ ನಿರ್ಧರಿಸಿದ್ದಾರೆ. ಮೂರು ವರ್ಷಗಳ ಸಿದ್ದರಾಮಯ್ಯ ಆಡಳಿತದ ಬಗ್ಗೆ ಜನರಿಗೆ ಅರಿವಿದೆ. ಅವರು ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಈ ಬಗ್ಗೆ ನಾನು ಮಾತನಾಡಲು ಇಷ್ಟಪಡಲ್ಲ. ಉಳಿದ ಎರಡು ವರ್ಷ ಡಿಕೆ ಶಿವಕುಮಾರ್ ಅವರು ಒಳ್ಳೆಯ ಆಡಳಿತ ನೀಡಲಿ ಎಂಬುವುದು ನಮ್ಮ ಆಶಾಭಾವನೆಯಾಗಿದೆ ಎಂದು ತಿಳಿಸಿದ್ದಾರೆ.