ಮೈಸೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆಯಾಗಿರುವ ಘಟನೆ ಮೈಸೂರಿನ (Mysuru News) ಸರಸ್ವತಿಪುರಂನಲ್ಲಿ ನಡೆದಿದೆ. ಆದರೆ, ಪತಿಯ ಕುಟುಂಬಸ್ಥರ ವಿರುದ್ಧ ಗೃಹಿಣಿಯ ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ಸಂಧ್ಯಾ (30) ಮೃತ ದುರ್ದೈವಿ.
ಈಕೆ ಹುಣಸೂರು ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಅವರ ಪುತ್ರಿ. ಮೈಸೂರು ನಗರದ ಸರಸ್ವತಿ ಪುರಂ ಜವರೇಗೌಡ ಪಾರ್ಕ್ ಸಮೀಪದಲ್ಲಿ ವಾಸವಿದ್ದರು. ಸಂಧ್ಯಾ ಅವರನ್ನ ಟಿ.ಕೆ ಬಡಾವಣೆ ನಿವಾಸಿ ಮಹದೇವ್ ಅವರ ಪುತ್ರ ಅಕ್ಷಯ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಪತಿ-ಪತ್ನಿ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು.
ಸದ್ಯ ಏಕಾಏಕಿ ನೇಣು ಬಿಗಿದ ಸ್ಥಿತಿಯಲ್ಲಿ ಮಗಳ ಶವ ಪತ್ತೆಯಾಗಿರುವುದು ಪೋಷಕರಲ್ಲಿ ಆಘಾತ ತರಿಸಿದೆ. ನನ್ನ ಮಗಳನ್ನು ಅಳಿಯನೇ ಕೊಂದು ಫ್ಯಾನ್‌ಗೆ ನೇತು ಹಾಕಿದ್ದಾನೆ ಎಂದು ಮೃತ ಮಹಿಳೆಯ ತಾಯಿ ಆರೋಪ ಮಾಡಿದ್ದಾರೆ. ಪೋಷಕರು ಪತಿ ಕುಟುಂಬದ ವಿರುದ್ಧವೇ ಕೊಲೆ ಆರೋಪ ಮಾಡಿ ದೂರು ನೀಡಿದ ಹಿನ್ನೆಲೆ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಂಸ್ಟೇನಲ್ಲಿ ಗೀಸರ್ ಗ್ಯಾಸ್ ಸೋರಿಕೆಯಾಗಿ ಮೈಸೂರಿನ ಯುವತಿ ಸಾವು
ಮಡಿಕೇರಿ: ಹೋಂಸ್ಟೇ ಬಾತ್‌ರೂಮ್‌ನಲ್ಲಿ ಗೀಸರ್ ಗ್ಯಾಸ್ ಸೋರಿಕೆಯಿಂದಾಗಿ ಮೈಸೂರಿನ ಯುವತಿ ಮೃತಪಟ್ಟಿರುವ ಘಟನೆ ಕೊಡಗಿನ ಸೋಮವಾರಪೇಟೆಯಲ್ಲಿ ನಡೆದಿದೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ ವಿನೂತ (27) ಮೃತ ಯುವತಿ.
ಕೊಡಗಿಗೆ ಪ್ರವಾಸ ಬಂದಿದ್ದ ಈಕೆ ಸೋಮವಾರಪೇಟೆಯ ಚೌಡ್ಲು ಗ್ರಾಮದ ಹೋಂಸ್ಟೆ ಅಲ್ಲಿ ತಂಗಿದ್ದರು. ಭಾನುವಾರ ಬೆಳಗ್ಗೆ ಸ್ನಾನ ಮಾಡಲು ಬಾತ್‌ರೂಮಿಗೆ ತೆರಳಿದ್ದ ಸಂದರ್ಭದಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.