ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಧಾನ ಪರಿಷತ್ ಚುನಾವಣೆ ಫಲಿತಾಂಶ 130 ಕ್ಷೇತ್ರದ ಮತದಾರರು ಕೊಟ್ಟಿರುವ ತೀರ್ಪು: ಕಾಂಗ್ರೆಸ್‌ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟಾಂಗ್‌

B.Y. Vijayendra: ಬಿಜೆಪಿಗೆ ಒಳ್ಳೆಯ ದಿನಗಳು ಶುರುವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಸಂತಸ ಹಂಚಿಕೊಂಡರು.

ಬಿ.ವೈ. ವಿಜಯೇಂದ್ರ (ಸಂಗ್ರಹ ಚಿತ್ರ)

ಮೈಸೂರು, ಅ. 28: ಬಿಜೆಪಿಗೆ ಒಳ್ಳೆಯ ದಿನಗಳು ಶುರುವಾಗಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಬುಧವಾರ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆಯನ್ನು ಅಳಿಸಿ’ ಶೀರ್ಷಿಕೆಯಡಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಸಂತಸ ಹಂಚಿಕೊಂಡಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ 23 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ. ಸೋಲಿಲ್ಲದ ಸರದಾರ ಎಂದು ಮೆರೆಯುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು 900ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರಿಗೆ, ಬಿಜೆಪಿ-ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ನ. 2ರಂದು ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ: ವಿಜಯೇಂದ್ರ

ಹಗರಣಗಳ ಆಡಳಿತ

ಈ ಫಲಿತಾಂಶ ನಾನಾ ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಭ್ರಮೆಯಲ್ಲಿದೆ. ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ನಾಡಿನ ರೈತರ ಜೊತೆ ಚೆಲ್ಲಾಟವಾಡಿ ಒಂದೇ ಒಂದು ಕೆಲಸ ಮಾಡಿಲ್ಲ. ಬರಗಾಲದ ಪರಿಹಾರ ಕೊಡಲು ಸಾಧ್ಯವಾಗಿಲ್ಲ, ಉದ್ಯೋಗ ಕೊಡಲು ಆಗುತ್ತಿಲ್ಲ. ಮುಡಾ ಹಗರಣ, ವಾಲ್ಮೀಕಿ ಹಗರಣ, ಸಚಿವರ ರಾಜೀನಾಮೆ ಇದೇ ಕಾಂಗ್ರೆಸ್ ಆಡಳಿತ. ಬಳ್ಳಾರಿ ಚಲೋ ಮೂಲಕ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ದೇವೆ. ನಮ್ಮ ಹೋರಾಟದ ಪರಿಣಾಮ ಜನರು ಈ ಬಾರಿ ಎನ್‌ಡಿಎ ಸರ್ಕಾರ ತರಲು ಚಿಂತನೆ ನಡೆಸಿದ್ದಾರೆ ಎಂದಿದ್ದಾರೆ.

120ರಿಂದ 130 ಕ್ಷೇತ್ರಗಳ ಮತದಾರರ ತೀರ್ಪಿದು

ಈ ಚುನಾವಣೆ ಫಲಿತಾಂಶ 120ರಿಂದ 130 ಕ್ಷೇತ್ರದ ಮತದಾರರು ಕೊಟ್ಟಿರುವ ತೀರ್ಪು. ಸಿಎಂ ಮತ್ತು ಡಿಸಿಎಂ ಕಪಟ ನಾಟಕ ಆಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಬುಡಸಮೇತ ಕಿತ್ತು ಹಾಕುವ ತೀರ್ಮಾನಕ್ಕೆ ಜನ ಬಂದಿದ್ದಾರೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಹದಗೆಟ್ಟಿದೆ. ಇದು ಮೊದಲು ಅಧಿಕಾರ ಬಿಟ್ಟು ಹೋಗಿ ಎಂಬ ಸಂದೇಶ. ಬಿಜೆಪಿಗೆ ಆಶೀರ್ವಾದ ಮಾಡಲು ಮತದಾರರು ಸಿದ್ಧರಾಗಿದ್ದಾರೆ. ನಿಮ್ಮ ಸಣ್ಣಪುಟ್ಟ ಗೊಂದಲ ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಹೋಗಿ ಎಂಬ ಸಂದೇಶವನ್ನು ಜನರು ಬಿಜೆಪಿಗೂ ಕೊಟ್ಟಿದ್ದಾರೆ ಎಂದು ನುಡಿದರು.

ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನ

ಪ್ರಧಾನಿಯಾಗುವ ಆಸೆಗೆ ರಾಹುಲ್ ಗಾಂಧಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದಾರೆ. ಈ ಚುನಾವಣೆ ಅವರಿಗೂ ಸ್ಪಷ್ಟ ಸಂದೇಶ. ಬ್ಯಾಲಟ್ ಪೇಪರ್ ಬಳಸಿ ನಡೆಸಿದ ಈ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಗೆ ಯಾವುದರ ಮೇಲೂ ನಂಬಿಕೆ ಇಲ್ಲ. ಈ ಫಲಿತಾಂಶವನ್ನು ಸಿಎಂ, ಡಿಸಿಎಂ ಮತ್ತು ರಾಹುಲ್ ಗಾಂಧಿಗೆ ತಲುಪಿಸಬೇಕು. ಮುಂದಿನ ಬಾರಿ ರಾಜ್ಯದಲ್ಲಿ ಎನ್.ಡಿ.ಎ ಸರ್ಕಾರ ಬರುವುದು ಖಚಿತ. ಇದನ್ನು ತಡೆಯಲು ಯಾವುದೇ ಕೆಟ್ಟ ಶಕ್ತಿಗಳಿಗೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ

ರಾಜ್ಯದಲ್ಲಿ ಬರವಿದೆ, ಪರಿಹಾರ ಘೋಷಣೆ ಮಾಡಿದರೂ ಅದು ಘೋಷಣೆಯಾಗಿ ಉಳಿದಿದೆ. ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಕೊಡುತ್ತಾರೆ ಎಂದು ಜನ ಕಾಯುತ್ತಿದ್ದರು. ವಿಶೇಷ ವಿಮಾನದಲ್ಲಿ ಸಿಎಂ ಬೆಳಗಾವಿಗೆ ಹೋಗಿ, ಬೊಕ್ಕಸದಲ್ಲಿ ಹಣ ಇಲ್ಲ, ನಮಗೆ ಸಮಯ ಕೊಡಿ ಎಂದಿದ್ದಾರೆ. ಇದು ನಾಚಿಕೆಗೇಡು. ಇದನ್ನು ಹೇಳಲು ವಿಶೇಷ ವಿಮಾನದಲ್ಲಿ ಹೋಗಬೇಕಿತ್ತಾ? ಕಬ್ಬಿನಿಂದ ರಾಜ್ಯಕ್ಕೆ ದೊಡ್ಡ ಆದಾಯ ಬರುತ್ತಿದೆ. ಕಬ್ಬಿನ ಉಪ ಉತ್ಪನ್ನಗಳಿಂದ ಲಾಭ ಬರುತ್ತಿದೆ. ಪ್ರತಿ ಟನ್ ಕಬ್ಬಿಗೆ 9,234 ರೂಪಾಯಿ ರಾಜ್ಯ ಸರ್ಕಾರಕ್ಕೆ ಬರುತ್ತದೆ. ಪ್ರತಿ ವರ್ಷ 15 ಸಾವಿರ ಕೋಟಿ ಆದಾಯ ಕಬ್ಬಿನಿಂದ ಬರುತ್ತಿದೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಬಿಟ್ಟು, ರೈತರಿಗೆ 500 ರೂಪಾಯಿ ಪ್ರೋತ್ಸಾಹ ಧನ ನೀಡಿ, ರೈತರ ಜೀವನದ ಜೊತೆ ಚೆಲ್ಲಾಟ ಆಡುವುದನ್ನು ಬಿಡಿ ಎಂದು ಸಿಎಂ ಮತ್ತು ಡಿಸಿಎಂಗೆ ಸಲಹೆ ನೀಡಿದ್ದಾರೆ.

130 ಸ್ಥಾನ- ಇದು ಆತ್ಮವಿಶ್ವಾಸ ನುಡಿ

ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾಲಿಗೆ ಹರಿಬಿಟ್ಟವರಿಗೆ ಜನ ಬುದ್ಧಿ ಕಲಿಸುತ್ತಾರೆ. ನಿನ್ನೆಯ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ. ನಾವು 130 ಸೀಟು ಗೆಲ್ಲುತ್ತೇವೆ. ಇದು ಅಹಂಕಾರದ ಮಾತಲ್ಲ, ಆತ್ಮವಿಶ್ವಾಸದ ಮಾತು ಎಂದು ಹೇಳಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರಕ್ಕೆ, ವಿಜಯೇಂದ್ರಗೆ ಶಕ್ತಿ ಕೊಟ್ಟಿದ್ದು ಮೈಸೂರು ಜಿಲ್ಲೆ, ವರುಣಾ ಕ್ಷೇತ್ರ ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟಿದೆ. ಮುಂದೆ ವರುಣಾದಲ್ಲಿ ನಿಲ್ಲುತ್ತೀರಾ ಎಂಬ ಪ್ರಶ್ನೆಗೆ ಕಾದು ನೋಡಿ, ಸಮಯ ಉತ್ತರ ಕೊಡುತ್ತದೆ ಎಂದು ತಿಳಿಸಿದ್ದಾರೆ.

ಸಿಜೆಪಿಗೆ ಕಾಂಗ್ರೆಸ್‌ನಿಂದ ಹಣಕಾಸು ನೆರವು: ಬಿ.ವೈ. ವಿಜಯೇಂದ್ರ ವಾಗ್ದಾಳಿ

ಯದುವಂಶಸ್ಥರ ಅಪಮಾನ ಸರಿಯಲ್ಲ

ರಾಜಮನೆತನದ ಬಗ್ಗೆ ಸಚಿವ ಯತೀಂದ್ರ ಹೇಳಿಕೆ ವಿಚಾರಕ್ಕೆ, ಈ ರೀತಿಯ ಹೇಳಿಕೆ ನೀಡುವುದು ಅಕ್ಷಮ್ಯ ಅಪರಾಧ. ಮಾಜಿ ಸಿಎಂ ಪುತ್ರ ಯತೀಂದ್ರ ಅವರ ಹೇಳಿಕೆ ಖಂಡನೀಯ. ಯದುವಂಶಸ್ಥರನ್ನು ಅಪಮಾನ ಮಾಡುವುದು ಸರಿಯಲ್ಲ. ಇದು ಉದ್ಧಟತನ, ಅವಿವೇಕತನದ ಹೇಳಿಕೆ. ಇದು ನೀಚತನದ ಪರಮಾವಧಿ. ಸ್ವಲ್ಪವಾದರೂ ಗೌರವವಿದ್ದರೆ ಮುಖ್ಯಮಂತ್ರಿ ಮತ್ತು ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲರೂ ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ, ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಎಂ. ರಾಜೇಂದ್ರ, ಮೈಸೂರು ನಗರ ಜಿಲ್ಲಾಧ್ಯಕ್ಷ ಎಲ್. ನಾಗೇಂದ್ರ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಕೆ. ಸುಬ್ಬಣ್ಣ, ಮಾಜಿ ಶಾಸಕ ಹರ್ಷವರ್ಧನ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author