ಮೈಸೂರು, ಮೇ 17: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರು, ಕಳೆದ ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ನಿಮ್ಮ ಸರಕಾರವು ಎಷ್ಟು ಸಲ ಬೆಲೆ ಏರಿಕೆ ಮಾಡಿದೆ? ಯಾವ ಯಾವ ಬಾಬತ್ತುಗಳು ಮೇಲೆ ಎಷ್ಟೆಷ್ಟು ತೆರಿಗೆ ವಿಧಿಸಿದೆ ಎಂಬ ಬಗ್ಗೆ ಜನರಿಗೆ ಹೇಳಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy ) ಅವರು ನೇರ ಸವಾಲು ಹಾಕಿದರು.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನರೊಂದಿಗೆ ಜನತಾದಳ ಮತ್ತು ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಳೆದ ಮೂರು ವರ್ಷಗಳಲ್ಲಿ ಮದ್ಯ, ಬಸ್, ವಿದ್ಯುತ್ ಸೇರಿ ಅನೇಕ ಬಾಬತ್ತುಗಳ ಮೇಲೆ ನಿರಂತರವಾಗಿ ತೆರಿಗೆವಿಧಿಸಿ ಬೆಲೆ ಏರಿಕೆ ಮಾಡಲಾಗಿದೆ. ಒಂದೆಡೆ ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಜನರ ಮೂಗಿಗೆ ತುಪ್ಪ ಸವದುತ್ತಿರುವ ಸರ್ಕಾರವು ಮತ್ತೊಮ್ಮೆ ಅದಕ್ಕೂ ಮೀರಿ ಬೆಲೆ ಏರಿಕೆ ಮಾಡುತ್ತಿದೆ. ಎಷ್ಟು ಬಾರಿ ತೆರಿಗೆ ಹೇರಿಕೆ, ಬೆಲೆ ಏರಿಕೆ ಮಾಡಿದ್ದೇವೆ ಎಂಬ ಬಗ್ಗೆ ಕಾಂಗ್ರೆಸ್ ಸರ್ಕಾರ ಪಟ್ಟಿ ನೀಡಲಿ ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರು ರಾಜ್ಯದ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. ಬರುವ 19ರಂದು ಸಾಧನಾ ಸಮಾವೇಶ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರು ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆಯ ಬಗ್ಗೆ ಆಲೋಚನೆ ಮಾಡಲಿ ಎಂದು ಕೇಂದ್ರ ಸಚಿವರು ಹರಿಹಾಯ್ದರು.
ಅಮೆರಿಕ, ಇಸ್ರೇಲ್ ಜತೆಗೂಡಿ ಇರಾನ್ ಮೇಲೆ 60 ದಿನಗಳ ಕಾಲ ಯುದ್ಧ ಮಾಡಿದ್ದರಿಂದ ತೈಲ ಸರಬರಾಜು ಬಿಕ್ಕಟ್ಟು ಉಂಟಾಗಿದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಮುಂದುವರೆದ ದೇಶ ಎಂದು ಗುರುತಿಸಿಕೊಂಡಿರುವ ಸಿಂಗಾಪುರದಲ್ಲಿ ಪೆಟ್ರೋಲ್ ಬೆಲೆ ₹245 ಇದೆ ಎಂಬುದನ್ನು ಕಾಂಗ್ರೆಸ್ ನಾಯಕ ಕಣ್ತೆರೆದು ನೋಡಬೇಕು. ಯುದ್ಧದಿಂದ ಜಗತ್ತಿನ ಎಲ್ಲಾ ದೇಶಗಳು ತೈಲ ಬಿಕ್ಕಟ್ಟು ಎದುರಿಸುತ್ತಿವೆ. ಯುದ್ಧ ನಡೆಯುತ್ತದೆ ಎಂದು ಯಾರಿಗಾದರೂ ಮೊದಲೇ ಕನಸು ಬಿದ್ದಿರುತ್ತದಾ? ಇದರ ಕನಸು ಬಿದ್ದಿದ್ದರೆ ಕಾಂಗ್ರೆಸ್ ನಾಯಕರು ಹೇಳಲಿ. ಒಂದು ವೇಳೆ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿ ಇದ್ದಿದ್ದರೆ ಏನು ಮಾಡುತ್ತಿತ್ತು? ಎಂದು ಸಚಿವ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ:
ತಮ್ಮ ಭಾಷಣದ ಉದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು; ನಾನು ಪ್ರಚಾರಕ್ಕಾಗಿ ನೊಂದ ಜನರಿಗೆ ನೆರವು ನೀಡುತ್ತಿಲ್ಲ. ಗ್ಯಾರಂಟಿಗಳಿಂದ ಜನರು ನೆಮ್ಮದಿಯಿಂದ ಇದ್ದಾರೆಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಅದು ತಪ್ಪು. ಕಾಂಗ್ರೆಸ್ ನಾಯಕರು ಪ್ರತಿದಿನ ನನ್ನ ಮನೆಯ ಬಳಿ ಬಂದು ನೋಡಿದರೆ ಜನರ ಸ್ಥಿತಿ ಯಾವ ರೀತಿ ಇದೆ ಎಂಬುದು ಮನವರಿಕೆ ಆಗುತ್ತದೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆ ಸನ್ನಿವೇಶವನ್ನು ಮೆಲುಕು ಹಾಕಿದ ಅವರು, "ಅಂದು ನಮ್ಮ ನಾಯಕರು ಎಚ್ಚರಿಕೆ ವಹಿಸಿದ್ದರೆ ಈ ರಾಜ್ಯಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ನಮ್ಮದೇ ಆದ ಕೆಲ ತಪ್ಪಿನಿಂದಲೇ ಅಂದು ಜೆಡಿಎಸ್ ಸೋಲನುಭವಿಸಿತು" ಎಂದು ಹೇಳಿದರು. ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಅವಿನಾಭಾವ ಸಂಬಂಧವಿದೆ ಎಂದರು.
75 ಕ್ಷೇತ್ರ ಗೆಲುವಿನ ಗುರಿ:
ಮುಂಬರುವ ವಿಧಾನಸಭೆ ಚುನಾವಣೆಗೆ ಸಜ್ಜಾಗುವಂತೆ ಈಗಲೇ ಕಾರ್ಯಕರ್ತರ ಪಡೆಗೆ ಕರೆ ಕೊಟ್ಟ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವ ಕುಮಾರಸ್ವಾಮಿ ಅವರು; ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು 75 ಕ್ಷೇತ್ರಗಳಲ್ಲಿ ಜಯ ಗಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, 2028ರ ಚುನಾವಣೆಯಲ್ಲೂ ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ ಎಂದರು.
ನಮ್ಮಲ್ಲಿ ಗೊಂದಲವಿಲ್ಲ, ಮುಂದೆ ಚಾಮುಂಡೇಶ್ವರಿ ಕ್ಷೇತ್ರ ಗೆಲ್ಲುತ್ತೇವೆ:
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಯಾವುದೇ ಒತ್ತಡಗಳಿಗೆ ಮಣಿಯುವುದಿಲ್ಲ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಟ್ಟು ಚಾಮುಂಡೇಶ್ವರಿ ಕ್ಷೇತ್ರ ಜೆಡಿಎಸ್ ಭದ್ರಕೋಟೆ ಎಂದು ಮನವರಿಕೆ ಮಾಡಿಕೊಡಲು ಸಮಾವೇಶ ಮಾಡಿದ್ದೇವೆ ಎಂದು ಅವರು ಒತ್ತಿ ಹೇಳಿದರು.
ನಮ್ಮ ಪಕ್ಷಕ್ಕೆ ಲಕ್ಷಾಂತರ ಮಂದಿ ನಿಷ್ಠಾವಂತ ಕಾರ್ಯಕರ್ತರು ಬೆನ್ನೆಲುಬಾಗಿದ್ದಾರೆ. ಕಾರ್ಯಕರ್ತರ ಶ್ರಮದ ಫಲವಾಗಿ ಇಂದಿಗೂ ಜೆಡಿಎಸ್ ಪ್ರಬಲವಾಗಿ ಉಳಿದಿದೆ ಎಂದ ಕೇಂದ್ರ ಸಚಿವರು; ಹಿಂದೆ ನಡೆದ ಇದೇ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆ ಸನ್ನಿವೇಶವನ್ನು ನೆನಪು ಮಾಡಿಕೊಂಡರು.
ಅಂದು ನಮ್ಮ ನಾಯಕರು ಎಚ್ಚರಿಕೆ ವಹಿಸಿದ್ದರೆ ಈ ರಾಜ್ಯಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ನಮ್ಮ ಕಡೆಯಿಂದ ಆದ ಕೆಲವು ತಪ್ಪುಗಳಿಂದ ಅಂದು ಜೆಡಿಎಸ್ ಪಕ್ಷಕ್ಕೆ ಸೋಲಾಯಿತು. ಚಾಮುಂಡೇಶ್ವರಿ ಕ್ಷೇತ್ರಕ್ಕೂ ನನಗೂ ಅವಿನಾಭಾವ ಸಂಬಂಧವಿದೆ.
ಈಗಿನ ಹಾಲಿ ಮುಖ್ಯಮಂತ್ರಿಗಳಿಗಿಂತ ನಾನು ಸಿಎಂ ಆಗಿದ್ದ ಅಲ್ಪಾವಧಿಯಲ್ಲಿ ಈ ಕ್ಷೇತ್ರಕ್ಕೆ ಅತಿಹೆಚ್ಚು ಅನುದಾನ ನೀಡಿದ್ದೇನೆ. ಯಾರನ್ನೋ ವಿರೋಧಿಸುವ ಸಲುವಾಗಿ ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಮಾವೇಶ ಮಾಡುತ್ತಿಲ್ಲ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಸಮಾವೇಶ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಪೇಟ ಕಟ್ಟಿ ಭಾಷಣ ಮಾಡಿದ ಹೆಚ್ಡಿಕೆ:
ಪೇಟ ಕಟ್ಟಿಕೊಂಡು ಭಾಷಣ ಮಾಡುತ್ತಿರುವುದು ನನಗೆ ಬಹಳ ಸಂತೋಷ ಉಂಟು ಮಾಡಿದೆ. ಹಾಲುಮತಸ್ಥರು, ಕುರುಬರಿಗೆ ಸಂದೇಶ ನೀಡುವ ಸಲುವಾಗಿ ಪೇಟ ಕಟ್ಟಿದ್ದೇನೆ. ಕುರುಬ ಸಮುದಾಯದ ಜೊತೆಗೆ ಜೆಡಿಎಸ್ ಕೂಡ ಇದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪೇಟ ಕಟ್ಟಿಕೊಂಡು ಮಾತನಾಡಿದ್ದೇನೆ. ಕುರುಬರು, ದಲಿತರು, ಅಲ್ಪಸಂಖ್ಯಾತರ ಪರವಾಗಿ ಜೆಡಿಎಸ್ ಕೆಲಸ ಮಾಡುತ್ತಿದೆ. ನಾನು ಪ್ರಚಾರಕ್ಕಾಗಿ ನೊಂದ ಜನರಿಗೆ ನೆರವು ನೀಡುತ್ತಿಲ್ಲ. ಅದನ್ನು ಆತ್ಮತೃಪ್ತಿಯಿಂದ ಕರ್ತವ್ಯ ಎಂದು ಭಾವಿಸಿ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.
Bidadi township: ಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರ ಪರ ಇಂದಿನಿಂದಲೇ ನನ್ನ ಹೋರಾಟ ಆರಂಭ: ಎಚ್.ಡಿ. ದೇವೇಗೌಡ ಘೋಷಣೆ
ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕರಾದ ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಮಹದೇವು, ಅಶ್ವಿನ್ ಕುಮಾರ್, ಮಾಜಿ ಮೇಯರ್ ರವಿ ಸೇರಿದಂತೆ ಅನೇಕ ಹಿರಿಯ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.