ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

NICE Road: ನೈಸ್ ಕಂಪನಿಯಿಂದ ಅಕ್ರಮವಾಗಿ 2,000 ಕೋಟಿಗೂ ಹೆಚ್ಚು ಟೋಲ್ ಸಂಗ್ರಹ: ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯ ಹೈಕೋರ್ಟ್ ನೈಸ್ ಯೋಜನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ಅದೊಂದು ದೊಡ್ಡ ಹಗರಣದಂತೆ ಕಾಣುತ್ತಿದೆ ಎಂದು ಹೇಳಿತ್ತು. ಈಗಲಾದರೂ ಈ ಸರ್ಕಾರಕ್ಕೆ ಜ್ಞಾನೋದಯ ಆಗಬೇಕು. ನೈಸ್ ಕಂಪನಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ. ದಯಮಾಡಿ ಯಾರೂ ಟೋಲ್ ಕಟ್ಟಬೇಡಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರು ಆಗಸ್ಟ್ 9: ಬೆಂಗಳೂರಿನ ನೈಸ್ ರಸ್ತೆಯಲ್ಲಿ (NICE Road Toll) ವಾಹನ ಸವಾರರು ಯಾವುದೇ ಕಾರಣಕ್ಕೂ ಟೋಲ್ ಕಟ್ಟಬಾರದು ಎಂದು ಕರೆ ನೀಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು (HD Kumaraswamy), ಇಷ್ಟು ವರ್ಷಗಳಲ್ಲಿ ನೈಸ್ ಕಂಪನಿ ₹2,000 ಕೋಟಿಗೂ ಹೆಚ್ಚು ಹಣವನ್ನು ಅಕ್ರಮವಾಗಿ ಟೋಲ್ ರೂಪದಲ್ಲಿ ವಸೂಲಿ ಮಾಡಿದೆ ಎಂದು ಆರೋಪಿಸಿದರು.

ಮೈಸೂರಿನಲ್ಲಿ ಭಾನುವಾರ ಬೆಳಗ್ಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ನೈಸ್ ಯೋಜನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಹಾಗೂ ಅದೊಂದು ದೊಡ್ಡ ಹಗರಣದಂತೆ ಕಾಣುತ್ತಿದೆ ಎಂದು ಹೇಳಿತ್ತು. ಈಗಲಾದರೂ ಈ ಸರ್ಕಾರಕ್ಕೆ ಜ್ಞಾನೋದಯ ಆಗಬೇಕು ಎಂದು ಆಗ್ರಹಿಸಿದರು.

ಬೆಂಗಳೂರು ನಗರದ ನಿವಾಸಿಗಳು ಹಾಗೂ ಆ ರಸ್ತೆಯಲ್ಲಿ ಸಂಚಾರ ಮಾಡುವ ಜನರನ್ನು ನಾನು ವಿನಂತಿ ಮಾಡುತ್ತೇನೆ. ದಯಮಾಡಿ ಯಾರೂ ಟೋಲ್ ಕಟ್ಟಬೇಡಿ. ನೈಸ್ ಕಂಪನಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ. ರಾಜ್ಯ ಸರ್ಕಾರದ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರೇ ಈ ಮಾತನ್ನು ನ್ಯಾಯಪೀಠಕ್ಕೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೈಪೋಟಿಯ ಮೇರೆಗೆ ಹೇಳಿಕೆ ನೀಡುತ್ತಿರುತ್ತಾರೆ. ಅವರು ಈ ಬಗ್ಗೆ ನೀಡಿರುವ ಹೇಳಿಕೆ ಬಾಲಿಶವಾಗಿದೆ. ಮಾಹಿತಿ ಇಲ್ಲದೆ ಬಾಯಿ ಚಪಲಕ್ಕೆ ಮಾತನಾಡುತ್ತಿದ್ದಾರೆ. ಕೇಂದ್ರ ಸರಕಾರ ಟೋಲ್ ಸಂಗ್ರಹ ಮಾಡುತ್ತಿಲ್ಲ. ಅದು ರಾಜ್ಯ ಸರಕಾರ ಅಧೀನದ ಯೋಜನೆ. ಅಲ್ಲಿ ಯಾರು ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂಬ ಅರಿವು ಪ್ರಿಯಾಂಕ್ ಖರ್ಗೆ ಅವರಿಗೆ ಇಲ್ಲ ಎಂದು ಸಚಿವರು ಕಟುವಾಗಿ ಟೀಕಿಸಿದರು.

ಜನರನ್ನು ಹೀಗೆ ವಂಚಿಸುವ ನೀವು ಮುಂದಿನ ಚುನಾವಣೆಯಲ್ಲಿ ಸರ್ವನಾಶವಾಗುತ್ತೀರಿ, ಹುಷಾರ್ ಎಂದು ಕಾಂಗ್ರೆಸ್ ನಾಯಕರನ್ನು ಎಚ್ಚರಿಸಿದ ಸಚಿವ ಕುಮಾರಸ್ವಾಮಿ ಅವರು; ಯೋಜನೆಗಳಿಂದ ದುಡ್ಡು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ಯಾಮಾರಿಸಿ ಮೋಸ ಮಾಡುತ್ತಿದ್ದಾರೆ. ಜನರು ನಂಬುವ ಹಾಗೇ ಬಣ್ಣಬಣ್ಣದ ಜಾಹೀರಾತುಗಳನ್ನು ಕೊಟ್ಟು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಿಡದಿಯ ಭೂಮಿ ಫಲವತ್ತಾದ ಭೂಮಿ ಎಂದು ಕಾಂಗ್ರೆಸ್ ಸತ್ಯಸೋಧನಾ ಸಮಿತಿ ವರದಿಯಲ್ಲಿ ಬರೆಯಲಾಗಿದೆ. ಬಿಡದಿ ಟೌನ್ಶಿಪ್ ಯೋಜನೆಯನ್ನು ನಿಲ್ಲಿಸುವುದಾಗಿ 2007ರಲ್ಲಿ ನಾನೇ ಸದನದಲ್ಲಿ ಹೇಳಿದ್ದೇನೆ. ಆದರೆ, ಅಂದು ವಿರೋಧಿಸಿದ್ದ ಅಂದಿನ ಶಾಸಕ, ಇಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡದಿ ಭೂಮಿ ಲೂಟಿ ಮಾಡಲು ಹೊರಟಿದ್ದಾರೆ. ನಾನು ದಾಖಲೆಗಳನ್ನು ಇಟ್ಟುಕೊಂಡು ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.

ರಾಜ್ಯ ಸಚಿವ ಸಂಪುಟದಲ್ಲಿ ಕೆಲ ಸಚಿವರನ್ನು ಕುಮಾರಸ್ವಾಮಿಯನ್ನು, ಜೆಡಿಎಸ್ ಪಕ್ಷವನ್ನು ಬೈಯಲು ಇಟ್ಟುಕೊಂಡಿದ್ದಾರೆ ಎಂದು ದೂರಿದ ಸಚಿವ ಕುಮಾರಸ್ವಾಮಿ ಅವರು; ಅವರು ಬೇರೆ ಯಾವುದೇ ಕೆಲಸ ಮಾಡುವುದಿಲ್ಲ. ನನ್ನನ್ನು ಮತ್ತು ನಮ್ಮ ಪಕ್ಷವನ್ನು ನಿಂದಿಸಲಿಕ್ಕೆ ಮಾತ್ರ ಅವರ ಸಚಿವಗಿರಿ ಸೀಮಿತವಾಗಿದೆ ಎಂದು ಹೇಳಿದರು.

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಸಚಿವರು:

ಬಿಡದಿ ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಚಿವರೊಂದಿಗೆ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು ಇದ್ದರು.

HD Kumaraswamy: ನೋವಿನಲ್ಲಿರುವವರಿಗೆ ಜೆಡಿಎಸ್‌ ಬಾಗಿಲು ತೆರೆದಿದೆ: ಕಾಂಗ್ರೆಸ್ ಶಾಸಕರಿಗೆ ಬಹಿರಂಗ ಆಹ್ವಾನ ನೀಡಿದ ಎಚ್‌ಡಿಕೆ!

ಮೈಲಾರಿ ಹೋಟೆಲ್‌ ನಲ್ಲಿ ಉಪಹಾರ ಸೇವಿಸಿದ ಸಚಿವರು

ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಮೈಸೂರಿನ ನಜರ್ ಬಾದ್ ನಲ್ಲಿರುವ ಪ್ರಸಿದ್ಧ ಮೈಲಾರಿ ಹೋಟೆಲ್‌ ನಲ್ಲಿ ಬೆಳಗಿನ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಜೊತೆ ಪೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದರು. ಮಹಿಳೆಯರು, ಮಕ್ಕಳು ಕುಮಾರಸ್ವಾಮಿ ಅವರ ಜತೆ ಪೋಟೋ ಕ್ಲಿಕ್ಕಿಸಿಕೊಂಡರು. ಸಂದರ್ಭದಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಸಚಿವರು ನಿರ್ಗಮಿಸಿದರು.