ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PM Narendra Modi in Mysuru: ವಿಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ: ಪ್ರಧಾನಿ ಮೋದಿ

COSMOS-Mysuru Planetarium: ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಿಸಿರುವ ಅತ್ಯಾಧುನಿಕ, ವಿಶ್ವದ ಮೊದಲ 15 ಡಿಗ್ರಿ ಓರೆಯಾದ ಟಿಲ್ಟೆಡ್ ಎಲ್‌ಇಡಿ ಡೋಮ್ ಪ್ಲಾನೆಟೋರಿಯಂ 'ಕಾಸ್ಮೋಸ್–ಮೈಸೂರು ತಾರಾಲಯ'ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟನೆ ಮಾಡಿದರು. ಬಳಿಕ ವೇದಿಕೆ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.

ಮೈಸೂರು: ದೇಶದಲ್ಲಿ ಅಧ್ಯಾತ್ಮ ಮತ್ತು ವಿಜ್ಞಾನ ಜತೆಜತೆಗೆ ಬಂದಿವೆ. ಮೈಸೂರಿನಲ್ಲಿ ಕಾಸ್ಮೋಸ್‌ ತಾರಾಲಯ ನಿರ್ಮಾಣವಾಗಿರುವುದು ಹೆಮ್ಮೆಯ ವಿಷಯ. ನಮ್ಮ ದೇಶದ ಯುವ ಪೀಳಿಗೆ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು.

ಮೈಸೂರಿನಲ್ಲಿ ಕಾಸ್ಮೋಸ್‌ ತಾರಾಲಯ (COSMOS-Mysuru Planetarium) ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ಮಾತನಾಡಿದರು. ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಅವರು, ಮೊದಲಿಗೆ ತಾಯಿ ಚಾಮುಂಡೇಶ್ವರಿಗೆ ನಮನ ಸಲ್ಲಿಸುತ್ತೇನೆ. ಕೆಲವು ದಿನಗಳ ಹಿಂದೆ ನಾನು ವಿವೇಕ ಸ್ಮಾರಕ ಉದ್ಘಾಟನೆ ಬಂದಿದ್ದೆ, ಈಗ ಕಾಸ್ಮೋಸ್‌ ತಾರಾಲಯ ಲೋಕಾರ್ಪಣೆಗೆ ಬಂದಿದ್ದೇನೆ. ವಿವೇಕ ಸ್ಮಾರಕ ಮತ್ತು ತಾರಾಲಯ ಈ ದೇಶದ ವೈವಿಧ್ಯತೆ ಬಿಂಬಿಸುತ್ತದೆ ಎಂದು ಹೇಳಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕಾಲದಲ್ಲಿ ಮೈಸೂರು ವಿವಿ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಐಐಎಸ್‌ಸಿ ಸ್ಥಾಪನೆಗೆ ಮೈಸೂರು ರಾಜಮನೆತನ ಸಹಾಯ ಮಾಡಿದೆ. ಇದೀಗ ಮೈಸೂರಿನಲ್ಲಿ ಲೋಕಾರ್ಪಣೆಯಾಗಿರುವ ಕಾಸ್ಮೋಸ್‌ ತಾರಾಲಯವು ಭಾರತದ ವೈಜ್ಞಾನಿಕ ಪಯಣದಲ್ಲಿ ಒಂದು ಹೊಸ ಅಧ್ಯಾಯವಾಗಿದೆ ಎಂದು ತಿಳಿಸಿದರು.



ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರು ಭಾರತದ ಖಗೋಳ ವಿಜ್ಞಾನದ ಪರಂಪರೆ ಬಗ್ಗೆ ಮಾತನಾಡುತ್ತಾ, ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮತ್ತು ನೀಲಕಂಠ ಸೋಮಯಾಜಿ ಅವರಂತಹ ಪ್ರಾಚೀನ ವಿದ್ವಾಂಸರು ಇಂದಿನ ಅತ್ಯಾಧುನಿಕ ತಂತ್ರಜ್ಞಾನವಿಲ್ಲದೆ ಮಹತ್ವದ ಆವಿಷ್ಕಾರಗಳನ್ನು ಹಾಗೂ ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡಿದ್ದರು ಎಂಬುದನ್ನು ಅವರು ಸ್ಮರಿಸಿದರು.

ಮೈಸೂರಿನ ತಾರಾಲಯವು ಸುಮಾರು 6,150 ಎಲ್‌ಇಡಿ ಪ್ಯಾನೆಲ್‌ಗಳು ಮತ್ತು 4.2 ಕೋಟಿ ಪ್ರತ್ಯೇಕ ಎಲ್‌ಇಡಿಗಳನ್ನು ದೀಪಗಳನ್ನು ಒಳಗೊಂಡಿರುವ 15 ಮೀಟರ್ ವ್ಯಾಸದ ಓರೆಯಾದ ಗುಮ್ಮಟವನ್ನು ಹೊಂದಿದೆ. ಇದು ಸ್ಕೈ ಥಿಯೇಟರ್, ಪ್ರದರ್ಶನ ಸಭಾಂಗಣಗಳು, ಖಗೋಳಶಾಸ್ತ್ರ ವಸ್ತುಸಂಗ್ರಹಾಲಯ ಹಾಗೂ ತರಬೇತಿ ಸೌಲಭ್ಯಗಳನ್ನು ಒಳಗೊಂಡಿದ್ದು, ಖಗೋಳಶಾಸ್ತ್ರ ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

COSMOS-Mysuru Planetarium: ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ತಾರಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ; ಏನಿದರ ವಿಶೇಷತೆಗಳು?

ಭಾರತ ಸರ್ಕಾರವು ತಂತ್ರಜ್ಞಾನದ ಮೂಲಕ ಜನರ ಜೀವನಮಟ್ಟ ಸುಧಾರಿಸುವ ಕೆಲಸ ಮಾಡುತ್ತಿದೆ. ಭಾರತದ ಬಾಹ್ಯಾಕಾಶ ಯೋಜನೆಗಳು ಮಾನವನ ಕಲ್ಯಾಣದ ಉದ್ದೇಶ ಹೊಂದಿವೆ. ದೇಶದ ಯುವ ವಿಜ್ಞಾನಿಗಳು ರಾಕೆಟ್‌ ಉಡಾವಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.