ಮೈಸೂರು: ಮೈಸೂರಿನ ಸಿದ್ದಾರ್ಥನಗರದ ಮನೆಯೊಂದಕ್ಕೆ ಚಿರತೆ (Leopard ) ನುಗ್ಗಿದ ವೇಳೆ ಪ್ರಾಣದ ಹಂಗು ತೊರೆದು ವಯಸ್ಸಾದ ಅತ್ತೆಯನ್ನು ರಕ್ಷಣೆ ಮಾಡಿದ್ದ ಸೊಸೆ ಸುಜಾತಾ ಅವರ ಸಾಹಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾವಿನ ದವಡೆಯಿಂದ ಅತ್ತೆಯನ್ನು ಕಾಪಾಡಿದ ಸೊಸೆ ಪವಿತ್ರಾ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡುವ ಭರವಸೆಯನ್ನೂ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನ ಸಿದ್ಧಾರ್ಥ ನಗರದಲ್ಲಿ ನಡೆದ ಘಟನೆ ಕೇವಲ ಆಕಸ್ಮಿಕವಷ್ಟೇ ಅಲ್ಲ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ ಎಂದಿದ್ದಾರೆ.
ತಮ್ಮ ಮನೆಯ ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಅವರ ಸಾಹಸ ನಿಜಕ್ಕೂ ರೋಮಾಂಚನಕಾರಿ. ಸಾಕ್ಷಾತ್ ಮೃತ್ಯುವಿನ ದವಡೆಯಿಂದ ಅತ್ತೆಯನ್ನು ರಕ್ಷಿಸಿದ ಅವರ ಸಮಯಪ್ರಜ್ಞೆ ಇಡೀ ಮಹಿಳಾ ಕುಲಕ್ಕೆ ಹೆಮ್ಮೆಯ ವಿಷಯವಾಗಿದೆ. ಅತ್ತೆ-ಸೊಸೆಯ ಸಂಬಂಧದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆಗಳನ್ನು ಅಳಿಸಿ, ಸುಜಾತಾ ಅವರು ಇಂದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾಗಿ, ಸುಜಾತಾ ಅವರ ಈ ಅಸಾಧಾರಣ ಶೌರ್ಯವನ್ನು ನಾನು ಮನತುಂಬಿ ಶ್ಲಾಘಿಸುತ್ತೇನೆ. ಅವರ ಈ ಸಾಹಸವನ್ನು ಗೌರವಿಸಲು ಮುಂದಿನ ವರ್ಷದ “ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿ” ಗೆ ಅವರ ಹೆಸರನ್ನು ಪರಿಗಣಿಸಲು ನಮ್ಮ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಧೈರ್ಯವಂತ ಮಹಿಳೆಯರೇ ಈ ನಾಡಿನ ನಿಜವಾದ ಶಕ್ತಿ. ಸುಜಾತಾ ಅವರ ಈ ಶೌರ್ಯದ ಗಾಥೆ ಮನೆಮನಗಳಿಗೆ ತಲುಪಲಿ.
cheetah: ಬನ್ನೇರುಘಟ್ಟಕ್ಕೆ ನಾಲ್ಕು ವಿದೇಶಿ ಅತಿಥಿಗಳ ಆಗಮನ, ಚೀತಾಗಳಿಗೆ ಅರಣ್ಯ ಸಚಿವರ ಸ್ವಾಗತ
ಘಟನೆ ಆಕಸ್ಮಿಕವಾದರೂ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಸಚಿವರು ಬಣ್ಣಿಸಿದ್ದಾರೆ.