ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Jamboo Savari 2026: ಮೈಸೂರಿನಲ್ಲಿ ಐತಿಹಾಸಿಕ ಜಂಬೂ ಸವಾರಿ ಆರಂಭ; ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ ಪ್ರಶಾಂತ- Video

Mysuru Dasara 2026: ಜಂಬೂಸವಾರಿ ಮೆರವಣಿಗೆ ಮೈಸೂರು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು, ಕೆ.ಆರ್. ವೃತ್ತ ಮತ್ತು ದೇವರಾಜ ಮಾರುಕಟ್ಟೆ ದಾಟಿ ಸಯ್ಯಾಜಿ ರಾವ್ ರಸ್ತೆಗೆ ತಿರುಗಿ, ಉತ್ತರಕ್ಕೆ ಬನ್ನಿಮಂಟಪ ಮೈದಾನದವರೆಗೆ ಸಾಗುತ್ತದೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿ ಬುಧವಾರ ಸಂಜೆ ಐತಿಹಾಸಿಕ ಜಂಬೂ ಸವಾರಿ ಆರಂಭಗೊಂಡಿದೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಆನೆ ಪ್ರಶಾಂತ ಸಾಗುತ್ತಿದೆ. ನಾಡದೇವಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸಿದ್ದಾರೆ.



ಮೆರವಣಿಗೆಗೆ ಮುನ್ನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಧ್ಯಾಹ್ನ 1:36ಕ್ಕೆ ನಂದಿ ಧ್ವಜ ಪೂಜೆ ನೆರವೇರಿಸಿ, ಗಣ್ಯರೊಂದಿಗೆ ಸಂಜೆ 4:10ಕ್ಕೆ ಅಂಬಾರಿಯಲ್ಲಿನ ದೇವಿಗೆ ಪುಷ್ಪಾರ್ಚನೆ ಮಾಡಿದರು. ನಂತರ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಆರಂಭವಾಯಿತು.

ಈ ಬಾರಿಯ ದಸರಾ ಸಂಭ್ರಮಕ್ಕೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಕೇರಳ ಮುಖ್ಯಮಂತ್ರಿ ಸತೀಶನ್ ಅವರು ಕೂಡ ಸಾಕ್ಷಿಯಾದರು. ಸಿಎಂ ಡಿಕೆ ಶಿವಕುಮಾರ್​​ ಅವರ ಜತೆಗೆ ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಚಾಮುಂಡೇಶ್ವರಿಗೆ ಹೂಮಳೆಗೈದಿದ್ದು ವಿಶೇಷವಾಗಿತ್ತು.

ಈ ಸಂದರ್ಭ ವೇದಿಕೆಯಲ್ಲಿ ಸಂಸದ ಮತ್ತು ರಾಜವಂಶಸ್ಥ ಯದುವೀರ್​​ ಒಡೆಯರ್​​, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮೈಸೂರು ಡಿಸಿ ಲಕ್ಷ್ಮೀಕಾಂತರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಜಂಬೂಸವಾರಿ ಮೆರವಣಿಗೆ ಮೈಸೂರು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು, ಕೆ.ಆರ್. ವೃತ್ತ ಮತ್ತು ದೇವರಾಜ ಮಾರುಕಟ್ಟೆ ದಾಟಿ ಸಯ್ಯಾಜಿ ರಾವ್ ರಸ್ತೆಗೆ ತಿರುಗಿ, ಉತ್ತರಕ್ಕೆ ಬನ್ನಿಮಂಟಪ ಮೈದಾನದವರೆಗೆ ಸಾಗುತ್ತದೆ.

ನಿಶಾನೆ ಆನೆ ಅಭಿಮನ್ಯು ಈ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾನೆ. ಈತನ ಹಿಂದೆ ಸಾಲಾನೆಗಳು, ಕಲಾತಂಡಗಳು, ಸ್ತಬ್ಧ ಚಿತ್ರಗಳು ಹಾಗೂ ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ಪ್ರಕಾರದ ತಂಡಗಳು ಮೆರವಣಿಗೆ ಸಾಗುತ್ತಿವೆ.