ಮೈಸೂರು: ಮೈಸೂರು ದಸರಾ (Mysuru Dasara 2026) ಮಹೋತ್ಸವದ ಅಂಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಶೋ (Dasara Drone Show) ಮೂಲಕ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಟ್) ಮತ್ತು ಇಂಧನ ಇಲಾಖೆ ಹೊಸ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿವೆ.
ಬರೋಬ್ಬರಿ 3,473 ಮಲ್ಟಿರೋಟರ್ ಡ್ರೋನ್‌ಗಳನ್ನು ಬಳಸಿ ಆಗಸದಲ್ಲಿ ಅರಳಿಸಿದ ಬೃಹತ್ ನವಿಲಿನ ಆಕೃತಿಯು ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಡ್ರೋನ್‌ಗಳ ಮೂಲಕ ಗಾಳಿಯಲ್ಲಿ ಪಕ್ಷಿಯೊಂದರ ಅತಿ ದೊಡ್ಡ ಆಕೃತಿಯನ್ನು ರಚಿಸಿದ ಹಿನ್ನೆಲೆಯಲ್ಲಿ ಈ ಮಹತ್ವದ ಗಿನ್ನೆಸ್ ಗೌರವ ಲಭಿಸಿದೆ.
ದಸರಾ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಸಹಸ್ರಾರು ಸಾರ್ವಜನಿಕರ ಸಮ್ಮುಖದಲ್ಲಿ ಬಾನಂಗಳದಲ್ಲಿ ಮೂಡಿಬಂದ ಈ ಅದ್ಭುತ ಬೆಳಕಿನ ನವಿಲು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಸ್ಥಳದಲ್ಲೇ ಉಪಸ್ಥಿತರಿದ್ದ ಗಿನ್ನೆಸ್ ದಾಖಲೆ ಸಂಸ್ಥೆಯ ಪ್ರತಿನಿಧಿಗಳು ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ, ಈ ಅಪರೂಪದ ಸಾಧನೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರ, ಸಾವಿರಾರು ಡ್ರೋನ್‌ಗಳ ಅದ್ಭುತ ಪ್ರದರ್ಶನದ ಮೂಲಕ ಬಾನಂಗಳದಲ್ಲಿ ಮೂಡಿಬಂದ ಬೃಹತ್ ನವಿಲಿನ ಚಿತ್ತಾರ ಜಾಗತಿಕ ಗಮನ ಸೆಳೆದಿದೆ. ತಂತ್ರಜ್ಞಾನದ ವೈಭವ ಮತ್ತು ಸೃಜನಶೀಲತೆಯ ಸಂಗಮದೊಂದಿಗೆ ಮೈಸೂರು ದಸರಾ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದು, ಕನ್ನಡ ನಾಡಿನ ಹೆಮ್ಮೆ ವಿಶ್ವದ ವೇದಿಕೆಯಲ್ಲಿ ಮತ್ತಷ್ಟು ಎತ್ತರಕ್ಕೇರಿದೆ ಎಂದು ತಿಳಿಸಿದೆ.