ಮೈಸೂರು, ಅ. 28: ಮೈಸೂರು ದಸರಾಕ್ಕೆ (Mysuru Dasara) ಅದ್ಧೂರಿ ತೆರೆ ಬಿದ್ದಿದೆ. ಗೊಂದಲದ ಗೂಡಾಗಿದ್ದ ಈ ಬಾರಿಯ ದಸರಾ ಮುಕ್ತಾಯವಾಗುತ್ತಿದ್ದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಸರ್ಕಾರದ ವಿರುದ್ಧ ಅಸಲಾಮಾಧ ವ್ಯಕ್ತಪಡಿಸಿದ್ದಾರೆ. ಅವರು ಬೇಸರ ವ್ಯಕ್ತಪಡಿಸಿ ಬರೆದ ಪತ್ರ ಭಾರಿ ಸದ್ದು ಮಾಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಯತೀಂದ್ರ ಸಿದ್ದರಾಮಯ್ಯ ಈ ಪತ್ರಕ್ಕೆ ಪ್ರತಿಕ್ರಿಯಿಸಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದೂ ಆಗಿದೆ. ಆದರೆ ಈ ವಿಚಾರ ಇಷ್ಟಕ್ಕೆ ನಿಂತಿಲ್ಲ. ಇದೀಗ ಪ್ರಮೋದಾದೇವಿ ಪತ್ರಕ್ಕೆ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿರುಗೇಟು ನೀಡುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ. ಇದರೊಂದಿಗೆ ಈ ವಿವಾದ ಮತ್ತಷ್ಟು ತಾರಕಕ್ಕೇರುವ ಸೂಚನೆ ಸಿಕ್ಕಿದ.
ಪ್ರಮೋದಾದೇವೆ ತಮ್ಮ ಪತ್ರದಲ್ಲಿ ಒಂದಷ್ಟು ಅಂಶವನ್ನು ಪ್ರಸ್ತಾವಿಸಿದ್ದರು. ಸಮನ್ವಯದ ಕೊರತೆಯಿಂದ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗಿದೆ ಎಂದಿದ್ದರು. ಜತೆಗೆ ಭದ್ರತಾ ಲೋಪದಂತಹ ಗಂಭೀರ ಆರೋಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಪೊಲೀಸ್ ಕಮೀಷನರ್ ಎಂಟ್ರಿಯಾಗಿದೆ.
ಸೀಮಾ ಲಾಟ್ಕರ್ ಹೇಳಿದ್ದೇನು?
ಅರಮನೆ ಧಾರ್ಮಿಕ ಕಾರ್ಯಗಳಿಗೆ ಅಡ್ಡಿಪಡಿಸಿಲ್ಲ, ಅಗತ್ಯವಿದ್ದ ಕಡೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದೆವು ಎಂದು ಇದೀಗ ಸೀಮಾ ಲಾಟ್ಕರ್ ತಿರುಗೇಟು ನೀಡಿದ್ದಾರೆ. ರಾಜ್ಯಪಾಲರು, ಸಿಎಂ, ಸಚಿವರು, ವಿದೇಶಿ ರಾಯಭಾರಿಗಳು, ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಅವರಿಗೆಲ್ಲ ಸೂಕ್ತ ಭದ್ರತೆ ಒದಗಿಸಿದ್ದು, ಕಾಲ್ತುಳಿದಂತಹ ಅಹಿತಕರ ಘಟನೆಗಳನ್ನ ತಡೆದಿದ್ದಾಗಿ ತಿಳಿಸಿದ್ದಾರೆ.
ಅರಮನೆ ಆಡಳಿತ ಮಂಡಳಿ ಜತೆ 2 ತಿಂಗಳಿಂದ ಸಮನ್ವಯ ಸಭೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ ಅವರು ಜಟ್ಟಿ ಕಾಳಗದ ವಿಚಾರದಲ್ಲಿ ಮೂಡಿದ ಗೊಂದಲ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ʼʼಜಟ್ಟಿ ಕಾಳಗದಲ್ಲಿ ನಮ್ಮ ತಪ್ಪಿಲ್ಲ. 3 ತಂಡ ನಿಗದಿತ ಸಮಯಕ್ಕೆ ಬಂದಿದ್ದವು. 4ನೇ ತಂಡ ತಡವಾಗಿ ಬಂದಿತ್ತು. ಜತೆಗೆ ಪಾಸ್ ಇಲ್ಲದವರನ್ನ ಕರೆದುಕೊಂಡು ಬಂದಿದ್ದರು. ಅಂಬಾರಿ ಕಟ್ಟುವ ಸ್ಥಳದಲ್ಲಿ ಅನಧಿಕೃತ ವ್ಯಕ್ತಿಗಳಿರಲಿಲ್ಲ. ಅಧಿಕಾರಿಗಳ ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಿರಲಿಲ್ಲ. ಹೊಸ ಆನೆ ನಿಯೋಜನೆಗೊಂಡ ಕಾರಣಕ್ಕೆ ಪಾಸ್ ಹೊಂದಿದ್ದವರಿಗಷ್ಟೆ ಅವಕಾಶ ನೀಡಿದ್ದೆವು. ಅಂಬಾರಿ ಸ್ವೀಕರಿಸುವಾಗ, ವಾಪಸ್ ಕೊಡುವಾಗ ಸುರಕ್ಷತೆ ಕಾಪಾಡಿದ್ದೇವೆ’ʼ ಎಂದು ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಪ್ರಮೋದಾದೇವಿ ಆರೋಪವೇನು?
ʼʼಅರಮನೆ ಪೊಲೀಸ್, ಜಿಲ್ಲಾ ಪೊಲೀಸ್, ಕೆಎಸ್ಆರ್ಪಿ ತುಕಡಿಗಳು, ನಗರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳು ಮತ್ತು ಇತರ ಇಲಾಖೆಗಳಿಂದ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯ ನಡುವೆ ಪರಿಣಾಮಕಾರಿ ಸಮನ್ವಯ ಹಾಗೂ ಸಮನ್ವಯದ ಕೊರತೆ ಇರುವುದು ಪ್ರತಿ ವರ್ಷವೂ ಎದ್ದು ಕಾಣುತ್ತಿರುವುದು ವಿಷಾದನೀಯʼʼ ಎಂದು ಪ್ರಮೋದಾದೇವಿ ಬರೆದಿದ್ದರು.
ʼʼಪ್ರತಿ ವರ್ಷವೂ ಜೆಟ್ಟಿ ಸಮುದಾಯ ಮತ್ತು ಪೊಲೀಸ್ ಸಿಬ್ಬಂದಿಯ ನಡುವೆ ಸಮಸ್ಯೆ ಮರುಕಳಿಸುತ್ತಿರುವುದು ದುರದೃಷ್ಟಕರ. ಪೊಲೀಸ್ ಸಿಬ್ಬಂದಿಯ ವರ್ತನೆಯ ಬಗ್ಗೆ ಅವರ ಹಿರಿಯ ಅಧಿಕಾರಿಗಳು ಸೂಕ್ತ ಸೂಚನೆಗಳನ್ನು ನೀಡುವ ಮೂಲಕ ಕ್ರಮ ಕೈಗೊಳ್ಳಬೇಕಿದೆ. ಚಿನ್ನದ ಅಂಬಾರಿ ಬಳಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ, ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು 'ಸೆಲ್ಫಿ' ಹಾಗೂ ಫೋಟೊಗಳನ್ನು ತೆಗೆದುಕೊಳ್ಳಲು ಮುಗಿಬೀಳುವುದು ಆಘಾತಕಾರಿ ಸಂಗತಿ. ಇದು ಅವರಲ್ಲಿನ ಶಿಸ್ತಿನ ಕೊರತೆ ತೋರಿಸುವುದಲ್ಲದೆ, ಕರ್ತವ್ಯ ಲೋಪಕ್ಕೂ ಎಡೆ ಮಾಡಿಕೊಡುತ್ತದೆ. ಇದಲ್ಲದೆ, ಅಂಬಾರಿಗೆ ಯಾವುದೇ ಹಾನಿ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ನೀಡಿದ ಭರವಸೆಯ ಮೇರೆಗೆ, ಅವರ ಕೋರಿಕೆಯ ಮೇರೆಗೆ ನಾನು ಅಂಬಾರಿಯನ್ನು ಅವರಿಗೆ ಒದಗಿಸುತ್ತೇನೆ. ಅಂಬಾರಿ ಬಳಿ ಇರಲು ಅಧಿಕೃತ ಪಾಸ್ಗಳನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ನೀಡಲಾಗಿರುತ್ತದೆ. ಆದರೂ ವಿವಿಧ ಸರ್ಕಾರಿ ಇಲಾಖೆಗಳಿಗೆ ಸೇರಿದ ಅನಧಿಕೃತ ವ್ಯಕ್ತಿಗಳು ಅಲ್ಲಿ ಸುತ್ತಾಡುತ್ತಿರುತ್ತಾರೆ. ಇದು ಪೊಲೀಸ್ ಆಯುಕ್ತರು ನೀಡಿದ ಭರವಸೆಯ ಉಲ್ಲಂಘನೆಯಾಗಿದೆʼʼ ಎಂದು ಆರೋಪಿಸಿದ್ದರು.
ಬಾನಂಗಳದಲ್ಲಿ ಮೂಡಿದ ಬೃಹತ್ ನವಿಲಿನ ಆಕೃತಿ; ಗಿನ್ನಿಸ್ ವಿಶ್ವ ದಾಖಲೆ ಬರೆದ ಮೈಸೂರು ದಸರಾ ಡ್ರೋನ್ ಶೋ
ʼʼಅಂಬಾರಿಯನ್ನು ಸುರಕ್ಷಿತವಾಗಿ ಮರಳಿ ಪಡೆಯಲು, ಪೊಲೀಸ್ ಆಯುಕ್ತರು ನೀಡಿದ ಅಧಿಕೃತ 'ಡ್ಯೂಟಿ ಪಾಸ್' (ಕರ್ತವ್ಯ ನಿರ್ವಹಣಾ ಪತ್ರ) ಹೊಂದಿರುವ ನಮ್ಮ ಪ್ರತಿನಿಧಿಗಳೊಂದಿಗೆ, ಪೊಲೀಸ್ ಸಿಬ್ಬಂದಿ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಡಿಸಿಪಿ ಅನುಚಿತವಾಗಿ ವರ್ತಿಸಿ, ಅವರನ್ನು ತಳ್ಳಾಡಿದ್ದಾರೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಅಂಬಾರಿ ಎಂಬುದು ಖಾಸಗಿ ಆಸ್ತಿಯೇ ಹೊರತು ಸರ್ಕಾರದ್ದಲ್ಲ ಎಂಬುದು ಅವರಿಗೆ ತಿಳಿದಿರಬೇಕು. ನಮ್ಮ ಪ್ರತಿನಿಧಿಗಳು ಕೇವಲ ನಾವು ವಹಿಸಿದ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರಷ್ಟೆ. ರಾಜ ಕುಟುಂಬಕ್ಕಾಗಿ ಮತ್ತು ನಮ್ಮ ಅತಿಥಿಗಳಿಗೆ ಮೀಸಲಿಟ್ಟಿರುವ ಅರಮನೆಯ ಖಾಸಗಿ ಪಾರ್ಕಿಂಗ್ ಸ್ಥಳವನ್ನು ಪೊಲೀಸರು ವಾಹನಗಳನ್ನು ನಿಲ್ಲಿಸುವ ಮೂಲಕ ಅತಿಕ್ರಮಿಸಿದ್ದಾರೆ. ಅಲ್ಲದೆ, ವಿವೇಚನೆ ಇಲ್ಲದೇ ಹಾಕುವ ಬ್ಯಾರಿಕೇಡ್ಗಳು ನಮ್ಮ ಧಾರ್ಮಿಕ ವಿಧಿವಿಧಾನಗಳಿಗೆ ಅಡ್ಡಿಪಡಿಸುತ್ತಿವೆ ಮತ್ತು ಅನಗತ್ಯ ತೊಡಕುಗಳನ್ನು ಸೃಷ್ಟಿಸುತ್ತಿವೆ; ಇದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲʼʼ ಎಂದು ಹೇಳಿದ್ದರು. ಜತೆಗೆ ಅಂಬಾರಿ ಹೊರುವ ಆನೆಯ ವಿಷಯವನ್ನೂ ಮುಚ್ಚಿಡಲಾಗಿದ್ದರು ಎಂದು ಪ್ರಮೋದಾದೇವಿ ಆರೋಪಿಸಿದ್ದರು.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.