ಮೈಸೂರು, ಜ.06 : ಮೈಸೂರಿನ (Mysuru) ಹಳೆ ಕೋರ್ಟಿಗೆ ಬಾಂಬ್ ಬೆದರಿಕೆ (Bomb Threat) ಇ-ಮೇಲ್ ಸಂದೇಶ ಬಂದಿದೆ. ಅನಾಮಿಕ ವ್ಯಕ್ತಿಯಿಂದ ಬೆದರಿಕೆ ಸಂದೇಶ ಬಂದಿದ್ದು ತಕ್ಷಣ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳು ಕೋರ್ಟ್ ಆವರಣ ಬಿಟ್ಟು ಹೊರಗಡೆ ಬಂದಿದ್ದಾರೆ. ಕೋರ್ಟ್ ಆವರಣವನ್ನು ಸಮಗ್ರ ಪರಿಶೀಲನೆ ನಡೆಸಲಾಗುತ್ತಿದೆ.
ಹಳೆ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಕಿಡಿಗೇಡಿಯೊಬ್ಬ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಈ ವಿಚಾರವನ್ನು ತಕ್ಷಣ ಪೊಲೀಸರು ಹಾಗೂ ನ್ಯಾಯಾಧೀಶರ ಗಮನಕ್ಕೆ ತರಲಾಗಿದೆ. ಕೂಡಲೇ ಕೋರ್ಟ್‌ನಿಂದ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರು ಹೊರಗಡೆ ಬಂದಿದ್ದಾರೆ. ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನಪಡೆ ಆಗಮಿಸಿದೆ. ಕೋರ್ಟ್ ಆವರಣ ಹಾಗೂ ಒಳಗಡೆ ಇಂಚಿಂಚನ್ನೂ ಪರಿಶೀಲನೆ ನಡೆಸಲಾಗಿದೆ.
ಒಂದೆರಡು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿರುವ ಸಿಎಂ, ಡಿಸಿಎಂ ಅಧಿಕೃತ ನಿವಾಸಗಳಿಗೂ ಇಂಥ ಬಾಂಬ್ ಬೆದರಿಕೆ ಕರೆ ಬಂದಿತ್ತು. ನಂತರ ಹೈಕೋರ್ಟ್‌ಗೂ ಹೀಗೆ ಬೆದರಿಕೆ ಹಾಕಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ, ಖಾಸಗಿ ಶಾಲೆಗಳಿಗೆ ಇಂಥ ಬೆದರಿಕೆ ಬರುವುದು ಮಾಮೂಲಾಗಿದೆ. ಇವೆಲ್ಲವುಗಳೂ ಹುಸಿ ಬೆದರಿಕೆ ಕರೆಗಳು ಎಂದು ಖಚಿತವಾಗಿದೆ. ಆದರೆ ಇಂಥ ಸಂದೇಶಗಳನ್ನು ಗಂಭೀರವಾಗಿಯೇ ಪರಿಗಣಿಸಲಾಗುತ್ತಿದೆ.