ಟಿ.ನರಸೀಪುರ: ಗಣೇಶ ಮೆರವಣಿಗೆ ಕುರಿತು ಟಿ.ನರಸೀಪುರ ಇನ್ಸ್ಪೆಕ್ಟರ್ ಧನಂಜಯ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು (SP Mallikarjun Baldandi) ಸ್ಪಷ್ಟನೆ ನೀಡಿದ್ದಾರೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ.ನರಸೀಪುರ ಠಾಣೆ ಇನ್ಸ್‌ಪೆಕ್ಟರ್ ಶಾಂತಿ ಸಭೆ ಮಾಡಿದ್ದರು. ಎಲ್ಲೆಲ್ಲಿ ಗಣೇಶ ಉತ್ಸವ ಮಾಡ್ತೀರಿ, ಯಾವ ಮಾರ್ಗದಲ್ಲಿ ಮೆರವಣಿಗೆ ಹೋಗ್ತೀರಿ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ಆದರೆ, ಕಳೆದ ಬಾರಿ ಒಂದು ಗಣೇಶ ಮಂಡಳಿಯವರು ಬಂದೋಬಸ್ತ್‌ಗೆ ಮನವಿ ಮಾಡಿರಲಿಲ್ಲ. ಏಕಾಏಕಿ ಮೆರವಣಿಗೆ ಮಾಡಿದ್ದರು. ಹೀಗಾಗಿ ಆ ರೀತಿ ಗೊಂದಲ ಆಗಬಾರದು ಎಂದು ಮಾಹಿತಿ ಕೊಡುವಂತೆ ಹೇಳುವ ಭರದಲ್ಲಿ ಇನ್ಸ್‌ಪೆಕ್ಟರ್ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಪ್ರತಿ ಬಾರಿ ಪಟ್ಟಣದಲ್ಲಿ 15 ರಿಂದ 20 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಮೆರವಣಿಗೆ ಮಾಡಲಾಗುತ್ತದೆ. ಹೀಗಾಗಿ ಈ ಹಿಂದಿನಿಂದ ಯಾವ ಮಾರ್ಗದಲ್ಲಿ ಮೆರವಣಿಗೆ ನಡೆಯುತ್ತದೋ ಅದಕ್ಕೆ ಅನುಮತಿ ಇದೆ, ಯಾವುದೇ ರೀತಿಯ ನಿರ್ಬಂಧ ಇಲ್ಲ. ಅನುಮತಿ ಪಡೆದು ಗಣೇಶ ಪ್ರತಿಷ್ಠಾಪನೆ ಹಾಗೂ ಮೆರವಣಿಗೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿರುವುದು ಖಂಡನೀಯ: ಆರ್.ಅಶೋಕ್
ಟಿ.ನರಸೀಪುರ ಇನ್ಸ್‌ಪೆಕ್ಟರ್ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಗಣೇಶೋತ್ಸವ ಎಂದರೆ ಒಂದು ಐಕ್ಯತೆಯ ಸಂಕೇತ, ಒಂದು ಭಕ್ತಿ ಭಾವದ ಸಂಕೇತ. ಹಬ್ಬದ ಸಂದರ್ಭದಲ್ಲಿ ಮೈಸೂರಿನ ಟಿ. ನರಸೀಪುರದ ಪೊಲೀಸ್ ಅಧಿಕಾರಿ ದುರಹಂಕಾರದ ಪರಮಾವಧಿಯಲ್ಲಿ ಮಾತನಾಡಿರುವುದು, ಹಿಂದುಗಳ ಭಾವನೆಗೆ ಧಕ್ಕೆ ತಂದಿರುವುದು ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗಣೇಶ ಮೆರವಣಿಗೆ ಸಂದರ್ಭದಲ್ಲಿ ಮಸೀದಿ ಮುಂದೆ ಹೋಗಬಾರದು, ಪಟಾಕಿ ಸಿಡಿಸಬಾರದು, ನೃತ್ಯ ಮಾಡಬಾರದು, ಮೌನದಿಂದ ಸಾಗಬೇಕು ಎಂದು ಉತ್ಸವ ಸಮಿತಿಗೆ ಬೆದರಿಕೆ ಹಾಕಿರುವುದು ಖಂಡನೀಯ. ಈ ರೀತಿ ಪೊಲೀಸ್ ಇಲಾಖೆಯೇ ಬೆದರಿಕೆ ಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.