ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ತಾವರೆಕಟ್ಟೆ ಸಮೀಪ ನಿರ್ಮಾಣಗೊಂಡಿರುವ ಅತ್ಯಾಧುನಿಕ, ವಿಶ್ವದ ಮೊದಲ 15 ಡಿಗ್ರಿ ಓರೆಯಾದ ಟಿಲ್ಟೆಡ್ ಎಲ್ಇಡಿ ಡೋಮ್ ಪ್ಲಾನೆಟೋರಿಯಂ 'ಕಾಸ್ಮೋಸ್–ಮೈಸೂರು ತಾರಾಲಯ'ವನ್ನು (COSMOS-Mysuru Planetarium) ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು.
ರಿಬ್ಬನ್ ಕತ್ತರಿಸುವ ಮೂಲಕ ಪ್ರಧಾನಿ ಮೋದಿ ಅವರು ಮೈಸೂರು ತಾರಾಲಯವನ್ನು ಉದ್ಘಾಟಿಸಿದರು. ಮೈಸೂರು ವಿವಿಯಿಂದ 3.5 ಎಕರೆ ಪ್ರದೇಶದಲ್ಲಿ 115 ಕೋಟಿ ರೂ. ವೆಚ್ಚದಲ್ಲಿ ತಾರಾಲಯ ನಿರ್ಮಿಸಲಾಗಿದೆ. ಇದು ಭಾರತದ ಮೊದಲ ಎಲ್ಇಡಿ ಡೋಮ್ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 15 ಮೀಟರ್ ವ್ಯಾಸದ ಓರೆಯಾದ ಗುಮ್ಮಟದಲ್ಲಿ 6,150ಕ್ಕೂ ಹೆಚ್ಚು ಎಲ್ಇಡಿ ಪ್ಯಾನೆಲ್ಗಳು ಹಾಗೂ 4.2 ಕೋಟಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಖಗೋಳ ವಿಜ್ಞಾನ, ಸಂಶೋಧನೆ, ಶಿಕ್ಷಣ ಮತ್ತು ವಿದ್ಯಾರ್ಥಿಗಳ ವೈಜ್ಞಾನಿಕ ಆಸಕ್ತಿಗೆ ಈ ಕೇಂದ್ರವು ಮಹತ್ವದ ಕೊಡುಗೆ ನೀಡಲಿದೆ.
ತಾರಾಲಯದ ವಿಶೇಷತೆಗಳು?
- ಇದು ವಿಶ್ವದಲ್ಲೇ ಮೊದಲ 15 ಡಿಗ್ರಿ ಓರೆಯಾದ (Tilted) ಎಲ್ಇಡಿ ಡೋಮ್ ಹೊಂದಿರುವ ಅತ್ಯಾಧುನಿಕ ತಾರಾಲಯ
- ಸುಮಾರು ₹120 ಕೋಟಿ ವೆಚ್ಚದಲ್ಲಿ ನಿರ್ಮಾಣ
- ಬೆಂಗಳೂರಿನ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ (IIA) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಿರ್ಮಾಣ
- 8K ದೃಶ್ಯಾನುಭವ ಮತ್ತು 4.2 ಕೋಟಿ ಎಲ್ಇಡಿ ದೀಪಗಳ ಮೂಲಕ ಬಾಹ್ಯಾಕಾಶ, ಗ್ರಹಗಳು ಮತ್ತು ನಕ್ಷತ್ರಗಳ ವಿಸ್ಮಯವನ್ನು ಕಣ್ಣಿಗೆ ಕಟ್ಟುವಂತೆ ವೀಕ್ಷಿಸಬಹುದು
- ಇಲ್ಲಿನ ಸ್ಕೈ ಥಿಯೇಟರ್ನಲ್ಲಿ ಆಕಾಶ ವೀಕ್ಷಣೆಯ ಪ್ರದರ್ಶನಗಳ ಜತೆಗೆ, ಪ್ರತಿ ಪ್ರದರ್ಶನದ ಆರಂಭದಲ್ಲಿ ಮೈಸೂರಿನ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ ಪರಿಚಯಿಸುವ ವಿಶೇಷ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುತ್ತದೆ
- ಇದು ಕೇವಲ ಮನರಂಜನಾ ತಾರಾಲಯ ಮಾತ್ರವಲ್ಲದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ವಿಜ್ಞಾನಿಗಳಿಗೆ ಖಗೋಳ ವಿಜ್ಞಾನದ ತರಬೇತಿ ನೀಡುವ ಪ್ರಮುಖ ಕೇಂದ್ರವಾಗಿದೆ