ಮೈಸೂರು: ನಗರದ ರಾಮಕೃಷ್ಣ ಆಶ್ರಮದಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು (ವಿವೇಕ ಸ್ಮಾರಕ-Viveka Smaraka) ಪ್ರಧಾನಿ ಮೋದಿ ಅವರು ಶನಿವಾರ ಉದ್ಘಾಟನೆ ಮಾಡಿದರು. ಈ ವೇಳೆ ಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅಧ್ಯಕ್ಷರಾದ ಸ್ವಾಮಿ ಗೌತಮಾನಂದಜಿ ಮಹಾರಾಜ್, ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
1892ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿನಲ್ಲಿ ತಂಗಿದ್ದ ಐತಿಹಾಸಿಕ ಘಟನೆಯನ್ನು ಸ್ಮರಿಸುವ ಉದ್ದೇಶದಿಂದ ವಿವೇಕ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಅವರ ಬೋಧನೆಗಳು ಹಾಗೂ ಆದರ್ಶಗಳ ಮೂಲಕ ಯುವಜನತೆಗೆ ಸ್ಫೂರ್ತಿ ನೀಡುವ ಉದ್ದೇಶ ಹೊಂದಿದೆ.

ಮಧ್ಯಾಹ್ನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನಕ್ಕೆ ತೆರಳಿದರು. ಬಳಿಕ ರಸ್ತೆ ಮಾರ್ಗವಾಗಿ ರಾಮಕೃಷ್ಣ ಆಶ್ರಮಕ್ಕೆ ತೆರಳಿ ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು.
ವಿವೇಕ ಸ್ಮಾರಕದಲ್ಲಿ ಏನೇನಿದೆ?:
700 ಮಂದಿ ಕುಳಿತುಕೊಳ್ಳಬಹುದಾದ ಆಂಪಿಥಿಯೇಟರ್, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೊಠಡಿ, ತರಗತಿ ಕೋಣೆಗಳು, ಗ್ರಂಥಾಲಯ, ವಿಚಾರ ಸಂಕಿರಣ ಕೊಠಡಿಗಳು, ಆಡಳಿತ ಸಂಕೀರ್ಣ, ಯೋಗ ಮತ್ತು ಧ್ಯಾನ ಮಂದಿರ, ಸಂವಾದ ಕೊಠಡಿ, ಸ್ವಾಮಿ ವಿವೇಕಾನಂದ ಚಿತ್ರಪ್ರದರ್ಶನ - ಯುವಕರಿಗೆ ಸ್ವಾಮೀಜಿ ಜೀವನ, ಸಂದೇಶಗಳನ್ನು ಒಳಗೊಂಡಿದೆ, ಪುಸ್ತಕ ಮಳಿಗೆ, ರಾಮಕೃಷ್ಣ-ವಿವೇಕಾನಂದ ವೇದಾಂತ ಸಾಹಿತ್ಯ ಗ್ರಂಥಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.