ಮೈಸೂರು, ಡಿ.28: ಹುಣಸೂರು ಪಟ್ಟಣದಲ್ಲಿ ಹಾಡಹಗಲೇ ಚಿನ್ನದಂಗಡಿ ದರೋಡೆ (Jewellery shop Robbery in Hunsur) ನಡೆದಿದ್ದು, ಸುಮಾರು 5 ಕೋಟಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಕಿಡಿಗೇಡಿಗಳು ದೋಚಿದ್ದಾರೆ. 5ಕ್ಕೂ ಹೆಚ್ಚು ಜನರಿದ್ದ ಗ್ಯಾಂಗ್, ಏಕಾಏಕಿ ಚಿನ್ನದಂಗಡಿಗೆ ನುಗ್ಗಿ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಕೃತ್ಯ ಎಸಗಿದೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ʼ ಚಿನ್ನಂಗಡಿಯಲ್ಲಿ ದರೋಡೆ ನಡೆದಿದೆ.
ದರೋಡೆಕೋರರು ಗನ್ ತೋರಿಸಿ ಸುಮಾರು 5 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ ದರೋಡೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಹುಣಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಮ್ಯಾನೇಜರ್ ಅಸ್ಗರ್ಗೆ ಗಾಯವಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಸುಕು ಧರಿಸಿದ ದರೋಡೆಕೋರರು ಅಂಗಡಿಗೆ ನುಗ್ಗಿ, ಆಯುಧಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಬಳಿಕ ಅಂಗಡಿಯ ಮ್ಯಾನೇಜರ್ ಅಜ್ಗರ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಬ್ಯಾಗ್‌ಗಳಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಘಟನೆಯ ಸಮಯದಲ್ಲಿ ಅಂಗಡಿಯಲ್ಲಿ ಕೆಲವು ಗ್ರಾಹಕರು ಮತ್ತು ಸಿಬ್ಬಂದಿ ಇದ್ದರು. ದರೋಡೆಕೋರರು ಎಲ್ಲರನ್ನೂ ಬೆದರಿಕೆ ಹಾಕಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ನಂತರ ಒಬ್ಬ ದರೋಡೆಕೋರ ಹೆಲ್ಮೆಟ್ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ವಿಜಯಪುರದಲ್ಲಿ ಸರಗಳ್ಳತನ; ಇಬ್ಬರು ಆರೋಪಿಗಳ ಬಂಧನ
ವಿಜಯಪುರ: ನಗರದಲ್ಲಿ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಸರಗಳ್ಳತನ ಮಾಡಿದ್ದ ಪ್ರಕರಣಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಸೀಫ್ ಜಮಾದಾರ್ ಹಾಗೂ ರಿಹಾನ್ ಮಣಿಯಾರ್ ಬಂಧಿತ ಆರೋಪಿಗಳು.
ಮಸಾಜ್ ಪಾರ್ಲರ್ ಕೆಲಸ ಬಿಡಲ್ಲ ಎಂದಿದ್ದಕ್ಕೆ ಪತ್ನಿಯ ಕತ್ತು ಸೀಳಿ ಕೊಲೆಗೈದ 3ನೇ ಗಂಡ!
ಇತ್ತೀಚಿಗಷ್ಟೇ ವಿಜಯಪುರ ನಗರದ ಮಹಿಳೆಯೊಬ್ಬರು ದಿವಟಗೇರಿ ಬಡವಾಣೆಯಲ್ಲಿನ ಅಂಗಡಿಗೆ ತೆರಳಿದ್ದರು. ಆಗ ಆರೋಪಿಗಳಿಬ್ಬರು ಏಕಾಏಕಿ ಕಲಾವತಿ ಮೇಲೆ ಹಲ್ಲೆಗೈದು, ಕಿವಿ ಕತ್ತರಿಸಿದ್ದರು. ಬಳಿಕ ಕಿವಿಯಲ್ಲಿದ್ದ ಓಲೆ ಹಾಗೂ ಕತ್ತಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.