ಮೈಸೂರು: ಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ಭಾನುವಾರ ಸಂಜೆ ಮೈಸೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಜಾನಕಿ ಅವರ ಕುಟುಂಬಸ್ಥರೊಂದಿಗೆ ಚರ್ಚೆಯ ನಂತರ, ಎಸ್.ಜಾನಕಿ (S. Janaki) ಅಂತ್ಯಸಂಸ್ಕಾರದ ಸ್ಥಳ ಹಾಗೂ ಸಮಯವನ್ನು ಜಿಲ್ಲಾಡಳಿತ ಅಧಿಕೃತವಾಗಿ ಪ್ರಕಟಿಸಿದೆ. ಎಸ್.ಜಾನಕಿ ಅವರ ಕೊನೆಯ ಇಚ್ಛೆಯಂತೆಯೇ ಮೈಸೂರಿನಲ್ಲಿಯೇ ಅವರ ಅಂತ್ಯಕ್ರಿಯೆ (funeral) ನಡೆಸಲು ತೀರ್ಮಾನಿಸಲಾಗಿದ್ದು, ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಈ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ಅಂತ್ಯಸಂಸ್ಕಾರವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೇ ನಡೆಯಬೇಕು ಎಂಬುದು ಸ್ವತಃ ಎಸ್. ಜಾನಕಿ ಅವರ ಆಸೆಯಾಗಿತ್ತು. ಅವರ ಆ ಇಚ್ಛೆಯಂತೆಯೇ ಅವರ ಕುಟುಂಬ ಸದಸ್ಯರ ಒಪ್ಪಿಗೆಯ ಮೇರೆಗೆ ಮೈಸೂರಿನಲ್ಲಿಯೇ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ. ಖುದ್ದು ಮುಖ್ಯಮಂತ್ರಿಗಳೇ ನನ್ನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಗೌರವಾನ್ವಿತ ವಿದಾಯ ನೀಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಸಿಎಂ ಸೂಚನೆಯಂತೆಯೇ ಎಲ್ಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಾಳೆ ಬೆಳಗ್ಗೆ 8ರಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ದರ್ಶನ
ಎಸ್.ಜಾನಕಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ಹಾಗೂ ಅಭಿಮಾನಿಗಳ ಅಂತಿಮ ನಮನಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರು ಹಾಗೂ ಗಣ್ಯರು ಜಾನಕಿ ಅಮ್ಮನವರ ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಫಾರ್ಮ್‌ಹೌಸ್‌ನಲ್ಲಿ ಸಂಜೆ ಅಂತ್ಯಸಂಸ್ಕಾರ
ಸಾರ್ವಜನಿಕ ದರ್ಶನ ಪ್ರಕ್ರಿಯೆ ಮುಗಿದ ಬಳಿಕ, ನಾಳೆ ಸಂಜೆ ವೇಳೆಗೆ ಎಚ್.ಡಿ. ಕೋಟೆ ತಾಲೂಕಿನ ಬೋಗಾದಿರ ಕನಿಯನ ಹುಂಡಿಯಲ್ಲಿ ಸಾಕು ಮಗ ನವೀನ್ ಅವರ 'ನವೀನ್ ಫಾರ್ಮ್ ಹೌಸ್'ನಲ್ಲಿ ಸಂಜೆ 4.30 ಗಂಟೆಗೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲು ಸ್ಥಳ ನಿಗದಿಪಡಿಸಲಾಗಿದೆ.
ಎಸ್ ಜಾನಕಿ ಅವರ ಮೊಮ್ಮಗಳು ಅಪ್ಸರಾ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ. ಅವರ ಏಕೈಕ ಪುತ್ರ ಈ ವರ್ಷದ ಜನವರಿಯಲ್ಲಿ ಸಾವು ಕಂಡಿದ್ದರು. ಹೀಗಾಗಿ ಮಗನ ಮಗಳಾದ ಅಪ್ಸರಾಳಿಂದ ಅಂತ್ಯ ಸಂಸ್ಕಾರ ನೆರವೇರಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಉಚಿತ ನಿವೇಶನ ನೀಡುವುದಾಗಿ ಸಾ.ರಾ. ಮಹೇಶ್ ಘೋಷಣೆ
ಖ್ಯಾತ ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದ ಬೆನ್ನಲ್ಲೇ ಅವರ ಅಂತಿಮ ಸಂಸ್ಕಾರ ಮತ್ತು ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ವ್ಯವಸ್ಥೆಗಾಗಿ ಜಿಲ್ಲಾಡಳಿತ ತೀವ್ರ ಸಿದ್ಧತೆ ಕೈಗೊಂಡಿದೆ. ಈ ಮಧ್ಯೆ, ಎಸ್.ಜಾನಕಿ ಅವರ ಅಂತ್ಯಸಂಸ್ಕಾರಕ್ಕಾಗಿ ಮೈಸೂರಿನಲ್ಲಿ ಉಚಿತವಾಗಿ ನಿವೇಶನ ನೀಡುವುದಾಗಿ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ತಿಳಿಸಿದ್ದಾರೆ.
ಎಸ್. ಜಾನಕಿ ಅವರ ಅಂತ್ಯಕ್ರಿಯೆ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿರುವ ಮಾಜಿ ಸಚಿವ ಸಾ.ರಾ. ಮಹೇಶ್, "ಜಾನಕಿ ಅಮ್ಮ ಅವರ ಅಂತ್ಯಸಂಸ್ಕಾರವನ್ನು ಮೈಸೂರಿನಲ್ಲಿಯೇ ಮಾಡುವುದಾದರೆ, ನನ್ನ ಸ್ವಯಾರ್ಜಿತ ಆಸ್ತಿಯಾಗಿರುವ ಮೈಸೂರಿನ ಆರ್.ಟಿ. ನಗರದಲ್ಲಿನ 60*40 ಅಳತೆಯ ಒಂದು ನಿವೇಶನವನ್ನು ಉಚಿತವಾಗಿ ನೀಡಲು ನಾನು ಸಿದ್ಧನಿದ್ದೇನೆ. ಜಾನಕಿ ಅವರ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರೆ ಆ ಜಾಗವನ್ನು ಅವರ ಹೆಸರಿನ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು. ಈ ಕುರಿತು ಈಗಾಗಲೇ ಮೈಸೂರು ಜಿಲ್ಲಾಡಳಿತಕ್ಕೂ ಅಧಿಕೃತ ಮಾಹಿತಿ ನೀಡಿದ್ದೇನೆ" ಎಂದು ತಿಳಿಸಿದ್ದಾರೆ.