ಮೈಸೂರು: ಸಿಂಗಾಪುರದಲ್ಲಿ ಕನ್ನಡ ನಾಡು-ನುಡಿ-ಸಾಹಿತ್ಯ-ಕಲೆ ಮತ್ತು ಸಂಸ್ಕೃತಿಯ ಕಂಪನ್ನು ಜನರಿಗೆ ಪರಿಚಯಿಸುತ್ತಿರುವ ಸಾಹಿತಿ, ಲೇಖಕ ಉಮ್ಮತ್ತೂರು ರೇವಣ್ಣ (Ummathur Revanna) ಅವರು ಬರೆದಿರುವ ಎರಡು ಕೃತಿಗಳ ಲೋಕಾರ್ಪಣೆಯು ಇದೇ ವಾರಾಂತ್ಯ, ನವೆಂಬರ್ 14ರಂದು ಶನಿವಾರ ಮೈಸೂರಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ಸಂಜೆ 5 .30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಯವರು ಕೃತಿಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕಲ್ಯಾಣದ ಕಹಳೆಗಳು ಮತ್ತು ಕಾಯಕವೇ ಕೈಲಾಸ ಎಂಬ ಎರಡು ಕೃತಿಗಳನ್ನು ಪ್ರತಿಷ್ಠಿತ ಸ್ನೇಹ ಬುಕ್ ಹೌಸ್ ಪ್ರಕಟಿಸಿದೆ.
ವಿಶೇಷ ರಿಯಾಯಿತಿಯೊಂದಿಗೆ ಯಾವುದೇ ಅಂಚೆ ವೆಚ್ಚವಿಲ್ಲದೆ ನೀವು ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದು.( ಸಂಪರ್ಕ-ಸ್ನೇಹ 9845031335) ಎಂದು ಪ್ರಕಾಶಕರಾದ ಪರಶಿವಪ್ಪನವರು ತಿಳಿಸಿದ್ದಾರೆ.
"ಈ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿರುವ ಎರಡು ಕೃತಿಗಳೂ ನನ್ನ ಸಾಹಿತ್ಯಿಕ ಅಭಿರುಚಿ ಮತ್ತು ಚಿಂತನೆಯ ವಿಭಿನ್ನ ಆಯಾಮಗಳನ್ನು ಪ್ರತಿನಿಧಿಸುತ್ತವೆ. ‘ಕಾಯಕವೇ ಕೈಲಾಸ’ ನನ್ನ ರಂಗಭೂಮಿಯ ಅಭಿವ್ಯಕ್ತಿಯಾದ ನಾಟಕ ಕೃತಿಯಾದರೆ, ‘ಕಲ್ಯಾಣದ ಕಹಳೆಗಳು’ ಹದಿನೈದು ವಚನಕಾರರ ಬದುಕು, ಸಾಧನೆ, ವ್ಯಕ್ತಿತ್ವ ಹಾಗೂ ವಚನ ಚಿಂತನೆಗಳನ್ನು ಪರಿಚಯಿಸುವ ವ್ಯಕ್ತಿಚಿತ್ರಣ ಸಂಕಲನ. ಈ ಎರಡೂ ಕೃತಿಗಳ ಮೂಲಕ ನನ್ನೊಳಗೆ ಬಹುಕಾಲದಿಂದ ರೂಪುಗೊಂಡಿದ್ದ ಸಾಹಿತ್ಯಾಸಕ್ತಿ ಓದುಗರ ಮುಂದೆ ಪ್ರಕಟಗೊಳ್ಳುತ್ತಿದೆʼʼ ಎಂದು ಲೇಖಕ ಉಮ್ಮತ್ತೂರು ರೇವಣ್ಣ ಅವರು ತಿಳಿಸಿದ್ದಾರೆ.
"ಈ ಕೃತಿಗಳು ಲೋಕಾರ್ಪಣೆಗೊಳ್ಳುತ್ತಿರುವ ಸ್ಥಳವೇ ನನ್ನ ಪಾಲಿಗೆ ಇನ್ನಷ್ಟು ವಿಶೇಷವಾದದ್ದು. ಏಕೆಂದರೆ ಸುತ್ತೂರು ಶ್ರೀಕ್ಷೇತ್ರವೆಂಬುದು ನನ್ನ ಬದುಕಿನ ರೂಪುಗೊಳ್ಳುವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದ ಪುಣ್ಯಕ್ಷೇತ್ರ.
ಉಮ್ಮತ್ತೂರಿನಂತಹ ಪುಟ್ಟ ಗ್ರಾಮದಲ್ಲಿ ಪ್ರೌಢಶಾಲೆಯನ್ನು ಆರಂಭಿಸುವ ಮೂಲಕ ಗ್ರಾಮೀಣ ಮಕ್ಕಳ ಬದುಕಿಗೆ ಅಕ್ಷರದ ಬೆಳಕು ನೀಡಿದವರು ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಶಿಕ್ಷಣವೆಂಬುದು ನಗರಗಳಿಗೆ ಮಾತ್ರ ಸೀಮಿತವಾಗಬಾರದು; ಹಳ್ಳಿಯ ಕಟ್ಟಕಡೆಯ ಮಗುವಿಗೂ ಅದು ತಲುಪಬೇಕು ಎಂಬ ಉದಾತ್ತ ಆಶಯದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಅವರ ದೂರದೃಷ್ಟಿತ್ವ ನಿಜಕ್ಕೂ ಅನನ್ಯವಾದುದು. ಅಂದು ನಮ್ಮೂರಿನಲ್ಲಿ ಆ ಶಾಲೆ ಆರಂಭವಾಗದಿದ್ದರೆ, ನನ್ನಂತಹ ಸಾಮಾನ್ಯ ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಇಂದು ಶಿಕ್ಷಣ ಪಡೆದು, ಸಮಾಜದ ಮುಖ್ಯವಾಹಿನಿಗೆ ಬಂದು, ಸಾಹಿತ್ಯದಂತಹ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿತ್ತೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅವರು ಅಂದು ಬಿತ್ತಿದ ಶಿಕ್ಷಣದ ಬೀಜ ಇಂದು ನಮ್ಮಂತಹ ಅನೇಕರ ಬದುಕಿನಲ್ಲಿ ಹೆಮ್ಮರವಾಗಿ ಬೆಳೆದಿದೆ. ನನ್ನ ಬದುಕಿನ ಅಕ್ಷರಯಾನದ ಮೊದಲ ಅಧ್ಯಾಯಕ್ಕೆ ಬುನಾದಿ ಹಾಕಿದ ಪೂಜನೀಯರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದು ನನ್ನ ಪಾಲಿನ ಸೌಭಾಗ್ಯʼʼ ಎಂದು ಅವರು ವಿವರಿಸಿದ್ದಾರೆ.
"ಅಕ್ಷರದ ಬೆಳಕಿನೊಂದಿಗೆ ಆರಂಭವಾದ ನನ್ನ ಬದುಕಿನ ಪಯಣಕ್ಕೆ ಮುಂದಿನ ದಿನಗಳಲ್ಲಿ ಮತ್ತೊಂದು ಮಹತ್ವದ ತಿರುವು ದೊರೆಯಿತು. ಪ್ರಸ್ತುತ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಪ್ರತಿಷ್ಠಿತ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುವ ಅವಕಾಶ ನನಗೆ ಲಭಿಸಿತು. ವೃತ್ತಿಪರ ಬದುಕಿನಲ್ಲಿ ನೆಲೆ ಕಂಡುಕೊಳ್ಳುವುದರ ಜೊತೆಗೆ, ಹಲವು ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವೂ ದೊರೆಯಿತು. ವ್ಯಕ್ತಿಯೊಬ್ಬನ ಬದುಕಿನಲ್ಲಿ ಶಿಕ್ಷಣ ಎಷ್ಟು ಮುಖ್ಯವೋ, ಆ ಶಿಕ್ಷಣದ ಮೂಲಕ ಗಳಿಸಿದ ಅವಕಾಶಗಳನ್ನು ಸಾರ್ಥಕವಾಗಿ ಬಳಸಿಕೊಳ್ಳಲು ದೊರೆಯುವ ಮಾರ್ಗದರ್ಶನವೂ ಅಷ್ಟೇ ಮುಖ್ಯ. ಆ ದೃಷ್ಟಿಯಿಂದ ನನ್ನ ಬದುಕಿನ ಬೆಳವಣಿಗೆಯಲ್ಲಿ ಪೂಜ್ಯರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಆಶೀರ್ವಾದಗಳು ಸದಾ ಸ್ಮರಣೀಯವಾಗಿವೆ.
ಹೀಗೆ ನನ್ನ ಬದುಕಿನ ಎರಡು ಮಹತ್ವದ ಹಂತಗಳಲ್ಲಿ ಇಬ್ಬರು ಪರಮಪೂಜ್ಯ ಜಗದ್ಗುರುಗಳ ಅನುಗ್ರಹ ದೊರೆತಿರುವುದು ನನ್ನ ಸೌಭಾಗ್ಯ. ಒಬ್ಬರು ನನ್ನಂತಹ ಗ್ರಾಮೀಣ ಬಡಮಕ್ಕಳಿಗೆ ಅಕ್ಷರದ ಬೆಳಕು ನೀಡಿದವರು; ಮತ್ತೊಬ್ಬರು ವೃತ್ತಿಜೀವನದಲ್ಲಿ ಮುನ್ನಡೆಯಲು ಅವಕಾಶ ನೀಡಿದವರು. ಒಬ್ಬರು ನನ್ನ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಿದರೆ, ಮತ್ತೊಬ್ಬರು ನನ್ನ ಬದುಕಿನ ಮುಂದಿನ ಪಯಣಕ್ಕೆ ದಾರಿದೀಪವಾದವರು. ಇಂದು ನಾನು ಒಂದಷ್ಟು ಕಲಿತು, ಬೆಳೆದು, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದ್ದರೆ, ಅದರ ಹಿಂದೆ ಈ ಇಬ್ಬರು ಗುರುವರ್ಯರ ಕೃಪಾಶೀರ್ವಾದಗಳಿವೆ ಎಂಬುದನ್ನು ಅತ್ಯಂತ ವಿನಮ್ರತೆಯಿಂದ ಒಪ್ಪಿಕೊಳ್ಳುತ್ತೇನೆ.
ಇಂತಹ ಗುರುಕ್ಷೇತ್ರದಲ್ಲಿಯೇ ನನ್ನ ಚೊಚ್ಚಲ ಸಾಹಿತ್ಯ ಕೃತಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ನನ್ನ ಪಾಲಿಗೆ ಅತ್ಯಂತ ಅರ್ಥಪೂರ್ಣವಾದ ಸಂಗತಿ. ನನ್ನ ಬದುಕಿಗೆ ಅಕ್ಷರದ ಬೆಳಕು ನೀಡಿದ ನೆಲದಲ್ಲಿಯೇ ನನ್ನ ಅಕ್ಷರರೂಪದ ಅಭಿವ್ಯಕ್ತಿಗಳು ಓದುಗರ ಕೈ ಸೇರುತ್ತಿರುವುದು ಒಂದು ಅಪೂರ್ವ ಕಾಕತಾಳೀಯವಷ್ಟೇ ಅಲ್ಲ, ಗುರುಕೃಪೆಯ ಸಾರ್ಥಕ ಅನುಭವವೂ ಹೌದು. ಬದುಕಿನಲ್ಲಿ ನಾವು ಏನೇ ಸಾಧಿಸಿದರೂ, ಆ ಸಾಧನೆಯ ಹಿಂದೆ ನಿಂತು ಬೆಳಕು ನೀಡಿದವರನ್ನು ಮರೆಯಬಾರದು ಎಂಬುದಕ್ಕೆ ನನ್ನ ಈ ಸಾಹಿತ್ಯ ಪಯಣವೇ ಸಾಕ್ಷಿ. ಹೀಗಾಗಿ ಈ ಎರಡು ಕೃತಿಗಳ ಲೋಕಾರ್ಪಣೆಯನ್ನು ನನ್ನ ವೈಯಕ್ತಿಕ ಸಂತೋಷದ ಆಚೆಗೆ, ನನಗೆ ಬದುಕಿನ ದಾರಿ ತೋರಿದ ಗುರುಪರಂಪರೆಗೆ ಸಲ್ಲಿಸುವ ಕೃತಜ್ಞತೆಯ ಸಮರ್ಪಣೆಯಾಗಿ ಕಾಣುತ್ತೇನೆʼʼ ಎಂದು ಸ್ಮರಿಸಿದ್ದಾರೆ.
ಕೃತಿ ಬಿಡುಗಡೆ ಕಾರ್ಯಕ್ರಮದ ವಿವರಗಳು ಹೀಗಿವೆ:
ದಿನಾಂಕ: 14 ನವೆಂಬರ್ 2026, ಶನಿವಾರ
ಸಮಯ: ಸಂಜೆ 5.30
ಸ್ಥಳ: ಅಲ್ಲಮಪ್ರಭು ಸಭಾಂಗಣ, ಸುತ್ತೂರು ಶ್ರೀಕ್ಷೇತ್ರ, ಮೈಸೂರು
ಲೋಕಾರ್ಪಣೆಗೊಳ್ಳಲಿರುವ ಉಮ್ಮತ್ತೂರು ರೇವಣ್ಣ ಅವರ ಕೃತಿಗಳು:
- ಕಾಯಕವೇ ಕೈಲಾಸ — ನಾಟಕ
- ಕಲ್ಯಾಣದ ಕಹಳೆಗಳು — ವಚನಕಾರರ ಜೀವನಾಧಾರಿತ ವ್ಯಕ್ತಿಚಿತ್ರಣ ಸಂಕಲನ