ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರಲ್ಲಿ ಮೂರು ದಿನಗಳ 'ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ' ಆಯೋಜನೆ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

Vishwa kannada sahitya sammelana: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿದೇಶಗಳಲ್ಲಿಯೂ ಕನ್ನಡಕ್ಕೆ ಅಪಾರ ಗೌರವ ನೀಡುತ್ತಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶವಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.

ಮೈಸೂರು, ನ.11: "ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ 2027ರಲ್ಲಿ ಮೂರು ದಿನಗಳ ಕಾಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ (Vishwa kannada sahitya sammelana) ಆಯೋಜಿಸಲಾಗುವುದು. ಈ ಕುರಿತು ಮುಂದಿನ ಬಜೆಟ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.

ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿಯವರ "ವಿಶ್ವಸಂಸ್ಕೃತಿಯ ಮಹಾಯಾನ (ಸಂಪುಟ 4)- ಗದ್ಯ ಮಹಾಕಾವ್ಯವನ್ನು ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

"ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿದೇಶಗಳಲ್ಲಿಯೂ ಕನ್ನಡಕ್ಕೆ ಅಪಾರ ಗೌರವ ನೀಡುತ್ತಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶವಿದೆ" ಎಂದರು.

"ಜಗತ್ತು ಒಂದಾಗಬೇಕಾದರೆ ಮೊದಲು ಮನುಷ್ಯರು ಒಂದಾಗಬೇಕು. ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವುದೇ ಧರ್ಮ ಮತ್ತು ಸಂಸ್ಕೃತಿ. ರಾಜಕೀಯದಲ್ಲಿರುವ ನಮ್ಮ ಹೆಸರುಗಳು ಭವಿಷ್ಯದಲ್ಲಿ ಮರೆಯಾಗಬಹುದು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರು ಮತ್ತು ಅವರ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಶಿಕ್ಷಣ ಮತ್ತು ಸಾಹಿತ್ಯ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ" ಎಂದು ಹೇಳಿದರು.

Book release (1)

ಸಾಹಿತ್ಯದ ಪ್ರಭಾವ ಶಾಶ್ವತ

"ಸಾಹಿತ್ಯ ಮತ್ತು ರಾಜಕಾರಣದ ನಂಟು ಹೊಸದೇನಲ್ಲ. ಅಧಿಕಾರವನ್ನು ಬಳಸಿಕೊಂಡು ಜನರ ಬದುಕಿನಲ್ಲಿ ಬದಲಾವಣೆ ತರಬಹುದು. ಆದರೆ ಸಾಹಿತ್ಯದ ಮೂಲಕ ಜನರ ಆಲೋಚನೆಗಳನ್ನೇ ಬದಲಾಯಿಸಬಹುದು. ಅಧಿಕಾರದ ಅವಧಿ ಸೀಮಿತವಾದರೂ ಸಾಹಿತ್ಯದ ಪ್ರಭಾವ ಶಾಶ್ವತ. ಒಬ್ಬ ವ್ಯಕ್ತಿಯ ಬದುಕು ಮುಗಿದರೂ ಆತ ಬರೆದ ಚಿಂತನೆಗಳಿಗೆ ಸಾವಿಲ್ಲ" ಎಂದು ಅಭಿಪ್ರಾಯಪಟ್ಟರು.

"ಮನುಷ್ಯ ಬದುಕಲು ಆಹಾರ ಎಷ್ಟು ಮುಖ್ಯವೋ, ಆತ್ಮತೃಪ್ತಿಗೆ ಸಾಹಿತ್ಯ ಮತ್ತು ಕಲೆ ಅಷ್ಟೇ ಮುಖ್ಯ. ಕತ್ತಲೆಯನ್ನು ದೂರ ಮಾಡಲು ಬೆಳಕು ಬೇಕು. ಅಜ್ಞಾನವನ್ನು ದೂರ ಮಾಡಲು ಸಾಹಿತ್ಯ ಮತ್ತು ಸಂಸ್ಕೃತಿ ಬೇಕು. ಅಭಿವೃದ್ಧಿಗೆ ಸಂಪತ್ತು ಅಗತ್ಯವಾದರೆ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮೌಲ್ಯಗಳು ಅಗತ್ಯ. ಸಂಸ್ಕೃತಿ ನಮ್ಮ ಗುರುತು, ಮಾನವೀಯತೆ ನಮ್ಮ ಅಸ್ತಿತ್ವ. ನಮ್ಮ ಕಾಯಕಗಳು ಬೇರೆಬೇರೆಯಾಗಿರಬಹುದು, ಆದರೆ ಮಾನವೀಯ ಭಾವನೆಗಳು ಒಂದೇ ಆಗಿರಬೇಕು"ಎಂದರು.

"ಎಲ್ಲ ಭಾಷೆಗಳ ಸಾಹಿತ್ಯ, ಕಾವ್ಯ, ಶಾಯರಿ ಮತ್ತು ಸಂಗೀತಗಳಲ್ಲಿಯೂ ಮಾನವೀಯ ಭಾವನೆಗಳ ಅಭಿವ್ಯಕ್ತಿ ಕಾಣಬಹುದು. ಎಲ್ಲ ಧರ್ಮಗಳಲ್ಲಿಯೂ ಮಾನವೀಯತೆ ಮತ್ತು ಸಂಸ್ಕೃತಿಯನ್ನು ಬೆಸೆಯುವ ಮೌಲ್ಯಗಳಿವೆ. ಇಂತಹ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸಾಹಿತ್ಯ ಲೋಕದ ಪಾತ್ರ ಬಹಳ ದೊಡ್ಡದು" ಎಂದರು.

"ವೀರಪ್ಪ ಮೊಯ್ಲಿ ಅವರ ಸಾಹಿತ್ಯಿಕ ಹಾಗೂ ರಾಜಕೀಯ ಕೊಡುಗೆಗಳು ಅಪಾರ. 1985ರಲ್ಲಿ ತಮಗೆ, ಎಚ್.ಎಂ. ರೇವಣ್ಣ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಯುವ ನಾಯಕರಿಗೆ ರಾಜೀವ್ ಗಾಂಧಿ ಅವರೊಂದಿಗೆ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕಿಸಿಕೊಡುವಲ್ಲಿ ವೀರಪ್ಪ ಮೊಯ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ಜೀವನದಲ್ಲಿ ಹಲವು ಯುವ ನಾಯಕರಿಗೆ ಅವಕಾಶ ಕಲ್ಪಿಸಿದ ಅವರು, ಇಂದು ಸಾಹಿತ್ಯ ಲೋಕದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ" ಎಂದು ಸ್ಮರಿಸಿದರು.

"ವೀರಪ್ಪ ಮೊಯ್ಲಿ ಅವರು ನಾಲ್ಕನೇ ತರಗತಿಯಲ್ಲಿದ್ದಾಗಲೇ ಕವಿತೆ ಬರೆಯುವ ಮೂಲಕ ಸಾಹಿತ್ಯದ ಒಲವು ಬೆಳೆಸಿಕೊಂಡವರು. ರಾಜಕೀಯ ಮತ್ತು ಸಾಹಿತ್ಯ ಎರಡನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವ ಅವರ ಸಾಧನೆ ವಿಶೇಷವಾದದ್ದು. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯಿಂದ ಬಂದು ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ರಾಜಕೀಯದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸಾಧನೆ ಮಾಡಿದ್ದಾರೆ" ಎಂದರು.

"ಸಿದ್ದರಾಮಯ್ಯ ಅವರಿಗೆ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಳಿಸಲು ಪ್ರೇರಣೆ ನೀಡಿದವರಲ್ಲಿ ಮೊಯ್ಲಿ ಪ್ರಮುಖರು. ಚಿಕ್ಕಬಳ್ಳಾಪುರ ಕ್ಷೇತ್ರದ ಜನರ ಋಣ ತೀರಿಸಲು ಶ್ರಮಿಸಿದ ಅವರು, ಸಿಇಟಿ ವ್ಯವಸ್ಥೆ ಜಾರಿಗೆ ತರುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಹೊಸ ಅವಕಾಶ ಕಲ್ಪಿಸಿದರು. ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಯಲ್ಲಿಯೂ ಅವರ ಕೊಡುಗೆ ಸ್ಮರಣೀಯವಾಗಿದೆ" ಎಂದು ತಿಳಿಸಿದರು.

"ಮೊಯ್ಲಿ ಅವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅವರ 'ರಾಮಾಯಣ ಮಹಾನ್ವೇಷಣಂ' ಕೃತಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದೆ. ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕುರಿತಂತೆ ಅವರು ಬರೆದಿರುವ ಭಾಗವನ್ನು ಪ್ರತ್ಯೇಕ ಪುಸ್ತಕವಾಗಿ ಪ್ರಕಟಿಸುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಜ್ಞಾನಪೀಠ ಸೇರಿದಂತೆ ಇನ್ನಷ್ಟು ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳು ಲಭಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ" ಎಂದರು.

"ರಾಜಕಾರಣಿಗಳಿಗೆ ಸಾರ್ವಜನಿಕ ಕೆಲಸಗಳ ಒತ್ತಡದ ನಡುವೆ ಸಾಹಿತ್ಯ ಮತ್ತು ಸಂಸ್ಕೃತಿಗಾಗಿ ಸಮಯ ಮೀಸಲಿಡುವುದು ಸುಲಭವಲ್ಲ. ಆದರೆ ಮೊಯಿಲಿ ಅವರು ರಾಜಕೀಯ ಜೀವನದ ನಡುವೆಯೂ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ. ರಾಜಕಾರಣಿಗಳಾದ ಎಂ.ಪಿ. ಪ್ರಕಾಶ್, ಬಂಗಾರಪ್ಪ, ಎಸ್ ಎಂ ಕೃಷ್ಣ ಸೇರಿದಂತೆ ಅನೇಕ ಹಿರಿಯ ನಾಯಕರು ಕೂಡ ಸಾಹಿತ್ಯ ಪ್ರೇಮಿಗಳಾಗಿದ್ದರು" ಎಂದು ಸ್ಮರಿಸಿದರು.

ಕನ್ನಡ ಭಾಷೆ, ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡಲು ಸರ್ಕಾರ ಬದ್ಧ

"ಕನ್ನಡ ಭಾಷೆ ಮತ್ತು ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ನೀಡುವ ವಿಚಾರವಾಗಿಯೂ ಸರ್ಕಾರ ಬದ್ಧವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಅವರು ಕನ್ನಡ ಧ್ವಜದ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಅಗತ್ಯ ಕಾನೂನು ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಂವಿಧಾನದಲ್ಲಿ ಇದಕ್ಕೆ ಯಾವುದೇ ನಿರ್ಬಂಧವಿಲ್ಲ. ಕನ್ನಡ ಭಾಷೆ ಮತ್ತು ಕನ್ನಡ ಬಾವುಟಕ್ಕೆ ವಿಶೇಷ ಗುರುತು ಹಾಗೂ ಗೌರವ ದೊರಕಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಬದ್ಧತೆಯಾಗಿದೆ" ಎಂದು ತಿಳಿಸಿದರು.

"ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಸುಮಾರು 55 ನಿಮಿಷಗಳ ಕಾಲ ಮಾಡಿದ ಅದ್ಭುತ ಸಾಹಿತ್ಯಿಕ ಭಾಷಣದಿಂದ ನಾನು ಪ್ರಭಾವಿತನಾಗಿದ್ದೆ. ಆ ಭಾಷಣವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಅವರ ಪುತ್ರ ಮಹಿಮಾ ಪಟೇಲ್ ಅವರಿಗೂ ಮನವಿ ಮಾಡಿದ್ದೆ" ಎಂದು ತಿಳಿಸಿದರು.

"ನೆಹರು ಅವರು ಜೈಲಿನಲ್ಲಿದ್ದಾಗಲೂ ಅನೇಕ ಪುಸ್ತಕಗಳನ್ನು ಬರೆದಿದ್ದರು. ಸೋನಿಯಾ ಗಾಂಧಿ ಅವರ ಆತ್ಮಕಥೆ ಈಗ ದೇಶದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ನಾನು ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಒಂದಷ್ಟು ಅನುಭವಗಳನ್ನು ಆಧರಿಸಿ 'ನೀರಿನ ಹೆಜ್ಜೆ' ಎಂಬ ಪುಸ್ತಕ ಬರೆದು ಸಿದ್ದರಾಮಯ್ಯ ಅವರಿಂದ ಬಿಡುಗಡೆ ಮಾಡಿಸಿದ್ದೆ. ಮಹಾತ್ಮ ಗಾಂಧೀಜಿ ಅವರ ನೂರು ವರ್ಷಗಳ ಇತಿಹಾಸ ಮತ್ತು ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಕಾರ್ಯಕ್ರಮದ ಕುರಿತು ಮತ್ತೊಂದು ಪುಸ್ತಕ ಸಿದ್ಧಪಡಿಸಿದ್ದು, ಸೂಕ್ತ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು" ಎಂದರು.

"ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲಿಯೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿರುವ ಹಿರಿಯ ನಾಯಕನಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಅವರ ಅನುಭವ ಮತ್ತು ಸೇವೆ ರಾಜ್ಯಕ್ಕೆ ಇನ್ನಷ್ಟು ದೊರೆಯಬೇಕು ಎಂಬ ಆಶಯದಿಂದ ನಾವೆಲ್ಲರೂ ಅವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಲು ಬಂದಿದ್ದೇವೆ" ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕೊಡದೆ ಇದ್ದರೂ ನಾವು ಕೊಡುತ್ತೇವೆ; ಬರಪರಿಹಾರ ಕುರಿತು ಆತಂಕ ಪಡಬೇಕಿಲ್ಲ ಎಂದ ಸಿಎಂ

ಸಾಹಿತ್ಯಕ್ಕೆ ಸಮಾಜವನ್ನು ಬದಲಿಸುವ ಶಕ್ತಿಯಿದೆ

"ಕತ್ತಿಗಿಂತ ಲೇಖನಿ ಹರಿತ ಎಂಬ ಮಾತಿನಂತೆ ಸಾಹಿತ್ಯಕ್ಕೆ ಸಮಾಜವನ್ನು ಬದಲಿಸುವ ಶಕ್ತಿಯಿದೆ. ಸುತ್ತೂರು ಶ್ರೀಗಳು ನೂರಾರು ಬರಹಗಾರರನ್ನು ಪ್ರೋತ್ಸಾಹಿಸಿ, ಅನೇಕ ಪುಸ್ತಕಗಳ ರಚನೆಗೆ ಪ್ರೇರಣೆ ನೀಡಿದ್ದಾರೆ. ಸಾಹಿತ್ಯ, ಆಧ್ಯಾತ್ಮಿಕ ಚಿಂತನೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಹಿರಿಯರು ನೀಡುತ್ತಿರುವ ಕೊಡುಗೆ ಅಪಾರ" ಎಂದು ಹೇಳಿದರು.