ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Mysuru Dasara 2026: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಹೇಗಿತ್ತು ನೋಡಿ; Video

Dasara Ayudha Puja at Mysuru Palace: ಮಂಗಳವಾರ ಬೆಳಗ್ಗೆ ಮೈಸೂರು ಅರಮನೆಯ ಕಲ್ಯಾಣ ಮಂಟಪದಲ್ಲಿ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಮನೆತನದ ಖಾಸಾ ಆಯುಧಗಳಿಗೆ, ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಅರಮನೆಯಲ್ಲಿ ವೈಭವದಿಂದ ಮಂಗಳವಾರ ಆಯುಧ ಪೂಜೆ (Ayudha Puja 2026) ನೆರವೇರಿಸಲಾಯಿತು. ಬೆಳಗ್ಗೆ 11:32 ರಿಂದ 11:52ರ ಒಳಗೆ ಕಲ್ಯಾಣ ಮಂಟಪದಲ್ಲಿ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಮನೆತನದ ಖಾಸಾ ಆಯುಧಗಳಿಗೆ, ಚಿನ್ನದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು.

ಶ್ರೀ ಕಂಠದತ್ತ ನರಸಿಂಹರಾಜ ಒಡೆಯರ್ ಸೇರಿ ರಾಜ ಮನೆತನದವರು ಬಳಸುತ್ತಿರುವ ವಾಹನಗಳು, ಅರಮನೆಯ ಕತ್ತಿ, ಈಟಿ, ಗುರಾಣಿ, ಸೇರಿದಂತೆ ಅರಮನೆಯ ಆಯುಧಗಳಿಗೆ ಹಾಗೇ ಜಂಬೂ ಸವಾರಿಯ ದಿನ ಕುಶಲ ತೋಪು ಸಿಡಿಸಲು ಬಳಸುವ ಪಿರಂಗಿ ಗಾಡಿಗಳಿಗೂ ಪೂಜೆ ಸಲ್ಲಿಸಲಾಯಿತು.



ಇದಕ್ಕೂ ಮುನ್ನ ಮಹಾನವಮಿ ಪ್ರಯುಕ್ತ ಅರಮನೆಯಲ್ಲಿ ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ ನೆರವೇರಿತು. 6.30ಕ್ಕೆ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಅರಮನೆಯಿಂದ ತಂದ ಆಯುಧಗಳಿಗೆ ಎಣ್ಣೆ ಶಾಸ್ತ್ರ ನಡೆಯಿತು. ಅರಮನೆಯ ಆನೆ ಬಾಗಿಲಿನ ಮೂಲಕ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳು ಆಗಮಿಸಿ ಖಾಸಾ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಸ್ವಚ್ಛಗೊಳಿಸಲಾಯಿತು. ಬಳಿಕ ಪಟ್ಟದ ಆನೆ ಶ್ರೀಕಂಠ, ಅರಮನೆ ನಿಶಾನೆ ಏಕಲವ್ಯ, ಪಟ್ಟದ ಕುದುರೆ, ಪಟ್ಟದ ಹಸು ಹಾಗೂ ಆಯುಧಗಳಿಗೆ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪೂಜೆ ಸಲ್ಲಿಸಿ, 8:30ರಿಂದ 8:50ರೊಳಗೆ ಮಂಗಲ ವಾದ್ಯಗಳೊಂದಿಗೆ ಅರಮನೆಗೆ ಬರಲಾಯಿತು.

ಅರಮನೆಯಲ್ಲಿ ಕಲ್ಯಾಣ ಮಂಟಪಕ್ಕೆ ಆಯುಧಗಳನ್ನು ತಂದು ಅವುಗಳ ಜೋಡಿಸಲಾಯಿತು. 9.15ಕ್ಕೆ ಚಂಡಿ ಹೋಮ ಪೂರ್ಣಾಹುತಿ ನಡೆಯಿತು. ನಂತರ ಮಹಾರಾಜ ಯದುವೀರ್​ ಒಡೆಯರ್​ ಅವರು ಕಲ್ಯಾಣಮಂಟಪದಲ್ಲಿ ಆಯುಧ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್​ ಹಾಗೂ ಮಹಾರಾಣಿ ತ್ರಿಷಿಕಾ ಕುಮಾರಿ ಒಡೆಯರ್​​ ಹಾಗೂ ಇಬ್ಬರು ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದರು.

ನಾಳೆ ಸಂಜೆ ಜಂಬೂಸವಾರಿ

ನಾಳೆ ಸಂಜೆ 4:10 ರಿಂದ 4:35 ರವರೆಗೆ ಅರಮನೆಯಲ್ಲಿ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಲಿದೆ. ಬಳಿಕ ಅರಮನೆಯಿಂದ ಬನ್ನಿಮಂಟಪದತ್ತ ಜಂಬೂಸವಾರಿ ಮೆರವಣಿಗೆ ಹೊರಡಲಿದೆ.

ಆಯುಧ ಪೂಜೆ, ಮಹಾನವಮಿ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುವ ಕಾರಣ ಅರಮನೆ ವೀಕ್ಷಣೆ ಇರುವುದಿಲ್ಲ.