Naxal Surrender: ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾದ ನಕ್ಸಲ್ ರವೀಂದ್ರ
Naxal Surrender: ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ನಕ್ಸಲ್ ರವೀಂದ್ರ, ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದೆ ಶರಣಾಗಿದ್ದಾರೆ. ಇವರ ವಿರುದ್ಧ ಒಟ್ಟು 26 ಪ್ರಕರಣಗಳು ದಾಖಲಾಗಿವೆ.
ಚಿಕ್ಕಮಗಳೂರು: ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಮುಂದೆ ಆರು ನಕ್ಸಲರು ಶರಣಾಗಿದ್ದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ಕೂಡ ಇದೀಗ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ನಕ್ಸಲ್ ರವೀಂದ್ರ, ಎಸ್ಪಿ ವಿಕ್ರಮ್ ಆಮ್ಟೆ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದೆ ಶರಣಾಗಿದ್ದಾರೆ.
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ನಿವಾಸಿಯಾಗಿರುವ ರವೀಂದ್ರ ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್ರ ನಾಯಕ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ರವೀಂದ್ರ ನಾಪತ್ತೆಯಾಗಿದ್ದರು. ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸಪಟ್ಟಿತ್ತು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಒಪ್ಪಿ ರವಿಂದ್ರ ಶರಣಾಗಿದ್ದಾರೆ.
ನಕ್ಸಲ್ ರವೀಂದ್ರ ಒಟ್ಟು 26 ಪ್ರಕರಣಗಳಲ್ಲಿ ಬೇಕಾಗಿದ್ದರು. ಇವರ ವಿರುದ್ಧ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಕೇಸ್ ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ.
17 ವರ್ಷಗಳ ಹಿಂದೆ ಮೂಲಭೂತ ಹಕ್ಕಿಗಾಗಿ ನಕ್ಸಲ್ ಚಳುವಳಿಯಲ್ಲಿ ಧುಮುಕಿದ್ದೆ. ಮನೆ ಸೇರಿ ಮೂಲಭೂತ ಸೌಕರ್ಯ ನೀಡಲು ಸರ್ಕಾರ ವಿಫಲವಾಗಿತ್ತು. ಈಗ ಸ್ವಲ್ಪ ಬದಲಾವಣೆ ಕಾಣುತ್ತಿದೆ. ಇದರಿಂದ ಸಮಾಜದ ಮುಖ್ಯ ವಾಹಿನಿಗೆ ಬರಲು ನಿರ್ಧಾರ ಮಾಡಿದ್ದೇನೆ. ಸರ್ಕಾರಕ್ಕೆ ನನ್ನ ಬೇಡಿಕೆಯ ಕುರಿತು ಪತ್ರ ನೀಡಿದ್ದೇನೆ ಎಂದು ನಕ್ಸಲ್ ರವೀಂದ್ರ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Road Accident: ಬಾಗಲಕೋಟೆಯಲ್ಲಿ ಭೀಕರ ಸರಣಿ ಅಪಘಾತ; ಮೂವರ ದುರ್ಮರಣ
ನಕ್ಸಲ್ ರವೀಂದ್ರ ಶರಣಾಗತಿಯೊದಿಗೆ ರಾಜ್ಯ ಸರ್ಕಾರ ನಡೆಸಿದ್ದ ಆಪರೇಷನ್ ನಕ್ಸಲ್ ಶರಣಾಗತಿ ಪೂರ್ಣಗೊಂಡಿದೆ. ರಾಜ್ಯವನ್ನು ನಕ್ಸಲ್ ಮುಕ್ತ ರಾಜ್ಯವನ್ನಾಗಿ ಮಾಡಲು ನಿರಂತರವಾಗಿ ಶ್ರಮಿಸಿದ 22 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಪದಕವನ್ನು ಘೋಷಿಸಿದ್ದಾರೆ. ಗುಪ್ತಚರ ಇಲಾಖೆ ನಕ್ಸಲ್ ಶರಣಾಗತಿ ಮಾಹಿತಿ ನೀಡಿದ್ದು, ಕರ್ನಾಟಕವು ಸಂಪೂರ್ಣವಾಗಿ ನಕ್ಸಲ್ ಮುಕ್ತ ರಾಜ್ಯವಾಗಿದೆ ಎಂದು ಖಚಿತಪಡಿಸಿದೆ.
ಆರು ನಕ್ಸ್‌ಲೈಟ್‌ಗಳು ರಾಜ್ಯ ಸರ್ಕಾರದ ಎದುರು ಶರಣಗಾಗಿದ್ದರೂ ಕೋಟೆಹೊಂಡ ರವಿ ಮಾತ್ರ ಮುಖ್ಯವಾಹಿನಿಗೆ ಬಾರದೇ ಇದ್ದಿದ್ದು ಆತನ ಕುಟುಂಬಕ್ಕೆ ಬೇಸರ ಮೂಡಿಸಿತ್ತು. ರವೀಂದ್ರ ಶರಣಾದರೆ ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಕುಟುಂಬದವರು ಮಾಧ್ಯಮಗಳಿಗೆ ಹಿಂದೆ ತಿಳಿಸಿದ್ದರು. ಇದೀಗ ಆತ ಮುಖ್ಯವಾಹಿನಿಗೆ ಬರಲು ಒಪ್ಪಿ, ಶರಣಾಗಿದ್ದಾನೆ.