ಬೆಳಗಾವಿ, ಜ. 1: ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಸಂಸ್ಥಾಪಕ ಹಾಗೂ ಕುಲಾಧಿಪತಿ ವಿನಯ್ ಹೆಗ್ಡೆ (83) ಅವರ (Vinay Hedge) ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಸಂತಾಪ ಸೂಚಿಸಿದ್ದಾರೆ.
ʼʼದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಶೈಕ್ಷಣಿಕವಾಗಿ ತಮ್ಮದೇ ಕೊಡುಗೆ ನೀಡಿರುವ ವಿನಯ್ ಹೆಗ್ಡೆ ಅವರ ಅಗಲಿಕೆಯಿಂದ ಓರ್ವ ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಂತೆ ಆಗಿದೆ. ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ದಿ. ಕೆ.ಎಸ್. ಹೆಗ್ಡೆ ಅವರ ಎರಡನೇ ಪುತ್ರ ವಿನಯ್ ಹೆಗ್ಡೆ ಸ್ಥಾಪಿಸಿರುವ ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಇನ್ನಿತರ ಕೋರ್ಸ್‌ಗಳು ಇವೆ. ಇತ್ತೀಚೆಗೆ ನಿಟ್ಟೆ ಶಿಕ್ಷಣ ಸಂಸ್ಥೆಗೆ ಪರಿಗಣಿತ ವಿವಿ ಮಾನ್ಯತೆ ದೊರೆತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಬಡ ಮಕ್ಕಳಿಗೂ ಉನ್ನತ ಶಿಕ್ಷಣ ಸಿಗುವಂತೆ ಮಾಡಿದ್ದರುʼʼ ಎಂದು ಅವರು ತಿಳಿಸಿದ್ದಾರೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ತಾಯಿ ಶಾಂತಕುಮಾರಿ ನಿಧನ
ʼʼವಿನಯ್ ಹೆಗ್ಡೆ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ, ಬಂಧು ಬಳಗಕ್ಕೆ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುವೆʼʼ ಎಂಬುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿಯ ನಿಟ್ಟೆ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ, ನ್ಯಾ. ಸಂತೋಷ್ ಹೆಗ್ಡೆ ಅವರ ಸೋದರ ಡಾ. ಎನ್. ವಿನಯ ಹೆಗ್ಡೆ ಗುರುವಾರ ಬೆಳಗಿನ ಜಾವ ನಿಧನರಾದರು. ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಅವರು ಗುರುತಿಸಿಕೊಂಡಿದ್ದರು. ವಿನಯ ಹೆಗ್ಡೆ ಅವರು ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರ.
ಪ್ರಸ್ತುತ ಅವರು ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಲೆಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಲೆಮಿನಾ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿದ್ದರು.