ಬೆಂಗಳೂರು, ಅ. 24: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟರೂ, ಹಿಂಗಾರು ಮಳೆ ಕೈ ಹಿಡಿಯುವ ಸಾಧ್ಯತೆ ಇದೆ (Karnataka Weather). ಅದರ ಸೂಚನೆ ಎಂಬಂತೆ ನಿಧಾನವಾಗಿ ಮುಂಗಾರು ಚುರುಕು ಪಡೆದುಕೊಂಡಿದೆ. ರಾಜ್ಯಾದ್ಯಂತ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇಂದೂ (ಶನಿವಾರ) ಬೆಂಗಳೂರು ಸಹಿತ ವಿವಿಧ ಕಡೆಗಳಲ್ಲಿ ವರ್ಷಧಾರೆಯಾಗಿದೆ. ಆರೆಂಜ್ ಅಲರ್ಟ್ ಘೋಷಿಸಿದ್ದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ, ಮೈಸೂರು ಮತ್ತು ಚಾಮರಾಜನಗರದಲ್ಲಿ ಧಾರಾಕಾರ ಮಳೆ ಸುರಿಯಿತು. ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅನಾಹುವೇ ಸೃಷ್ಟಿಯಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರಿನಲ್ಲಿ ಬೆಳಗ್ಗೆಯೇ ತುಂತುರು ಮಳೆಯಾಗಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು ನೆನೆದುಕೊಂಡೇ ಶಾಲೆ, ಕಚೇರಿಗಳಿಗೆ ತೆರಳುವಂತಾಯಿತು.
ರಾಜ್ಯದ ಬಹುತೇಕ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣ ಕಂಡುಬಂತು. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ ಸುರಿಯಿತು. ಅತೀ ಹೆಚ್ಚು ಮಳೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಎಡಬ್ಲ್ಯುಎಸ್‌ನಲ್ಲಿ ಸುರಿದಿದೆ (10 ಸೆಂಟಿ ಮೀಟರ್). ಇನ್ನು ಧರ್ಮಸ್ಥಳ (ದಕ್ಷಿಣ ಕನ್ನಡ), ಕೊಣನೂರು (ಹಾಸನ) ತಲಾ 8 ಸೆಂ.ಮೀ., ಹುಬ್ಬಳ್ಳಿ (ಧಾರವಾಡ), ಕುಶಾಲನಗರ (ಕೊಡಗು), ಪೊನ್ನಂಪೇಟೆ ಪಿಡಬ್ಲ್ಯುಡಿ (ಕೊಡಗು) ತಲಾ 7 ಸೆಂ.ಮೀ. ಮಳೆಯಾಗಿದೆ. ಇನ್ನು ಬೆಂಗಳೂರಿನ ಟಿ.ಜಿ. ಹಳ್ಳಿ ಎಚ್‌ಎಂಎಸ್‌ನಲ್ಲಿ 4 ಸೆಂ.ಮೀ. ವರ್ಷಧಾರೆಯಾಗಿದೆ.
ಧರ್ಮಸ್ಥಳದಲ್ಲಿ ಭಾರಿ ಮಳೆ:
ಮುಂದಿನ ದಿನಗಳ ಹವಾಮಾನ ಹೇಗಿರಲಿದೆ?
ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಮುಂದಿನ 7 ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ. ಭಾನುವಾರ (ಅಕ್ಟೋಬರ್ 25) 3 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೈಸೂರು, ಚಾಮರಾಜನಗರ ಮತ್ತು ಕೋಲಾರದಲ್ಲಿ ಉತ್ತಮ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಇದೆ. ಇನ್ನು ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಹುತೇಕ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ: ಅಕ್ಟೋಬರ್ 28ರಿಂದ ಭಾರಿ ಮಳೆ ಸಾಧ್ಯತೆ
ದಕ್ಷಿಣ ಒಳನಾಡಿನ ಕೋಲಾರ, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ವರ್ಷಧಾರೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇನ್ನು ಬಳ್ಳಾರಿ, ಬೆಂಗಳೂರು (ನಗರ, ಗ್ರಾಮಾಂತರ), ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಂಡ್ಯ, ಚಿತ್ರದುರ್ಗ, ದಾವಣಗೆರೆ, ಹಾಸನ ಕೊಡಗು, ಶಿವಮೊಗ್ಗ, ತುಮಕೂರು, ರಾಮನಗರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ.
ಸೋಮವಾರವೂ ಕರಾವಳಿ, ಬೆಂಗಳೂರು ಸಹಿತ ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 24ರಿಂದ 26ರವರೆಗೆ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಂತೆ ಸೂಚಿಸಲಾಗಿದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.