ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

UT Khader: ಸ್ಪೀಕರ್‌ ಸಭಾತ್ಯಾಗ ಪ್ರಕರಣ: 8 ಹಿರಿಯ ಐಎಎಸ್‌ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್, ಸಚಿವರಿಗೂ ಪತ್ರ

ಸ್ಪೀಕರ್ ಯುಟಿ ಖಾದರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕಾರಣ ಕೇಳಿ ಬರೋಬ್ಬರಿ ಎಂಟು ಇಲಾಖೆಯ ಹಿರಿಯ ಐಎಎಸ್​ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾರ್ಚ್ 17: ನಿನ್ನೆ ನಡೆದ ಕರ್ನಾಟಕ ವಿಧಾನಸಭೆ ಅಧಿವೇಶನ (Karnataka Assembly Session 2026) ದಲ್ಲಿ, ಸದನದಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ಕೊಡುತ್ತಿಲ್ಲ ಎಂದು ಸಿಟ್ಟಾದ ಸ್ಪೀಕರ್ ಯು.ಟಿ ಖಾದರ್ (speaker UT Khader) ಸಭಾತ್ಯಾಗ ಮಾಡಿ ಸರ್ಕಾರಕ್ಕೆ ಚುರುಕು ಮುಟ್ಟಿಸಿದ್ದರು. ಇದರ ಬೆನ್ನಲ್ಲೇ ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕಾರಣ ಕೇಳಿ ಬರೋಬ್ಬರಿ ಎಂಟು ಇಲಾಖೆಯ ಹಿರಿಯ ಐಎಎಸ್​ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

ಬಜೆಟ್ ಕಲಾಪದ (Budget Session) 7 ನೇ ದಿನವಾದ ಸೋಮವಾರ ಕೂಡ ಕಲಾಪ ನಡೆಸಲು ಸ್ಪೀಕರ್‌ ವಿಧಾನಸಭೆಗೆ ಆಗಮಿಸಿದ್ದರು. ಆದರೆ ಸಚಿವರು, ಅಧಿಕಾರಿಗಳು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಅನುಪಸ್ಥಿತರಿದ್ದರು. ಇದಕ್ಕೆ ಮುನಿಸಿಕೊಂಡು ಸ್ಪೀಕರ್‌ ಖಾದರ್‌ ಪೀಠದಿಂದ ಹೊರಹೋಗಿದ್ದರು. ಸ್ಪೀಕರ್ ಅಸಮಧಾನಗೊಂಡು ಎದ್ದು ಹೋಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಬೇಸರಗೊಂಡಿದ್ದು, ಅಧಿವೇಶನದಲ್ಲಿ ಶಾಸಕರುಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡದ ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್​ ಅವರು 8 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಸದನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಈ ಕೆಳಗಿನ ಬರೋಬ್ಬರಿ 8 ಇಲಾಖೆಯ ಕಾರ್ಯದರ್ಶಿಗಳಿಗೆ ನೋಟಿಸ್ ನೀಡಲಾಗಿದೆ.

ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ- ಆರ್​. ವಿನೋತ್ ಪ್ರಿಯಾ

ವಸತಿ ಇಲಾಖೆ ಕಾರ್ಯದರ್ಶಿ- ಮೋಹನ್​ ರಾಜ್​ ಕೆ.ಪಿ

ಸಾರಿಗೆ ಇಲಾಖೆ ಕಾರ್ಯದರ್ಶಿ-ಎನ್​.ವಿ ಪ್ರಸಾದ್

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ- ಆರ್​.ಗೀರಿಶ್​

ಲೋಕಪಯೋಗಿ ಇಲಾಖೆ ಕಾರ್ಯದರ್ಶಿ-ಅಮಲಾನ್ ಆದಿತ್ಯ ಬಿಸ್ವಾಸ್

ಕಂದಾಯ ಇಲಾಖೆ-ರಾಜೇಂದರ್​ ಕುಮಾರ್ ಕಟಾರಿಯಾ

ಸರ್ಕಾರಕ್ಕೆ ತೀವ್ರ ಮುಜುಗರ, ಶಾಸಕರ ಹಕ್ಕು, ಸದನದ ಘನತೆಗೆ ಚ್ಯುತಿಯುಂಟು ಮಾಡಿರುತ್ತದೆ. ಸದನದಲ್ಲಿ ಪಶ್ನೆಗಳಿಗೆ ಏಕೆ ಉತ್ತರ ನೀಡಿಲ್ಲ? ಉತ್ತರಿಸದ ಬಗ್ಗೆ ಲಿಖಿತ ಸಮಜಾಯಿಷಿ ನೀಡುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಇಂದೇ ವಿಧಾನ ಸಭೆ ಕಾರ್ಯದರ್ಶಿಗೆ ಉತ್ತರ ಒದಗಿಸುವಂತೆ ಸೂಚಿಸಲಾಗಿದೆ. ಉತ್ತರ ಒದಗಿಸದೆ ಇದ್ದರೆ ಶಾಸಕರಿಗೆ ಸಚಿವರ ಮೂಲಕ ವಿಳಂಬಕ್ಕೆ ಕಾರಣ ನೀಡಿ ಎಂದು ನೋಟಿಸ್ ಜಾರಿ ಮಾಡಲಾಗಿದೆ.

ಸಚಿವರ ನಡೆಗೆ ಸ್ಫೀಕರ್​ ಕೆಂಡಾಮಂಡಲ

ಬಜೆಟ್ ಕಲಾಪದ 7ನೇ ಸೋಮವಾರ ಕಲಾಪ ನಡೆಸಲು ಸ್ಪೀಕರ್‌ ವಿಧಾನಸಭೆಗೆ ಆಗಮಿಸಿದ್ದರು. ಆದರೆ ಸಚಿವರು, ಅಧಿಕಾರಿಗಳು ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಅನುಪಸ್ಥಿತರಿದ್ದರು. ಇದಕ್ಕೆ ಮುನಿಸಿಕೊಂಡು ಪೀಠದಿಂದ ಹೊರಹೋದರು. ಸಚಿವರ ಕಾರ್ಯವೈಖರಿಗೆ ಸದನದಲ್ಲೇ ಗರಂ ಆದ ಸ್ಪೀಕರ್, 230ರ ಪ್ರಶ್ನೆಗಳಲ್ಲಿ 84 ಪ್ರಶ್ನೆಗಳಿಗೆ ಮಾತ್ರ ಸಚಿವರು ಉತ್ತರಿಸಿದ್ದಾರೆ. ಈ ಬಗ್ಗೆ ಮೊನ್ನೆಯೇ ಮಂತ್ರಿಗಳು ಮತ್ತು ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಲಾಗಿತ್ತು. ಕಲಾಪ ನಡೆಸುವುದು ಮಂತ್ರಿಗಳಿಗಾಗಿ ಅಲ್ಲ, ಶಾಸಕರ ಸಮಸ್ಯೆಗಳಿಗಾಗಿ. ಎಲ್ಲಾ ಪಕ್ಷಗಳ ಶಾಸಕರೂ ಪ್ರಶ್ನೆಗಳನ್ನ ಕೇಳುತ್ತಾರೆ. ನಿಯಮಾವಳಿ ಪ್ರಕಾರ ಕೇಳಿದ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಲಿಲ್ಲ ಅಂದ್ರೆ ಹೇಗೆ? ಹಾಗಾದರೆ ಶಾಸಕರು ಸದನಕ್ಕೆ ಯಾಕೆ ಬರಬೇಕು ಹೇಳಿ? ಸರಿಯಾದ ಸಮಯಕ್ಕೆ ಮಂತ್ರಿಗಳು ಬರುವುದಿಲ್ಲ. ಹಿಂದೆಯೂ ಈ ಬಗ್ಗೆ ಸೂಚನೆ ನೀಡಿದ್ದೇನೆ. ಈಗಾಗಲೇ ನಾಲ್ಕು ಭಾರಿ ಸೂಚನೆ ನೀಡಿದ್ದೇನೆ. ಇಂದು ಸೇರಿ ಐದನೇ ಬಾರಿಯೂ ಸುಧಾರಿಸದಿದ್ದರೆ ಏನು ಮಾಡುವುದು? ಸುಧಾರಣೆ ಕಾಣಲೇ ಇಲ್ಲ. ಹೀಗಾದರೆ ಸದನ ನಡೆಸುವುದು ಹೇಗೆ? ಹಾಗಾಗಿ ಸಚಿವರು ಬಂದು ಉತ್ತರ ಹೇಳುವವರೆಗೂ ಸದನ ನಡೆಸುವುದಿಲ್ಲ ಎಂದು ಹೇಳಿ ಸ್ಪೀಕರ್ ಖಾದರ್ ಪೀಠದಿಂದ ಎದ್ದು ಹೋಗಿದ್ದರು.

ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ

ಗರಂ ಆಗಿ ಸದನ ಮುಂದೂಡಿದ್ದಲ್ಲದೆ ಪೀಠದಿಂದಲೇ ಎದ್ದು ಹೊರ ನಡೆದ ಯು.ಟಿ. ಖಾದರ್​​ ಅವರನ್ನು ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಮನವೊಲಿಸಿದ್ದಾರೆ. ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ. 8 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ.

ಸಚಿವರಿಗೂ ಪತ್ರ

ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರಿಸದಿರುವ ಸಚಿವರುಗಳಿಗೂ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಹೀಗಿದೆ:

ಕರ್ನಾಟಕ ವಿಧಾನಸಭೆಯ 16ನೇ ವಿಧಾನಸಭೆ (2023-2026) 1ನೇ ಅಧಿವೇಶನದಿಂದ 9ನೇ ಅಧಿವೇಶನದವರೆಗೆ ಉತ್ತರ ಬಾರದಿರುವ ಇಲಾಖಾವಾರು ಪ್ರಶ್ನೆಗಳ ಪಟ್ಟಿಯನ್ನು ಮತ್ತು ದಿನಾಂಕ:16.03.2026ರಂದು ನಡೆದ ಸದನ ಸಭೆಯಲ್ಲಿ 245 ಪ್ರಶ್ನೆಗಳಲ್ಲಿ ಇದುವರೆಗೂ 90 ಪ್ರಶ್ನೆಗಳಿಗೆ ಮಾತ್ರ ಉತ್ತರವನ್ನು ಒದಗಿಸಿರುವುದು ಕಂಡುಬಂದಿರುತ್ತದೆ (ಪಟ್ಟಿ ಲಗತ್ತಿಸಿದೆ). ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರಗಳನ್ನು ಇದುವರೆಗೂ ಕಳುಹಿಸದೇ ಇರುವುದು ವಿಧಾನಸಭಾ ಸದಸ್ಯರುಗಳು ಸದನದಲ್ಲಿ ಚರ್ಚಿಸಲು ಅನಾನುಕೂಲತೆಯನ್ನು ಉಂಟು ಮಾಡಿರುತ್ತದೆ. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡುವುದರೊಂದಿಗೆ ಶಾಸಕರುಗಳ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯನ್ನುಂಟು ಮಾಡಿರುತ್ತದೆ.

ಈ ಸಂಬಂಧ ಇಂದು ನಡೆದ ಸಭೆಯಲ್ಲಿ ಮಾನ್ಯ ಸಭಾಧ್ಯಕ್ಷರು ತೀವು ಅಸಮಾಧಾನ ವ್ಯಕ್ತಪಡಿಸಿರುತ್ತಾರೆ. ಆದುದರಿಂದ ತಮ್ಮ ಇಲಾಖೆಯ ವತಿಯಿಂದ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಉತ್ತರವನ್ನು ಸಕಾಲದಲ್ಲಿ ವಿಧಾನಮಂಡಲಕ್ಕೆ ಕಳುಹಿಸದೇ ಇರುವ ಬಗ್ಗೆ ಇಲಾಖಾ ಕಾರ್ಯದರ್ಶಿಗಳ ವಿವರಣೆಯನ್ನು ತಕ್ಷಣ ನೀಡಲು ಸೂಚಿಸಲಾಗಿದೆ. ಅಲ್ಲದೆ, ಉತ್ತರ ಕಳುಹಿಸದ ಸಂದರ್ಭದಲ್ಲಿ ಸಂಬಂಧಪಟ್ಟ ಶಾಸಕರಿಗೆ ಪ್ರತ್ಯೇಕ ಪತ್ರವನ್ನು ಕಳುಹಿಸಿ ಹಾಗೂ ಮಾಹಿತಿ ಒದಗಿಸುವ ನಿರ್ಧಿಷ್ಟ ಸಮಯವನ್ನು

ತಿಳಿಸಲು ಸಹ ಸೂಚಿಸಿದೆ.

ಹರೀಶ್‌ ಕೇರ

View all posts by this author