ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಪಾಕ್‌ ಪ್ರೇರಿತ ಭಯೋತ್ಪಾದನಾ ಕೃತ್ಯಕ್ಕೆ ಪ್ರತೀಕಾರ ಶತಸಿದ್ಧ: ಪ್ರಲ್ಹಾದ್‌ ಜೋಶಿ

Pahalgam Terror Attack: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಭಯೋತ್ಪಾದನೆಗೆ ಇತಿಶ್ರೀ ಹಾಡಲು ಸಂಕಲ್ಪ ತೊಟ್ಟಿದೆ. ಪಹಲ್ಗಾಮ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಮಾಯಕರನ್ನು ಬಲಿ ಪಡೆದಿರುವ ಪಾಕ್‌ ಉಗ್ರರನ್ನು ಸೆದೆ ಬಡಿಯುತ್ತದೆ. ದುಷ್ಕೃತ್ಯವೆಸಗಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಮೊದಲ ಹೆಜ್ಜೆ ಎನ್ನುವಂತೆ ರಾಜತಾಂತ್ರಿಕವಾಗಿ 5 ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಪಾಕಿಸ್ತಾನ ಪ್ರೇರಿತವಾಗಿ ಭಯೋತ್ಪಾದನಾ ದಾಳಿ (Pahalgam Terror Attack)‌ ನಡೆದಿದ್ದು, ಭಾರತ ಇದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದು ಶತಸಿದ್ಧ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದರು. ಭಯೋತ್ಪಾದಕ ದಾಳಿಗೆ ತುತ್ತಾದ ಶಿವಮೊಗ್ಗದ ಉದ್ಯಮಿ ಮಂಜುನಾಥ ರಾವ್‌ ಅವರ ಪಾರ್ಥಿವ ಶರೀರಕ್ಕೆ ಕೇಂದ್ರ ಸರ್ಕಾರದ ಪರವಾಗಿ ಶ್ರದ್ಧಾಂಜಲಿ, ನುಡಿ ನಮನ ಸಲ್ಲಿಸಿದ ಸಚಿವರು, ಇತ್ತೀಚಿನ ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ನೆಲೆಸಿದ್ದ ಶಾಂತಿ-ಸೌಹಾರ್ದತೆಗೆ ಪಾಕ್‌ ಪ್ರೇರಿತವಾಗಿ ಭಯೋತ್ಪಾದಕರು ಕೊಳ್ಳಿಯಿಡುವ ಕೃತ್ಯವೆಸಗಿದ್ದಾರೆ. ಭಾರತ ಇದಕ್ಕೆ ತಕ್ಕ ಶಾಸ್ತಿ ಮಾಡುತ್ತದೆ ಎಂದು ಹೇಳಿದರು.

ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ ರಾವ್‌ ಸೇರಿ 27 ಜನ ಬಲಿಯಾಗಿದ್ದಾರೆ. ಭಾರತ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಕುಕೃತ್ಯವೆಸಗಿದ ಭಯೋತ್ಪಾದಕರನ್ನು ಹಾಗೇ ಬಿಡುವುದಿಲ್ಲ. ನಮ್ಮ ಜನರ ಸಾವು-ನೋವು ತಂದೊಡ್ಡಿದವರಿಗೆ ತಕ್ಕ ಪಾಠ, ಶಿಕ್ಷೆ ವಿಧಿಸಿಯೇ ತೀರುತ್ತೇವೆ ಎಂದು ಹೇಳಿದರು.

ಭಯೋತ್ಪಾದನೆಗೆ ಇತಿಶ್ರೀ ಹಾಡಲು ಸಂಕಲ್ಪ

ಮೋದಿ ಸರ್ಕಾರ ಭಯೋತ್ಪಾದನೆಗೆ ಇತಿಶ್ರೀ ಹಾಡಲು ಸಂಕಲ್ಪ ತೊಟ್ಟಿದೆ. ಪಹಲ್ಗಾಮ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಮಾಯಕರನ್ನು ಬಲಿ ಪಡೆದಿರುವ ಪಾಕ್‌ ಉಗ್ರರನ್ನು ಸೆದೆ ಬಡಿಯುತ್ತದೆ. ದುಷ್ಕೃತ್ಯವೆಸಗಿದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಮೊದಲ ಹೆಜ್ಜೆ ಎನ್ನುವಂತೆ ರಾಜತಾಂತ್ರಿಕವಾಗಿ 5 ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಿ ಭಯೋತ್ಪಾದನಾ ಚಟುವಟಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಅವರು ಪಹಲ್ಗಾಮ್‌ಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ್ದು, ಅಲ್ಲಿನ ಪ್ರವಾಸಿಗರ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೃತಪಟ್ಟವರ ಪಾರ್ಥೀವ ಶರೀರಗಳನ್ನು ಕುಟುಂಬದವರಿಗೆ ತಲುಪಿಸುವ ಕಾರ್ಯ ಕೈಗೊಂಡಿದ್ದಾರೆ ಎಂದರು.

ಇಡೀ ದೇಶ ಒಟ್ಟಾಗಿ ಎದುರಿಸಬೇಕು

ಜಮ್ಮು-ಕಾಶ್ಮೀರ ಸೇರಿದಂತೆ ದೇಶದೆಲ್ಲಡೆ ಇತ್ತೀಚಿನ ವರ್ಷಗಳಲ್ಲಿ ಭಯಯೋತ್ಪಾದನಾ ಚಟುವಟಿಕೆ ಇಲ್ಲದಂತಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅದನ್ನು ಮಟ್ಟ ಹಾಕಿತ್ತು. ಇದೀಗ ಪಾಕ್‌ ಪ್ರೇರಿತ ಭಯೋತ್ಪಾದಕರು ಬಾಲ ಬಿಚ್ಚಿದ್ದು, ಭಾರತ ಸರ್ಕಾರ ಅದನ್ನು ತುಂಡರಿಸುತ್ತದೆ. ಇಡೀ ದೇಶವೇ ಒಗ್ಗಟ್ಟಾಗಿ ಭಯೋತ್ಪಾದನೆಯನ್ನು ಎದುರಿಸಲಿದೆ ಸಂದೇಶ ರವಾನಿಸಿದರು.

ಪಾರ್ಟಿ-ಪಕ್ಷ ಎನ್ನದೆ ಭಯೋತ್ಪಾದನೆ ಪಿಡುಗಿನ ವಿರುದ್ಧ ಹೋರಾಟ

ಪಹಲ್ಗಾಮ್‌ನಲ್ಲಿ ನಡೆದ ಈ ಭಯೋತ್ಪಾದನಾ ಕೃತ್ಯದ ವಿರುದ್ಧ ನಾವೆಲ್ಲ ಪಾರ್ಟಿ-ಪಕ್ಷ, ಜಾತಿ-ಪಂಥವನ್ನು ಮೀರಿ ಹೋರಾಡಬೇಕಿದೆ. ದೇಶವಾಸಿಗಳೆಲ್ಲ ಒಟ್ಟಾಗಿ ಭಯೋತ್ಪಾದನಾ ಚಟುವಟಿಕೆಯನ್ನು ಕೊನೆಗಾಣಿಸಬೇಕಿದೆ ಎಂದು ಅವರು ಕರೆ ನೀಡಿದರು.

ಪ್ರವಾಸೋದ್ಯಮ ಬೆಳವಣಿಗೆ ಸಹಿಸದೆ ದುಷ್ಕೃತ್ಯ

ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಇತ್ತೀಚಿನ ವರ್ಷಗಲ್ಲಿ ಬಹು ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮ ಬೆಳೆದಿದೆ. ಹಿಂದೆ ಐದಾರು ಲಕ್ಷ ಇದ್ದ ಪ್ರವಾಸಿಗರ ಸಂಖ್ಯೆ ಈಗ 25 ಲಕ್ಷಕ್ಕೆ ಏರಿಕೆ ಕಂಡಿದೆ. ಅಷ್ಟರ ಮಟ್ಟಿಗೆ ಪ್ರವಾಸೋದ್ಯಮ ಅಭಿವೃದ್ಧಿ ಕಂಡಿದೆ. ಅನೇಕರ ಜೀವನವನ್ನು ರೂಪಿಸಿದ್ದು, ಆರ್ಥಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಅಲ್ಲದೇ, ಶಾಂತಿ-ಸೌಹಾರ್ದತೆ ಸಹ ನೆಲೆಸಿದೆ. ಇದರ ಮೇಲೆ ಉಗ್ರರ ಕೆಟ್ಟ ಕಣ್ಣು ಬಿದ್ದಿದ್ದು, ಪಾಕ್‌ ಪ್ರೇರಿತವಾಗಿ ಕೊಳ್ಳಿಯಿಡುವ ಕೃತ್ಯವೆಸಗಿದ್ದಾರೆ ಎಂದು ಕಿಡಿ ಕಾರಿದರು.

ಪಹಲ್ಗಾಮ್‌ ಭಯೋತ್ಪಾದನಾ ದಾಳಿಗೆ ತುತ್ತಾದ ಮಲೆನಾಡಿನ ಮಗನಿಗೆ ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಶ್ರದ್ಧಾಂಜಲಿ ಸಲ್ಲಿಸಿದರು. ಕಾಶ್ಮೀರ ಪ್ರವಾಸದಲ್ಲಿದ್ದಾಗ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರ ಪಾರ್ಥಿವ ಶರೀರಕ್ಕೆ ಅಂತಿಮವಾಗಿ ಪುಷ್ಪ ನಮನ ಸಲ್ಲಿಸಿದರು.

ಇದೇ ವೇಳೆ ಮಂಜುನಾಥ ರಾವ್‌ ಪತ್ನಿ ಪಲ್ಲವಿ ಮತ್ತು ಅವರ ತಾಯಿಗೆ ಸಾಂತ್ವನ ಹೇಳಿದ ಸಚಿವರು, ಕೇಂದ್ರ ಸರ್ಕಾರ ಮತ್ತು ಇಡೀ ದೇಶದ ಜನ ತಮ್ಮ ಜತೆಗಿದೆ ಎಂದು ಆತ್ಮಸ್ಥೈರ್ಯ ತುಂಬಿದರು. ಭಗವಂತ ಮಂಜುನಾಥ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ಭರಿಸಲಿ ಎಂದು ಪ್ರಾರ್ಥಿಸಿದರು. ಮಂಜುನಾಥ ಅವರ ಪಾರ್ಥಿವ ಶರೀರವನ್ನು ಶಿವಮೊಗ್ಗ ನಗರಕ್ಕೆ ತರುತ್ತಲೇ ನೆರೆದವರು ʼಪಾಪಿ(ಕಿ)ಸ್ತಾನಕ್ಕೆ ದಿಕ್ಕಾರ-ಮಂಜುನಾಥ್‌ ರಾವ್‌ ಅಮರ್‌ ರಹೇ..ʼ ಘೋಷಣೆ ಮೊಳಗಿಸಿದರು.

ಈ ಸುದ್ದಿಯನ್ನೂ ಓದಿ | Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ; ಪಾಕಿಸ್ತಾನ ಹೈಕಮಿಷನ್ ಹೊರಗೆ ಭಾರಿ ಪ್ರತಿಭಟನೆ

ಸಂಸದ ಬಿ.ವೈ. ರಾಘವೇಂದ್ರ, ಹಾಗೂ ಶಿವಮೊಗ್ಗದ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಮೃತ ಮಂಜುನಾಥ ರಾವ್‌ ಅವರ ಬಳಗ ಅಂತಿಮ ನಮನ ಸಲ್ಲಿಸಿದರು.