ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಿಗೂಢವಾಗಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ ಪಾಲಕರು ಶೀಘ್ರದಲ್ಲೇ ಅಮೆರಿಕಕ್ಕೆ; ತನಿಖೆ ಏನಾಯ್ತು?

Saketh Sreenivasaiah: ಅಮೆರಿಕದ ಕ್ಯಾಲಿಫೋರ್ನಿಯಕ್ಕೆ ಉನ್ನತ ಶಿಕ್ಷಣಕ್ಕೆ ತೆರಳಿದ ತುಮಕೂರಿನ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ ಅವರ ಸಾವನ್ನು ಇನ್ನೂ ಪಾಲಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನಿಖೆಯನ್ನು ಗಮನಿಸಲು ಅವರು ಅಮೆರಿಕಕ್ಕೆ ತೆರಳಲು ನಿರ್ಧಿಸಿದ್ದಾರೆ.

ಸಾಕೇತ್‌ ಶ್ರೀನಿವಾಸಯ್ಯ (ಸಂಗ್ರಹ ಚಿತ್ರ)

ಬೆಂಗಳೂರು, ಫೆ. 16: ಅಮೆರಿಕದ ಕ್ಯಾಲಿಫೋರ್ನಿಯಕ್ಕೆ ಉನ್ನತ ಶಿಕ್ಷಣಕ್ಕೆ ತೆರಳಿದ ತುಮಕೂರಿನ 22 ವರ್ಷದ ಸಾಕೇತ್‌ ಶ್ರೀನಿವಾಸಯ್ಯ (Saketh Sreenivasaiah) ಮೃತಪಟ್ಟಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳಲು ಅವರ ಪಾಲಕರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕ್ಯಾಲಿಫೋರ್ನಿಯಕ್ಕೆ ತೆರಳಿ ಸ್ವತಃ ಅವರೇ ಮೃತದೇಹವನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ. ಅಲ್ಲದೆ ಸಾವಿನ ಬಗ್ಗೆ ಕೈಗೆತ್ತಿಕೊಂಡ ತನಿಖೆಯ ಪ್ರಗತಿಯನ್ನೂ ಗಮನಿಸಲಿದ್ದಾರೆ. ಫೆಬ್ರವರಿ 9ರಂದು ನಾಪತ್ತೆಯಾದ ಸಾಕೇತ್‌ 6 ದಿನಗಳ ನಂತರ ಅಂದರೆ ಫೆಬ್ರವರಿ 15ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಸಾವು ಇನ್ನೂ ನಿಗೂಢತೆಯಿಂದ ಕೂಡಿದ್ದು, ಕಾರಣ ತಿಳಿದು ಬಂದಿಲ್ಲ.

2025ರಲ್ಲಿ ಐಐಟಿ-ಮದ್ರಾಸ್‌ನಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಪಡೆದಿದ್ದ ಸಾಕೇತ್‌ ಅಮೆರಿಕದ ಬರ್ಕಲಿಯಲ್ಲಿನ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಕೆಮಿಕಲ್‌ ಆ್ಯಂಡ್‌ ಬಯೋಮಾಲಿಕ್ಯುಲರ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.

ಸಾಕೇತ್‌ ಹೆತ್ತವರು ಹೇಳಿದ್ದೇನು?

ʼʼಸಾಕೇತ್‌ ಮೃತಪಟ್ಟಿದ್ದಾರೆ ಎಂಬುದನ್ನು ನಂಬಲೂ ಇನ್ನೂ ಅವರ ಪಾಲಕರಿಗೆ ಸಾಧ್ಯವಾಗುತ್ತಿಲ್ಲ. ನಾಪತ್ತೆಯಾಗುವುದಕ್ಕಿಂತ ಹಿಂದಿನ ದಿನ ಸಾಕೇತ್‌ ಮನೆಯವರೊಂದಿಗೆ ಮಾತನಾಡಿದ್ದರು. ಎಲ್ಲವೂ ಸರಿಯಾಗಿಯೇ ಇತ್ತು. ಯಾವುದೇ ಒತ್ತಡಕ್ಕೆ ಒಳಗಾಗಿದ್ದಾಗಲೀ, ಸಮಸ್ಯೆ ಎದುರಿಸುತ್ತಿರುವುದಾಗಲೀ ಮನೆಯವರ ಬಳಿ ಹೇಳಿರಲಿಲ್ಲ. ಇದು ಅನುಮಾನಕ್ಕೆ ಕಾರಣʼʼ ಎಂದು ಎಂಎಲ್‌ಸಿ ಆರತಿ ಕೃಷ್ಣ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಸಾಕೇತ್‌ ಪಾಲಕರಾದ ಶ್ರೀನಿವಾಸಯ್ಯ ಮತ್ತು ಅನುಪಮಾ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಮಾತನಾಡಿದ್ದಾರೆ.

ಕರ್ನಾಟಕದ ಎನ್‌ಆರ್‌ಐ ಫಾರಂನ ಉಪಾ‍ಧ್ಯಕ್ಷರೂ ಆಗಿರುವ ಆರತಿ ಕೃಷ್ಣ, ಅಮೆರಿಕದಲ್ಲಿ ಸಾಕೇತ್‌ ಕುಟುಂಬಕ್ಕೆ ಯಾರೂ ಸಂಬಂಧಿಕರಿಲ್ಲ. ಹೀಗಾಗಿ ಅಲ್ಲಿಗೆ ತೆರಳಿ ತನಿಖೆಯನ್ನು ಗಮನಿಸುವುದಾಗಿ ಪಾಲಕರು ತಿಳಿಸಿದ್ದಾರೆ ಎಂಬುದಾಗಿ ವಿವರಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ತುಮಕೂರು ಮೂಲದ ವಿದ್ಯಾರ್ಥಿ ಶವವಾಗಿ ಪತ್ತೆ

ʼʼಸಾಕೇತ್‌ನ ಪಾಲಕರು ತನಿಖೆಯ ಮೇಲ್ವಿಚಾರಣೆಗಾಗಿ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ. ಪರಿಸ್ಥಿತಿ ಸಾಮಾನ್ಯವಾಗಿಯೇ ಇತ್ತು. ಸಾಕೇತ್‌ನ ಸಾವು ಹೇಗೆ ಸಂಭವಿಸಿತು ಎನ್ನುವುದೇ ಅವರಿಗೆ ತಿಳಿಯುತ್ತಿಲ್ಲ. ಹೀಗಾಗಿ ಸ್ವತಃ ಅವರೇ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಆದಷ್ಟು ಬೇಗ ತೆರಳಲು ಎಮೆರ್ಜೆನ್ಸಿ ವೀಸಾ ಒದಗಿಸಲು ಮನವಿ ಮಾಡಿದ್ದಾರೆʼʼ ಎಂದು ಮಾಹಿತಿ ನೀಡಿದ್ದಾರೆ.

ʼʼಸಾಕೇತ್‌ನ ಪಾಲಕರೇ ಮೃತದೇಹವನ್ನು ವಶಕ್ಕೆ ಪಡೆದು ವಿಶ್ವವಿದ್ಯಾನಿಲಯ ಮತ್ತು ಪೊಲೀಸರೊಂದಿಗೆ ಸಮಾಲೋಚನೆ ನಡೆಸಲು ನಿರ್ಧರಿಸಿದ್ದಾರೆ. ತನಿಖೆಯನ್ನು ಗಂಭೀರವಾಗಿ ಪರಿಗಣಿಸಲು ಅವರು ಈಗಾಗಲೇ ಮನವಿ ಮಾಡಿದ್ದಾರೆʼʼ ಎಂದು ಆರತಿ ಕೃಷ್ಣ ವಿವರಿಸಿದ್ದಾರೆ.

ಸಾಕೇತ್‌ ನಾಪತ್ತೆಯಾಗುವುದಕ್ಕೂ ಮುನ್ನ ಅವರನ್ನು ಕೊನೆಯದಾಗಿ ಕ್ಯಾಲಿಫೋರ್ನಿಯ ವಿವಿ ಕ್ಯಾಂಪಸ್‌ನಿಂದ 1 ಕಿ.ಮೀ. ದೂರದಲ್ಲಿರುವ ಬರ್ಕಲಿ ಹಿಲ್ಸ್‌ ಪ್ರದೇಶದ ಆಂಝಾ ಸರೋವರದ ಬಳಿ ಅನೇಕರು ನೋಡಿದ್ದರು. ಸಾಕೇತ್‌ ಅವರ ಬ್ಯಾಗ್‌ ಮತ್ತು ಪ್ಲಾಪ್‌ಟಾಪ್‌ ಟಿಲ್ಡೆನ್‌ ರೀಜನಲ್‌ ಪಾರ್ಕ್‌ನಲ್ಲಿ ಪತ್ತೆಯಾಗಿತ್ತು.

ತುಮಕೂರು ಮೂಲದ ಸಾಕೇತ್‌ ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರೈಸಿ, ನಂತರ ಬೇಸ್‌ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಐಐಟಿ-ಮದ್ರಾಸ್‌ನಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಪಡೆದಿದ್ದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author