ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PM Narendra Modi: ವಿಕಸಿತ ಭಾರತಕ್ಕೆ ಪ್ರಧಾನಿ ಮೋದಿ 9 ಸೂತ್ರ; ರಾಗಿ ಮುದ್ದೆ, ಕಾವೇರಿ ನೀರು ನೆನೆದ ಪಿಎಂ

ಪೂಜ್ಯ ಬಾಲಗಂಗಾಧರನಾಥ ಶ್ರೀಗಳು ಅನ್ನ, ಅಕ್ಷರ, ಆರೋಗ್ಯ, ಅಧ್ಯಾತ್ಮ, ಆಶ್ರಯ, ಅರಣ್ಯ, ಅನುಕಂಪ, ಆಕಳು ಮತ್ತು ಸ್ವಚ್ಛತೆ ಈ ಒಂಬತ್ತು ಉದಾತ್ತ ಆಶಯಗಳೊಂದಿಗೆ ಬದುಕಿದರು. ನಾವೂ ಕೂಡ ಒಂಬತ್ತು ಸಂಕಲ್ಪಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಮೋದಿಯವರು ತಿಳಿಸಿದರು.

ಪಿಎಂ ಮೋದಿ

ಮಂಡ್ಯ, ಏ.15: ಯುವಜನತೆ ಒಂಬತ್ತು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ವಿಕಸಿತ ಕರ್ನಾಟಕ ಹಾಗೂ ವಿಕಸಿತ ಭಾರತದತ್ತ ಮುನ್ನಡೆಯಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ನುಡಿದರು. ಶ್ರೀ ಕ್ಷೇತ್ರ ಆದಿಚುಂಚನಗಿರಿ (Adichunchanagiri) ಮಠಕ್ಕೆ ಭೇಟಿ ನೀಡಿ, ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ʼಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ನಮಸ್ಕಾರಗಳುʼ ಎಂದು ಅಚ್ಚಕನ್ನಡದಲ್ಲಿ ಮಾತು ಆರಂಭಿಸಿ ಅವರು ಹಿಂದಿಯಲ್ಲಿ ಮುಂದುವರಿಸಿದರು. ಪೂಜ್ಯ ಬಾಲಗಂಗಾಧರನಾಥ ಶ್ರೀಗಳು ಅನ್ನ, ಅಕ್ಷರ, ಆರೋಗ್ಯ, ಅಧ್ಯಾತ್ಮ, ಆಶ್ರಯ, ಅರಣ್ಯ, ಅನುಕಂಪ, ಆಕಳು ಮತ್ತು ಸ್ವಚ್ಛತೆ ಈ ಒಂಬತ್ತು ಉದಾತ್ತ ಆಶಯಗಳೊಂದಿಗೆ ಬದುಕಿದರು. ನಾವೂ ಕೂಡ ಒಂಬತ್ತು ಸಂಕಲ್ಪಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು. ಅವರು ನೀಡಿದ ಒಂಬತ್ತು ಸಂಕಲ್ಪಗಳು ಹೀಗಿದ್ದವು:

  1. ಜಲಸಂರಕ್ಷಣೆ: ಎಲ್ಲ ಕಡೆ ನೀರು ಉಳಿಸುವುದು.
  2. ಪರಿಸರ: ಎಲ್ಲರೂ ತಮ್ಮ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವುದು.
  3. ಸ್ವಚ್ಛತೆ: ಮನೆ, ಸಾರ್ವಜನಿಕ ತಾಣ ಎಲ್ಲ ಕಡೆಯೂ ಸ್ವಚ್ಛತೆ ಕಾಪಾಡುವುದು.
  4. ಸ್ವದೇಶಿ: ಸ್ವದೇಶಿ ನಿರ್ಮಿತ ವಸ್ತುಗಳನ್ನು ಬಳಸಿ ಆತ್ಮನಿರ್ಭರತೆ ಬೆಳೆಸುವುದು, ವೋಕಲ್‌ ಫಾರ್‌ ಲೋಕಲ್.‌
  5. ದೇಶ ಪ್ರವಾಸ: ದೇಶದೊಳಗೆ ಪ್ರವಾಸ ಮಾಡುವುದು ಮೂಲಕ ಆ ತಾಣಗಳನ್ನು ಉತ್ತೇಜಿಸುವುದು
  6. ಕೆಮಿಕಲ್‌ ಮುಕ್ತ ಕೃಷಿ: ರಾಸಾಯನಿಕ ಮುಕ್ತ ಕೃಷಿಯ ಮೂಲಕ ಜನತೆಯ ಆರೋಗ್ಯ ಕಾಪಾಡುವುದು.
  7. ಆರೋಗ್ಯಕರ ಆಹಾರ: ಎಚ್‌ಡಿ ದೇವೇಗೌಡರು ರಾಗಿ ಮುದ್ದೆಯನ್ನು ಜನಪ್ರಿಯಗೊಳಿಸಿದರು. ಅದು ಆರೋಗ್ಯದ ಪ್ರತೀಕ. ಉತ್ತಮ ಆಹಾರದಿಂದ ಉತ್ತಮ ಚಿಂತನೆ.
  8. ಯೋಗ, ಆಟ, ಫಿಟ್‌ನೆಸ್: ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ವ್ಯಾಯಾಮ.

‌9. ಸೇವಾಭಾವನೆ

ಇಂದು ನನ್ನ ಮನಸ್ಸಿನ ಭಾವನೆ ಕೇವಲ ಶಬ್ದಗಳಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಅಂತಹ ಅನುಭೂತಿ ಈ ಮಠದಲ್ಲಿ ನನಗೆ ಸಿಕ್ಕಿದೆ. ಸಕ್ಕರೆಗೆ ಮಂಡ್ಯ ನಗರ ಹಾಗೂ ವಡೆಗೆ ಮದ್ದೂರು ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯವು ತತ್ವಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಮೃದ್ಧವಾಗಿದೆ. ಆದಿಚುಂಚನಗಿರಿ ಮಠ ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದೆ. ಈ ಮಠವು ಸ್ವದೇಶಿ ಮತ್ತು ಆತ್ಮನಿರ್ಭರತೆಯ ಸಂಕೇತವಾಗಿದೆ. ನಮ್ಮ ಸರ್ಕಾರ ಕೂಡ ಆಯುಷ್ಮಾನ್ ಭಾರತ್ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡುವ ಮೂಲಕ ಮಠದ ಆಶಯದಂತೆಯೇ ಆರೋಗ್ಯ ಸೇವೆಯನ್ನು ಬಡವರಿಗೆ ತಲುಪಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.

PM Narendra modi: ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಪ್ರಧಾನಿ ಮೋದಿಯವರಿಂದ ಉದ್ಘಾಟನೆ

ಶ್ರೀಗಳು ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಮಾತ್ರ ಸೀಮಿತರಾಗಿಲ್ಲ. ಅವರು ಜನರ ಸುಖ ಮತ್ತು ದುಃಖಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಜನರ ಸಂಘರ್ಷಗಳನ್ನು ಅರ್ಥ ಮಾಡಿಕೊಂಡು ಉತ್ತಮ ದಾರಿಯನ್ನು ತೋರಿಸಿದರು. ದುಃಖ ದೌರ್ಜನ್ಯ ಸಂಕಷ್ಟದಿಂದ ಜನರು ಪಾರಾಗುವ ದಾರಿ ತೋರಿಸಿದ್ದಾರೆ. ಆದಿಚುಂಚನಗಿರಿ ಮಠಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಜನರ ಜೀವನ ಉತ್ತಮಗೊಳಿಸಲು ಅವರು ವೈದ್ಯಕೀಯ ಹಾಗೂ ಇಂಜಿನಿಯರ್ ಶಿಕ್ಷಣವನ್ನು ನೀಡಿದ್ದಾರೆ. ಇದರ ಹೆಚ್ಚಿನ ಲಾಭ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಗಿದೆ ಎಂದು ಪ್ರಧಾನಿ ಶ್ಲಾಘಿಸಿದರು.



ಸ್ವಾಮೀಜಿಯವರ ಪರಿಸರ ಪ್ರೇಮವನ್ನು ಮೆಚ್ಚಿದ ಪ್ರಧಾನಿ, ಅವರ ಕರುಣೆ ಕೇವಲ ಮನುಷ್ಯರಿಗೆ ಸೀಮಿತವಾಗಿರಲಿಲ್ಲ. ರಾಷ್ಟ್ರಪಕ್ಷಿ ನವಿಲುಗಳ ಸಂರಕ್ಷಣೆಗಾಗಿ ಅವರು ನಡೆಸಿದ ಸಾಮಾಜಿಕ ಆಂದೋಲನವು ಇಂದಿಗೂ ನಮಗೆ ಮಾದರಿ. ಪರಿಸರ ಸಂರಕ್ಷಣೆ ನಮ್ಮ ಸಾಂಸ್ಕೃತಿಕ ಚೇತನದ ಭಾಗ ಎಂಬುದನ್ನು ಅವರು ಸಾಬೀತುಪಡಿಸಿದರು ಎಂದರು. ದೆಹಲಿಯಲ್ಲಿ ನನ್ನ ನಿವಾಸದಲ್ಲೂ ಹಲವು ನವಿಲುಗಳಿದ್ದು, ಅವು ತುಂಬಾ ಶಾಂತ ಸ್ವಭಾವದ ಹಕ್ಕಿಗಳು ಎಂದರು.

ನಮ್ಮ ದೈನಂದಿನ ಜೀವನದಲ್ಲಿ ಉತ್ತಮ ಆಹಾರ, ಯೋಗವನ್ನು ಅಳವಡಿಸಿಕೊಳ್ಳಬೇಕು, ಜತೆಗೆ ಊಟದಲ್ಲಿ ಬಳಸುವ ಎಣ್ಣೆಯನ್ನು ಶೇ.10ರಷ್ಟು ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು. ಮಂಡ್ಯದ ಜನತೆಗೆ ನೀರಿನ ಬೆಲೆ ಚೆನ್ನಾಗಿ ತಿಳಿದಿದೆ. ಇಲ್ಲಿನ ಜನರ ಬದುಕು ಕಾವೇರಿ ನದಿಯೊಂದಿಗೆ ತಳುಕು ಹಾಕಿಕೊಂಡಿದೆ ಎಂದು ನುಡಿದರು.

PM Modi in Adichunchanagiri: ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ; ಗುರುಭೈರವೈಕ್ಯ ಮಂದಿರ ಉದ್ಘಾಟನೆ

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪ್ರಧಾನಿಯವರನ್ನು ಗೌರವಿಸಿ ಮಾರ್ಗದರ್ಶನ ನೀಡಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ವಿವಿಧ ಮಠಗಳ ಮಠಾಧೀಶರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಹರೀಶ್‌ ಕೇರ

View all posts by this author