ಮೈಸೂರು, ಏ.14: ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ (Adichunchanagiri) ಕ್ಷೇತ್ರಕ್ಕೆ ನಾಳೆ (ಏಪ್ರಿಲ್ 15) ಪ್ರಧಾನಿ ನರೇಂದ್ರ ಮೋದಿ (PM Narendra Modi) ಆಗಮಿಸಲಿದ್ದಾರೆ. ಆದಿಚುಂಚನಗಿರಿಯಲ್ಲಿ ನಡೆಯಲಿರುವ ಭೈರವೈಕ್ಯ ಮಂದಿರ ಲೋಕಾರ್ಪಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಮೈಸೂರು ಪೇಟ ಧರಿಸಿ ಗಮನ ಸೆಳೆಯಲಿದ್ದಾರೆ. ಮೈಸೂರಿನ ಹೆಸರಾಂತ ಕಲಾವಿದ ನಂದನ್ ಸಿಂಗ್ ಅವರು ಪ್ರಧಾನಿಗಾಗಿಯೇ ಈ ಪೇಟವನ್ನು ಸಿದ್ಧಪಡಿಸಿದ್ದಾರೆ. ಇದರ ತಯಾರಿಗೆ ಐದು ದಿನಗಳ ಕಾಲ ತಗಲಿದೆ.
ಬನಾರಸ್ ಬಟ್ಟೆ ಹಾಗೂ ವಿಶೇಷ ಮೋಲ್ಡ್ ಬಳಸಿ ತಯಾರಿಸಿರುವ ಈ ಪೇಟವು, ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಶೈಲಿಯಲ್ಲಿದೆ. ಪೇಟದ ಮಧ್ಯಭಾಗದಲ್ಲಿ ರಾಜ ಲಾಂಛನ ‘ಗಂಡಭೇರುಂಡ’ ವಿನ್ಯಾಸವನ್ನು ಅಳವಡಿಸಲಾಗಿದ್ದು, ‘ನಮ್ಮೂರು ನಮ್ಮೋರು’ ಸೇವಾ ಸಂಸ್ಥೆಯ ಮೂಲಕ ಪ್ರಧಾನಿಗಳಿಗೆ ಇದನ್ನು ಅರ್ಪಿಸಲಾಗುತ್ತಿದೆ. ನಿರ್ಮಲಾನಂದನಾಥ ಶ್ರೀಗಳ ಮಾರ್ಗದರ್ಶನದಲ್ಲಿ ಈ ಕಲಾಕೃತಿ ಮೂಡಿಬಂದಿದೆ.
ಆದಿಚುಂಚನಗಿರಿ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ
ಶ್ರೀಕ್ಷೇತ್ರದ ಮಾಜಿ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ನಿರ್ಮಾಣಗೊಂಡಿರುವ ಭವ್ಯ ‘ಶ್ರೀ ಗುರು ಭೈರವೈಕ್ಯ ಮಂದಿರ’ವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಇಡೀ ಆದಿಚುಂಚನಗಿರಿ ಕ್ಷೇತ್ರ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಭೈರವೈಕ್ಯ ಮಂದಿರವು ಹಲವು ವಿಶೇಷತೆಗಳಿಂದ ಕೂಡಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ 2000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
PM Narendra Modi: ನಾಳೆ ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಹೈ ಅಲರ್ಟ್, ಸಂಚಾರ ಬದಲಾವಣೆ, ಮದ್ಯ ಮಾರಾಟ ನಿಷೇಧ
ಪ್ರಧಾನಿ ಮೋದಿ ಕಾರ್ಯಕ್ರಮ ಹೀಗಿದೆ
ಬೆಳಿಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಎಚ್‌ಎಎಲ್ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಬೆಳಿಗ್ಗೆ 10:50ಕ್ಕೆ ಎಚ್‌ಎಎಲ್‌ನಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್ ತಲುಪಲಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರದ ಮಠಕ್ಕೆ ತಲುಪಿ, ಭೈರವೈಕ್ಯ ಮಂದಿರದ ಉದ್ಘಾಟನೆ ನೆರವೇರಿಸಲಿದ್ದಾರೆ.
ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ನಂತರ ಮತ್ತೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮರಳಿ, ಅಲ್ಲಿಂದ ಕೇರಳ ಪ್ರವಾಸಕ್ಕೆ ತೆರಳಲಿದ್ದಾರೆ.