Dharmasthala Chalo: ಬುರುಡೆ ಪ್ರಕರಣವು ಬಹುಸಂಖ್ಯಾತರ ವಿರುದ್ಧ ಕಾಂಗ್ರೆಸ್ ಷಡ್ಯಂತ್ರದ ಭಾಗ: ಜೋಶಿ
Pralhad Joshi: ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಿಂದೂಗಳ ವಿರುದ್ಧ ಹಾಗೂ ತುಷ್ಟೀಕರಣದ ಪರವಾಗಿದೆ. ಸದಾ ಕಾಲಕ್ಕೂ ಹಿಂದೂ ಸಮಾಜವನ್ನು ತಿರಸ್ಕಾರ ಮಾಡುವುದು, ಅಲ್ಪಸಂಖ್ಯಾರ ತುಷ್ಟೀಕರಣ ಮಾಡುವುದು ಇವರ ರಕ್ತದಲ್ಲೇ ಬಂದಿದೆ. ವೋಟ್ ಬ್ಯಾಂಕ್‌ಗಾಗಿ ಎಂದೆಂದಿಗೂ ಹಿಂದೂಸ್ತಾನ, ಹಿಂದೂ ಸಮಾಜವನ್ನು ತಿರಸ್ಕರಿಸಿ ಪಾಕಿಸ್ತಾನವನ್ನು ಓಲೈಸುವ ಕೆಲಸ ಮಾಡಿದವರು ಕಾಂಗ್ರೆಸ್ಸಿಗರು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

-

ಧರ್ಮಸ್ಥಳ: ಕಾಂಗ್ರೆಸ್ ಪಕ್ಷ ದೇಶದಲ್ಲಿ ಬಹುಸಂಖ್ಯಾತರ ವಿರುದ್ಧ ಸದಾ ಕಾಲಕ್ಕೂ ಷಡ್ಯಂತ್ರ ನಡೆಸುತ್ತಲೇ ಬಂದಿದೆ. ಧರ್ಮಸ್ಥಳ ಪ್ರಕರಣ ಸಹ ಇದರದ್ದೊಂದು ಭಾಗವೇ ಆಗಿದೆ. ಪವಿತ್ರ ಧಾರ್ಮಿಕ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಹಿಂದೂ ಸಮಾಜ ತಿರಸ್ಕಾರ ಮಾಡಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಕರೆ ನೀಡಿದರು. ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ʼಧರ್ಮಸ್ಥಳ ಚಲೋʼ ಹಾಗೂ ಸಮಾಜ ಜಾಗೃತಿ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.
ಈ ಬುರುಡೆ ಷಡ್ಯಂತ್ರದ ವಿರುದ್ಧ ಹಿಂದೂಗಳೆಲ್ಲ ಜಾತಿ-ಮತ-ಪಂಥವನ್ನು ಮೀರಿ ಒಂದಾಗಿ ಹೋರಾಡಬೇಕು. ಷಡ್ಯಂತರವನ್ನು ವಿಫಲಗೊಳಿಸಬೇಕು ಎಂದ ಅವರು, ಧರ್ಮಸ್ಥಳಕ್ಕೆ ಕೇವಲ ಒಂದೇ ಒಂದು ವರ್ಗದವರು ಬರುವುದಿಲ್ಲ. ಎಲ್ಲಾ ವರ್ಗದವರೂ ಬರುತ್ತಾರೆ. ಅದರಲ್ಲೂ ಅತ್ಯಂತ ಹಿಂದುಳಿದ ವರ್ಗದವರು ಬಂದು ಶ್ರೀ ಅಣ್ಣಪ್ಪ ಸ್ವಾಮಿಗೆ ನಮಸ್ಕಾರ ಹಾಕಿ, ಶ್ರೀ ಮಂಜುನಾಥೇಶ್ವರನಿಗೆ ಮುಡಿ ಕೊಟ್ಟು ಹೋಗುವ ಸಂಪ್ರದಾಯ ತಲತಲಾಂತರದಿಂದ ಬೆಳೆದು ಬಂದಿದೆ. ಆದರೆ, ಇಂದು ಬುರುಡೆ ಪ್ರಕರಣದ ನೆಪದಲ್ಲಿ ಹಿಂದೂ ಸಮಾಜವನ್ನೇ ಒಡೆಯುವ ಷಡ್ಯಂತರ ಧರ್ಮಸ್ಥಳ ಪ್ರಕರಣದಲ್ಲಿ ಅಡಗಿದೆ ಎಂದು ಹೇಳಿದರು.
ಕ್ಷೇತ್ರದ ಪ್ರಭಾವ ಕುಗ್ಗಿಸಲೆತ್ನ
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ಮತ್ತು ಶ್ರೀ ಅಣ್ಣಪ್ಪ ಸ್ವಾಮಿಯ ಪ್ರಭಾವ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೂಗಳಲ್ಲಿ ಕ್ಷೇತ್ರದ ಮೇಲೆ ಇರುವ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆ ಕಡಿಮೆ ಮಾಡುವ ಸಂಚು ಇದಾಗಿದೆ. ಅಲ್ಲದೇ, ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆಸಿದ್ದಾರೆ ಎಂದು ಸಚಿವ ಜೋಶಿ ಹರಿಹಾಯ್ದರು.
ಯಾವ ಕಾರಣಕ್ಕೆ ಎಸ್‌ಐಟಿ ಮಾಡಿದಿರಿ?
ಧರ್ಮಸ್ಥಳ ಪ್ರಹಸನದಲ್ಲಿ ಸರ್ಕಾರ ಅದ್ಯಾವ ಕಾರಣಕ್ಕೆ ಎಸ್‌ಐಟಿ ರಚನೆ ಮಾಡಿತು? ಎಂದು ಪ್ರಶ್ನಿಸಿದ ಸಚಿವರು, ಮೊದಲು ಬುರುಡೆ ತಂದವನನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕಿತ್ತು. ಎಲ್ಲಿಂದ ಬುರುಡೆ ತಂದ? ಎಂಬ ಬಗ್ಗೆ ಬಾಯಿ ಬಿಡಿಸಿದ್ದರೆ ಅಲ್ಲೇ ಸತ್ಯದ ದರ್ಶನವಾಗುತ್ತಿತ್ತಲ್ಲ? ಇಷ್ಟೆಲ್ಲಾ ಹೈಡ್ರಾಮಾ ಏಕೆ? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ತಾಕತ್ತಿದ್ದರೆ ಬೇರೆ ಶ್ರದ್ಧಾಕೇಂದ್ರ ಅಗೆಸಿ
ರಾಜ್ಯ ಸರ್ಕಾರ ಬುರುಡೆ ತಂದವನ ಬಗ್ಗೆ ಹಿಂದೆ ಮುಂದೆ ವಿಚಾರಿಸಲಿಲ್ಲ, ಆತನ ವಿರುದ್ಧ ತನಿಖೆ ನಡೆಸಲಿಲ್ಲ. ತರಾತುರಿಯಲ್ಲಿ ಎಸ್ಐಟಿ ರಚಿಸಿತು. ಯಾವ ಕಾರಣಕ್ಕಾಗಿ ಹೀಗೆ ಎಸ್‌ಐಟಿ ಮಾಡಿದಿರಿ? ಮೂರು ಮೂರು ಹಿರಿಯ ಅಧಿಕಾರಿಗಳನ್ನು ಬಿಟ್ಟು, ರಕ್ಷಣೆ ಕೊಟ್ಟು ಬಾಹುಬಲಿ ಬೆಟ್ಟ ಅಗೆಸಿದಿರಿ. ತಾಕತ್ತಿದ್ದರೆ ಬೇರೆ ಶ್ರದ್ಧಾಕೇಂದ್ರಗಳನ್ನೂ ಹೀಗೇ ಅಗೆಸಿ ನೋಡೋಣವೆಂದು ಸಚಿವ ಪ್ರಲ್ಹಾದ್ ಜೋಶಿ ಸರ್ಕಾರಕ್ಕೆ ನೇರ ಸವಾಲು ಹಾಕಿದರು.
ʼಧರ್ಮಸ್ಥಳʼ ದಂತಹ ಒಂದು ಹಿಂದೂ ಧಾರ್ಮಿಕ ಪರಂಪರೆಯುಳ್ಳ ಕ್ಷೇತ್ರವನ್ನು ಅದ್ಯಾವನೋ ತಲೆ ಕೆಟ್ಟವನ ಮಾತು ಕೇಳಿ ಎಲ್ಲಿ ಬೇಕಲ್ಲಿ ಅಗೆಸಿದೆ ಈ ಸರ್ಕಾರ. ಒಂದೆರೆಡಲ್ಲ 17 ಜಾಗಗಳನ್ನು ಅಗೆದರೂ ಸಮಾಧಾನ ಆಗಲಿಲ್ಲ ಇವರಿಗೆ. ಜನ ಛೀ..ಥೂ..ಎಂದು ಉಗಿದ ಮೇಲೆ ಕೈ ಬಿಟ್ಟಿತು. ಹಾಗಾದರೆ ಕಾಂಗ್ರೆಸ್ ಸರ್ಕಾರದ ಬುರುಡೆಯಲ್ಲಿ ಏನಿತ್ತು? ಎಂದು ಕಿಡಿಕಾರಿದರು.
ಷಡ್ಯಂತ್ರಿಗಳನ್ನು ಸಮಾಜ ತಿರಸ್ಕರಿಸಲಿ
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಸಮಾಜ ತಿರಸ್ಕಾರ ಮಾಡಬೇಕು. ದೇಶಕ್ಕಾಗಿ, ಹಿಂದೂ ಸಮಾಜಕ್ಕಾಗಿ ಸದಾ ಜಾಗ್ರತರಾಗಿದ್ದು ಇಂಥ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಿಂದೂಗಳ ವಿರುದ್ಧ ಹಾಗೂ ತುಷ್ಟೀಕರಣದ ಪರವಾಗಿದೆ. ಸದಾ ಕಾಲಕ್ಕೂ ಹಿಂದೂ ಸಮಾಜವನ್ನು ತಿರಸ್ಕಾರ ಮಾಡುವುದು, ಅಲ್ಪಸಂಖ್ಯಾರ ತುಷ್ಟೀಕರಣ ಮಾಡುವುದು ಇವರ ರಕ್ತದಲ್ಲೇ ಬಂದಿದೆ. ವೋಟ್ ಬ್ಯಾಂಕ್‌ಗಾಗಿ ಎಂದೆಂದಿಗೂ ಹಿಂದೂಸ್ತಾನ, ಹಿಂದೂ ಸಮಾಜವನ್ನು ತಿರಸ್ಕರಿಸಿ ಪಾಕಿಸ್ತಾನವನ್ನು ಓಲೈಸುವ ಕೆಲಸ ಮಾಡಿದವರು ಕಾಂಗ್ರೆಸ್ಸಿಗರು ಎಂದು ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.
ಶಬರಿಮಲೆ ಆಯ್ತು..ಈಗ ಧರ್ಮಸ್ಥಳ ಟಾರ್ಗೆಟ್
ಶಬರಿಮಲೆ ಮೇಲೆ ದಾಳಿ ನಡೆಸಿದ್ದಾಯಿತು, ಈಗ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ಹಿಂದೂಗಳು ಹೆದರಬೇಕಿಲ್ಲ. ದೇಶದ ಹಿತದೃಷ್ಟಿಯಿಂದಲೇ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರವಿದೆ. ಹಿಂದೂಗಳ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಹೇಳಿದರು.
ಬಿಜೆಪಿಯನ್ನು ಹಿಮ್ಮೆಟ್ಟಿಸಲಾಗದೆ ಟಾರ್ಗೆಟ್
ದಕ್ಷಿಣ ಕನ್ನಡದಲ್ಲಿ 30-40 ವರ್ಷಗಳಿಂದಲೂ ಹಿಂದುತ್ವದ ನೆಲೆ ಭದ್ರವಾಗಿದೆ. ಇಲ್ಲೇನೇ ಪ್ರಯತ್ನ ಮಾಡಿದರೂ ಹಿಂದುತ್ವದ ಪರವಾಗಿರುವ ಬಿಜೆಪಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈಗ ಹಿಂದೂಗಳ ನೆಲೆಯ ಧಾರ್ಮಿಕ ಕೇಂದ್ರಗಳನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ ಎಂದು ಜೋಶಿ ಆರೋಪಿಸಿದರು.
ವೋಟ್ ಬ್ಯಾಂಕ್ ಕಾಂಗ್ರೆಸ್ ಧ್ಯೇಯ
ಕಾಂಗ್ರೆಸ್ ಪಕ್ಷ ದೇಶ ವಿಭಜನೆಯ ಕಾಲದಿಂದಲೂ ಒಂದು ವರ್ಗದ ಪರವಾಗಿದೆ. ವೋಟ್ ಬ್ಯಾಂಕ್ ಅಷ್ಟೇ ಇವರ ಧ್ಯೇಯವಾಗಿದೆ. ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಧರ್ಮ ಕೇಳಿ ಹತ್ಯೆ ಮಾಡಿದವರ ವಿರುದ್ಧ ಭಾರತ ʼಆಪರೇಷನ್ ಸಿಂಧೂರ್ʼ ನಡೆಸಿದರೆ ಪಾಕಿಸ್ತಾನ ಕೇಳುವ ರೀತಿ ದೇಶಾಭಿಮಾನ ಇಲ್ಲದವರಂತೆ ಪ್ರಶ್ನೆ ಕೇಳುತ್ತಾರೆ ಎಂದು ಟೀಕಿಸಿದರು.
ಚಾಮುಂಡಿ ಬೆಟ್ಟವನ್ನೂ ಹೊಡೆಯಲು ಹೊರಟಿದ್ದೀರಾ?
ಮೈಸೂರು ಚಾಮುಂಡೇಶ್ವರಿ ಬೆಟ್ಟ ಹಿಂದೂಗಳದ್ದಲ್ಲ ಎನ್ನುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಮುಜರಾಯಿ ಇಲಾಖೆಗೆ ಸೇರಿದ್ದೆಂಬ ವಾದ ಮುಂದಿಡುತ್ತಿದ್ದಾರೆ. ಇದನ್ನೂ ಹೊಡೆಯಲು ಹೊರಿಟಿದ್ದೀರೋ ಹೇಗೆ? ರಾಮನಗರದಲ್ಲಿ ತಲತಲಾಂತರದಿಂದ ಇದ್ದ ಕಪಾಲಿ ಬೆಟ್ಟವನ್ನು ಏಸು ಬೆಟ್ಟ ಮಾಡಲು ಹೊರಟವರು ಚಾಮುಂಡೇಶ್ವರಿ ಬೆಟ್ಟವನ್ನೂ ಹಾಗೇ ಮಾಡಲು ಹೊರಟಿದ್ದಿರೋ ಹೇಗೆ? ಎಂದು ಡಿಕೆಶಿ ವಿರುದ್ಧ ಪ್ರಲ್ಹಾದ್ ಜೋಶಿ ಗುಡುಗಿದರು.
ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಷಡ್ಯಂತ್ರ ನಡೆಯುವುದಿಲ್ಲ ಎಂಬುದನ್ನು ರಾಹುಲ್ ಗಾಂಧಿ ಅವರಷ್ಟೇ ಅಲ್ಲ ನೇರವಾಗಿ ಸೋನಿಯಾ ಗಾಂಧಿ ಅವರಿಗೂ ಹೇಳಬಯಸುತ್ತೇನೆ. ಧಾರ್ಮಿಕ ಕ್ಷೇತ್ರಗಳನ್ನು, ಬೆಟ್ಟಗಳನ್ನು ಅಗೆಸಿದರೆ, ಬಾಂಬ್ ಹಾಕಿದರೆ ನಡುಗುವ ಜನ ನಾವಲ್ಲ. ಟೆರರಿಸ್ಟ್‌ಗಳಿಗೆ ಬಿರಿಯಾನಿ ತಿನ್ನಿಸುವವರಲ್ಲ. ಅವರ ಕಣ್ಣು ಕಿತ್ತು ಹಾಕುವ ಶಕ್ತಿ ಭಾರತಕ್ಕೆ ಬಂದಿದೆ ಎಂದು ಅವರು ಚಾಟಿ ಬೀಸಿದರು.
ಕಮ್ಯುನಲ್ ವೈಲೆನ್ಸ್ ಬಿಲ್ ತರಲು ಹೊರಟಿದ್ದರು
ಭಾರತದಲ್ಲಿ ನೆಹರು ಕಾಲ, ರಾಜೀವ ಗಾಂಧಿ ಕಾಲ ಹೋಯಿತು. ಶಹಬಾನು ಪ್ರಕರಣ ಎಲ್ಲರಿಗೂ ನೆನಪಿದೆ. ಕಾಂಗ್ರೆಸ್‌ನವರು ಹಿಂದೂ ವಿರೋಧಿ ಮನಸ್ಥಿತಿಯಿಂದ ʼಕಮ್ಯುನಲ್ ವೈಲೆನ್ಸ್ ಬಿಲ್ʼ (ಗಲಭೆಗಳಲ್ಲಿ ಹಿಂದೂಗಳನ್ನು ಮಾತ್ರ ಹೊಣೆ ಮಾಡುವ) ತರಲು ಹೊರಟಿದ್ದರು. ಆದರೆ, 2014ರಲ್ಲಿ ಅವರ ಆಟ ನಡೆಯಲಿಲ್ಲ. ದೇಶದಲ್ಲಿ ಮುಂದೆಯೂ ಈ ಕಾನೂನು ಮಾಡಲು ನೀವು ಅಧಿಕಾರಕ್ಕೆ ಬರುವುದಿಲ್ಲ ಎಂದು ಪ್ರಲ್ಹಾದ್ ಜೋಶಿ ಗುಡುಗಿದರು.
ಸಿಎಂ ಮನಸಲ್ಲಿ ಸಿದ್ದನೂ ಇಲ್ಲ.. ರಾಮನೂ ಇಲ್ಲ..
ಮುಖ್ಯಮಂತ್ರಿ ಹೆಸರಿಗಷ್ಟೇ ಸಿದ್ದರಾಮಯ್ಯ ಆಗಿದ್ದಾರೆ. ಅವರ ಮನಸ್ಸಿನಲ್ಲಿ ಸಿದ್ದನೂ ಇಲ್ಲ, ರಾಮನೂ ಇಲ್ಲ. ಜನರನ್ನು ಮರುಳು ಮಾಡಲು ನಾವೂ ರಾಮನ ದೇವಸ್ಥಾನ ಕಟ್ಟಿದ್ದೇವೆ ಎನ್ನುತ್ತಾರೆ ಎಂದು ಜೋಶಿ ಟೀಕಿಸಿದರು.
ಭುವನೇಶ್ವರಿ-ಚಾಮುಂಡೇಶ್ವರಿ ಮಾತೆಗೆ ತಲೆಬಾಗುತ್ತೇನೆ ಎನ್ನಲಿ ಬಾನು ಮುಷ್ತಾಕ್
ʼಮೈಸೂರು ದಸರಾ ಉದ್ಘಾಟನೆಗೆ ಮುಂದಾಗಿರುವ ಬಾನು ಮುಷ್ತಾಕ್ ಮೊದಲು ಭುವನೇಶ್ವರಿ ಮಾತೆ, ಚಾಮುಂಡೇಶ್ವರಿ ಮಾತೆಯನ್ನು ಒಪ್ಪಿಕೊಳ್ಳುತ್ತೇನೆ, ತಲೆಬಾಗತ್ತೇನೆಂದು ಹೇಳಲಿʼ ಎಂಬ ಸವಾಲನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಂದಿಟ್ಟರು. ಭುವನೇಶ್ವರಿ ಮಾತೆ ಮತ್ತು ಚಾಮುಂಡೇಶ್ವರಿ ಮಾತೆ ಪಾದಗಳಿಗೆ ನಮಸ್ಕರಿಸಿ ದಸರಾ ಉದ್ಘಾಟನೆ ಮಾಡುತ್ತೇನೆಂದು ಬಾನು ಮುಷ್ತಾಕ್ ಘೋಷಿಸಲಿ ಹಾಗೂ ಉದ್ಘಾಟನೆಗೂ ಮೊದಲು ಕ್ಷಮೆ ಕೇಳಲಿ. ನಾವು ಅಡ್ಡಿಪಡಿಸುವುದಿಲ್ಲ ಎಂದು ಸವಾಲೆಸೆದರು.
ಈ ಸುದ್ದಿಯನ್ನೂ ಓದಿ | Dharmasthala Chalo: ಧರ್ಮಸ್ಥಳ ವಿರುದ್ಧ ಪಿತೂರಿ ಕುರಿತು ಎನ್‌ಐಎ ತನಿಖೆಯಾಗಲಿ: ಬಿ.ವೈ. ವಿಜಯೇಂದ್ರ ಒತ್ತಾಯ
ʼಅರಿಷಿಣ-ಕುಂಕುಮ ಹಾಕಿ ಚಾಮುಂಡೇಶ್ವರಿ, ಭುವನೇಶ್ವರಿಯನ್ನು ದೇವತೆಯನ್ನಾಗಿ ಮಾಡಿಬಿಟ್ಟರೆ ನಾವು ಕನ್ನಡ ಕಲಿಯಬೇಕೆ?ʼ ಎಂದಿರುವ ಬಾನು ಮುಷ್ತಾಕ್ ಕುಡಿಯುತ್ತಿರುವುದು ಕನ್ನಡ ನಾಡಿನ ಕಾವೇರಿ ನೀರನ್ನೇ. ಹೀಗೆ ಹೇಳಲು ನಾಚಿಕೆ ಆಗುವುದಿಲ್ಲವೇ ಇವರಿಗೆ? ಎಂದು ಪ್ರಶ್ನಿಸಿದರು. ಬಾನು ಮುಷ್ತಾಕ್ ಅವರು ಭುವನೇಶ್ವರಿ, ಚಾಮುಂಡಿ ಮಾತೆಯನ್ನು ಒಪ್ಪುತ್ತೇನೆ. ಚಾಮುಂಡಿ ಮಾತೆಗೆ ತಲೆಬಾಗಿ ಉದ್ಘಾಟನೆ ನೆರವೇರಿಸುತ್ತೇನೆಂದು ಘೋಷಿಸಲಿ. ನಾವೂ ಒಪ್ಪಿಕೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.