ಬೆಂಗಳೂರು, ಜೂ. 4: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೂತನ ಸಚಿವರಿಗೆ ಅಳೆದೂ ತೂಗಿ ಖಾತೆ ಹಂಚಿಕೆ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ (GBA) ಖಾತೆ ಕೇಳಿದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರಿಗೆ ಜಲ ಸಂಪನ್ಮೂಲ ಸಿಕ್ಕಿದ್ದು, ಗೃಹ ಖಾತೆ ಪ್ರಿಯಾಂಕ್ ಖರ್ಗೆ ಪಾಲಾಗಿದೆ. ಬೈರತಿ ಸುರೇಶ್ ಅವರಿಗೆ ಸಾರಿಗೆ ಇಲಾಖೆ ಸಿಕ್ಕಿದೆ. ಆರೋಗ್ಯ ಸಚಿವರಾಗಿ ಯು.ಟಿ. ಖಾದರ್ ಆಯ್ಕೆಯಾಗಿದ್ದಾರೆ. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಹೆಚ್ಚುವರಿಯಾಗಿ ಕಂದಾಯ ಮತ್ತು ಯುವ ಸಬಲೀಕರಣ ಖಾತೆ ಲಭಿಸಿದೆ. ರಾಮಲಿಂಗಾ ರೆಡ್ಡಿ ಪಟ್ಟು ಹಿಡಿದಿದ್ದ ಬೆಂಗಳೂರು ನಗರಾಭಿವೃದ್ಧಿ ಕೃಷ್ಣ ಭೈರೇಗೌಡ ಅವರ ಪಾಲಾಗಿದೆ. ಡಿಕೆಶಿ ಹಣಕಾಸು ಇಲಾಖೆ, ಡಿಪಿಎಆರ್ ಮತ್ತು ಇತರ ಎಲ್ಲ ಖಾತೆಗಳ ಜವಾಬ್ದಾರಿ ಹೊಂದಿದ್ದಾರೆ. ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ನಗರಾಭಿವೃದ್ಧಿ ಇಲಾಖೆ ಸಿಕ್ಕಿದೆ.
ಇನ್ನು ಎಂ.ಬಿ. ಪಾಟೀಲ್ ಅವರ ಹೆಗಲಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಜವಾಬ್ದಾರಿ ಬಿದ್ದರೆ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರಾಗಿದ್ದಾರೆ. ಪ್ರಿಯಾಂಕ್ ಖರ್ಗೆ ಗೃಹ ಖಾತೆ ಜತೆಗೆ ಹೆಚ್ಚುವರಿಯಾಗಿ ಐಟಿ ಬಿಟಿ ಇಲಾಖೆಯ ಜವಾಬ್ದಾರಿಯನ್ನೂ ನೀಡಲಾಗಿದೆ. ಈಶ್ವರ್ ಖಂಡ್ರೆ ಅವರಿಗೆ ಗ್ರಾಮೀಣಾಭಿವೃದ್ಧಿ, ಕೆ.ಎಚ್. ಮುನಿಯಪ್ಪ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಕೆ.ಜೆ. ಜಾರ್ಜ್ ಅವರಿಗೆ ಇಂಧನ ಮತ್ತು ಪ್ರವಾಸೋದ್ಯಮ, ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಂಚಿಕೆ ಮಾಡಲಾಗಿದೆ.
ಸಿಎಂ ಕಚೇರಿಯಿಂದ ಸಚಿವರ ಖಾತೆಯ ವಿವರಗಳನ್ನು ಅಂಕಿತಕ್ಕಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಖಾತೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ತಿಳಿಸಿದೆ. ಬೆಂಗಳೂರು ನಗರಾಭಿವೃದ್ಧಿ ಬಿಟ್ಟರೆ ಬೇರೆ ಯಾವ ಖಾತೆಯೂ ಬೇಡ ಎಂದಿದ್ದ ರಾಮಲಿಂಗಾ ರೆಡ್ಡಿ ಅವರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿದೆ.
ಸಚಿವರು ಮತ್ತು ಖಾತೆ ವಿವರ
ನೂತನ ಸಚಿವರ ಖಾತೆಗಳ ವಿವರ
| ಸಚಿವರು | ಖಾತೆ |
|---|---|
| ಡಿ.ಕೆ. ಶಿವಕುಮಾರ್ | ಮುಖ್ಯಮಂತ್ರಿ, ಹಣಕಾಸು, ಡಿಪಿಎಆರ್ ಮತ್ತು ಇತರ ಎಲ್ಲ ಖಾತೆ |
| ಡಾ. ಜಿ. ಪರಮೇಶ್ವರ್ | ಉಪಮುಖ್ಯಮಂತ್ರಿ, ಕಂದಾಯ ಮತ್ತು ಯುವ ಸಬಲೀಕರಣ |
| ಪ್ರಿಯಾಂಕ್ ಖರ್ಗೆ | ಗೃಹ, ಐಟಿ ಬಿಟಿ |
| ರಾಮಲಿಂಗಾ ರೆಡ್ಡಿ | ಜಲ ಸಂಪನ್ಮೂಲ |
| ಯು.ಟಿ. ಖಾದರ್ | ಆರೋಗ್ಯ |
| ಕೃಷ್ಣ ಬೈರೇಗೌಡ | ಬೆಂಗಳೂರು ನಗರಾಭಿವೃದ್ಧಿ (ಜಿಬಿಎ) |
| ಯತೀಂದ್ರ ಸಿದ್ದರಾಮಯ್ಯ | ನಗರಾಭಿವೃದ್ಧಿ |
| ಎಂ.ಬಿ. ಪಾಟೀಲ್ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
| ಸತೀಶ್ ಜಾರಕಿಹೊಳಿ | ಲೋಕೋಪಯೋಗಿ |
| ಡಾ. ಶರಣಪ್ರಕಾಶ ಪಾಟೀಲ್ | ವೈದ್ಯಕೀಯ ಶಿಕ್ಷಣ |
| ಕೆ.ಎಚ್. ಮುನಿಯಪ್ಪ | ಆಹಾರ ಮತ್ತು ನಾಗರಿಕ ಸರಬರಾಜು |
| ಕೆ.ಜೆ. ಜಾರ್ಜ್ | ಇಂಧನ ಮತ್ತು ಪ್ರವಾಸೋದ್ಯಮ |
| ಈಶ್ವರ್ ಖಂಡ್ರೆ | ಗ್ರಾಮೀಣಾಭಿವೃದ್ಧಿ |
| ಬೈರತಿ ಸುರೇಶ್ | ಸಾರಿಗೆ |
ಎಸ್‌ಐಆರ್ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸ್ಪೀಕರ್ ಯಾರಾಗ್ತಾರೆ?
ಸದ್ಯ ಯು.ಟಿ. ಖಾದರ್ ಅವರಿಂದ ತೆರವಾಗಿರುವ ಸ್ಪೀಕರ್ ಹುದ್ದೆ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಕೆರಳಿದೆ. ಮುಂದಿನ ಸಭಾಧ್ಯಕ್ಷರ ಆಯ್ಕೆಯವರೆಗೆ ರುದ್ರಪ್ಪ ಲಮಾಣಿ ಹಂಗಾಮಿ ವಿಧಾನಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮುಂದಿನ ಸ್ಪೀಕರ್ ಆಗಿ ದಿನೇಶ್ ಗುಂಡೂರಾವ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜತೆಗೆ ಎಚ್.ಕೆ. ಪಾಟೀಲ್ ಅವರ ಹೆಸರೂ ಮುನ್ನೆಲೆಗೆ ಬಂದಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.