ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Police Recruitment: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಶೇ.15.64 ಹುದ್ದೆಗಳು ಶೀಘ್ರದಲ್ಲೇ ಭರ್ತಿ: ಸಿಎಂ ಸಿದ್ದರಾಮಯ್ಯ

Police Recruitment: ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಮಾರುವವರ ಅಂಗಡಿ, ವ್ಯಾಪಾರದ ಲೈಸೆನ್ಸ್ ರದ್ದುಗೊಳಿಸುವ ಅಗತ್ಯ ಬಿದ್ದರೆ ಮಾಡಿ. ಪ್ರಚೋದನೆ, ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕೇಸು ಕಡ್ಡಾಯವಾಗಿ ದಾಖಲಿಸಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಶೇ.15.64 ಹುದ್ದೆಗಳ ಭರ್ತಿಗೆ ಕ್ರಮ: ಸಿಎಂ

-

Prabhakara R Prabhakara R Jun 27, 2025 8:43 PM

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಖಾಲಿ ಇರುವ ಶೇ.15.64 ಹುದ್ದೆಗಳನ್ನು, ಒಳ ಮೀಸಲಾತಿ ಜಾರಿ ಬಳಿಕ ಹಂತ ಹಂತವಾಗಿ ಭರ್ತಿ ಮಾಡಲಾಗುವುದು‌. ಇದಕ್ಕೆ ತಕ್ಕ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ್ದಾರೆ.

ಕಳೆದ ಒಂದು ವರ್ಷದ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯ ಮೌಲ್ಯಮಾಪನ, ಇಲಾಖೆಯ ಬೇಡಿಕೆಗಳು, ಸರ್ಕಾರದ ನೆರವಿನ ಸಭೆಯಲ್ಲಿ ಚರ್ಚೆ ನಡೆದಿದೆ. ಕಳೆದ 2 ವರ್ಷದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ, ಕೊಲೆ-ದರೋಡೆ-ಮನೆ ಗಳ್ಳತನ ಸೇರಿ ಇತರೆ ಅಪರಾಧಗಳು ಕಡಿಮೆ ಆಗಿರುವುದನ್ನು ಇಲಾಖೆ ಕೊಟ್ಟಿರುವ ಅಂಕಿ ಅಂಶಗಳಿಂದ ಗೊತ್ತಾಗಿದೆ. ಆದರೆ, ಆರೋಪ ಪಟ್ಟಿಯನ್ನು ಸೂಕ್ತ ಸಮಯಕ್ಕೆ ಸಲ್ಲಿಸುವ ಜೊತೆಗೆ FIR ಅನ್ನು ತಕ್ಷಣ ದಾಖಲಿಸಬೇಕು, ತನಿಖೆಯ ಗುಣಮಟ್ಟ ಹೆಚ್ಚಿಸಬೇಕು ಎಂದು ತಿಳಿಸಿದ್ದಾರೆ.

ಅಪರಾಧಿಗಳನ್ನು ಕ್ಷಿಪ್ರವಾಗಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಸೈಬರ್ ಅಪರಾಧಗಳು ಹೆಚ್ಚುತ್ತಿದ್ದರೆ, ಇವುಗಳ ಪತ್ತೆಯ ಪ್ರಮಾಣ ಕಡಿಮೆ ಆಗುತ್ತಿದೆ. ಆದ್ದರಿಂದ ತನಿಖೆಯ ಗುಣಮಟ್ಟ ಹೆಚ್ಚಿಸುವ ಸೂಚನೆ ನೀಡಿದ್ದೀನಿ. ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಚೇರಿಗಳಲ್ಲೇ ಕುಳಿತಿರಬಾರದು.

ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಅಗತ್ಯ ಎಲ್ಲಾ ಕ್ರಮ ಕೈಗೊಳ್ಳಬೇಕು. ಡ್ರಗ್ಸ್ ಮಾರುವವರ ಅಂಗಡಿ, ವ್ಯಾಪಾರದ ಲೈಸೆನ್ಸ್ ರದ್ದುಗೊಳಿಸುವ ಅಗತ್ಯ ಬಿದ್ದರೆ ಮಾಡಿ. ಪ್ರಚೋದನೆ, ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕೇಸು ಕಡ್ಡಾಯವಾಗಿ ದಾಖಲಿಸಿ. ಈ ಬಗ್ಗೆ ದೂರು ಬಂದ ತಕ್ಷಣ ಕ್ರಮ‌ಕೈಗೊಳ್ಳಬೇಕು. ರೈತರು, ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ವಿರುದ್ಧ ದೌರ್ಜನ್ಯಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇನೆ.

ಬಾಲ್ಯವಿವಾಹ, ಪೋಕ್ಸೋ, ಅತ್ಯಾಚಾರ, ಭ್ರೂಣಹತ್ಯೆಗಳನ್ನು ನೂರಕ್ಕೆ ನೂರು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಜೊತೆ ಸೇರಿ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಗೆ ಅಗತ್ಯವಾದ ಸವಲತ್ತುಗಳನ್ನು ಒದಗಿಸಲಾಗುವುದು. ಪೊಲೀಸ್ ಗಸ್ತು ಹೆಚ್ಚಿಸಬೇಕಿದ್ದು, ಯಾವುದೇ ಪ್ರಕರಣದ ತನಿಖೆಯಲ್ಲಿ ನಾನು ತಲೆ ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ಪಕ್ಷದಲ್ಲಿ ಆಂತರಿಕ ಜಗಳವಿಲ್ಲ, ರಾಜಣ್ಣ ಹೇಳಿಕೆ ನಿರ್ಲಕ್ಷಿಸಿ: ಸಿಎಂ ಸಿದ್ದರಾಮಯ್ಯ

ಪೊಲೀಸರ ತನಿಖೆಯ ಗುಣಮಟ್ಟ ಹೆಚ್ಚಿಸಬೇಕಿದೆ

ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗಿರುವುದು ಸಮಾಧಾನದ ಸಂಗತಿಯಾದರೂ ಪೊಲೀಸರ ತನಿಖೆಯ ಗುಣಮಟ್ಟ ಕಡಿಮೆಯಾಗಿದ್ದು ಇದನ್ನು ಹೆಚ್ಚಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಬೀದರ್‌ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಯಾರು ಎಂದು ಗೊತ್ತಾಗಿದ್ದರೂ 5 ತಿಂಗಳುಗಳಿಂದ ಆತನನ್ನು ಬಂಧಿಸದೇ ಇರುವುದನ್ನು ಉಲ್ಲೇಖಿಸಿ ಮಾತನಾಡಿದ ಸಿಎಂ, ಬಿಡಿ ಬಿಡಿ ಪ್ರಕರಣಗಳಲ್ಲಿ ತನಿಖೆಯ ಗುಣಮಟ್ಟ ಹೆಚ್ಚಿದ್ದರೂ ಒಟ್ಟಾರೆಯಾಗಿ ಗಮನಿಸಿದಾಗ ತನಿಖೆಯ ಗುಣಮಟ್ಟ ಕುಸಿದಿರುವುದು ಸ್ಪಷ್ಟವಾಗುತ್ತಿದೆ.

ನಾನು 1983 ರಿಂದ ಶಾಸಕನಾಗಿ ಸಿಎಂ ಆಗಿದ್ದೀನಿ. ಬೆಂಗಳೂರಿನಲ್ಲಿ ನಡೆದ ಇಂಥ ಕಾಲ್ತುಳಿತ ಪ್ರಕರಣವನ್ನು ಹಿಂದೆಂದೂ ನಾನು ನೋಡಿರಲಿಲ್ಲ. ಗುಪ್ತಚರ ಇಲಾಖೆ ಇರುವುದು ಏಕೆ ? ಸರಿಯಾದ ಸಮಗ್ರ ಮಾಹಿತಿ ನೀಡಲಿಲ್ಲ. ಪರಿಣಾಮ 11 ಮಂದಿ ಮೃತಪಟ್ಟರು ಎಂದು ತಿಳಿಸಿದರು.

ಕಾಲ್ತುಳಿತ ಘಟನೆ ನಡೆದ ದಿನ‌ ಮಧ್ಯಾಹ್ನ 3:50 ಕ್ಕೆ ಸಾವುಗಳು ಸಂಭವಿಸಿದ್ದವು. ಆದರೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಇದು ತಪ್ಪಲ್ಲವಾ? 5:45ಕ್ಕೆ ನಾನಾಗೇ ಕೇಳಿದಾಗಲೂ ಒಂದೇ ಸಾವು ಆಗಿದೆ ಎನ್ನುವ ಮಾಹಿತಿ ನೀಡಿದರು. ಅಷ್ಟೊತ್ತಿಗಾಗಲೇ 11 ಸಾವು ಆಗಿಬಿಟ್ಟಿತ್ತು. ಹಿರಿಯ ಅಧಿಕಾರಿ ಸರಿಯಾದ ಮಾಹಿತಿಯನ್ನು ತಕ್ಷಣ ನಮಗೆ ನೀಡಿದ್ದರೆ ಸ್ಟೇಡಿಯಂ ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಬಹುದಿತ್ತು ಎಂದರು.

ಹಿರಿಯ ಅಧಿಕಾರಿಗಳ ಸಸ್ಪೆಂಡ್ ಮಾಡಬೇಕಾಗಿ ಬಂದಿದ್ದಕ್ಕೆ ನನಗೂ ಬೇಸರ ಇದೆ. ಆದರೆ ತಪ್ಪಾಗಿದ್ದು ನಿಜ ತಾನೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಅಪರಾಧ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸೂಕ್ತವಾಗಿ, ಪರಿಣಾಮಕಾರಿಯಗಿ, ಸರಿಯಾದ ಸಮಯಕ್ಕೆ ಸಲ್ಲಿಸದಿರುವುದೂ ದೊಡ್ಡ ವೈಫಲ್ಯ. ಇಂಥಾದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದರು.