ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Raichur News: ರಾಯಚೂರಿನಲ್ಲಿ ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ!

ಗದಗ ಜಿಲ್ಲೆಯ ದಂಪತಿ ತಮ್ಮ ಎರಡು ತಿಂಗಳ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಂಧನೂರಿನ 'ಸಹನಾ ಆಸ್ಪತ್ರೆ'ಗೆ ಕರೆತಂದಿದ್ದರು. ತಪಾಸಣೆ ನಡೆಸಿದ ವೈದ್ಯ ಡಾ. ಶಿವರಾಜ ಪಾಟೀಲ್ ಅವರು, ಅಲ್ಟ್ರಾ ಸೌಂಡ್‌ ಸ್ಕ್ಯಾ‌ನಿಂಗ್ ವೇಳೆ ಮಗುವಿನ ಹೊಟ್ಟೆಯೊಳಗೆ ಗಡ್ಡೆಯಂತಿರುವ ರಚನೆ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ರಾಯಚೂರು: ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಪತ್ತೆಯಾಗಿರುವ ಅಪರೂಪದ ಪ್ರಕರಣವೊಂದು ಜಿಲ್ಲೆಯ (Raichur News) ಸಿಂಧನೂರಿನ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಗದಗ ಜಿಲ್ಲೆಯ ದಂಪತಿಯ ಹಸುಗೂಸಿನಲ್ಲಿ ಈ ಅಸಹಜ ಬೆಳವಣಿಗೆ ಕಂಡುಬಂದಿದ್ದು, ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಸಿಂಧನೂರಿನಿಂದ ಬೆಂಗಳೂರಿನ ಪ್ರಮುಖ ಆಸ್ಪತ್ರೆಗೆ ರವಾನಿಸಲಾಗಿದೆ.

ಗದಗ ಜಿಲ್ಲೆಯ ದಂಪತಿ ತಮ್ಮ ಎರಡು ತಿಂಗಳ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಂಧನೂರಿನ 'ಸಹನಾ ಆಸ್ಪತ್ರೆ'ಗೆ ಕರೆತಂದಿದ್ದರು. ತಪಾಸಣೆ ನಡೆಸಿದ ವೈದ್ಯ ಡಾ. ಶಿವರಾಜ ಪಾಟೀಲ್ ಅವರು, ಅಲ್ಟ್ರಾ ಸೌಂಡ್‌ ಸ್ಕ್ಯಾ‌ನಿಂಗ್ ವೇಳೆ ಮಗುವಿನ ಹೊಟ್ಟೆಯೊಳಗೆ ಗಡ್ಡೆಯಂತಿರುವ ರಚನೆ ಪತ್ತೆಯಾಗಿದೆ. ಬಳಿಕ ಆಸ್ಪತ್ರೆಯ ತಜ್ಞ ವೈದ್ಯರು ಹಾಗೂ ರೇಡಿಯಾಲಜಿಸ್ಟ್‌ ಡಾ.ವಿವೇಕ್‌ ಜೀರಂಕಳಿ ಸಮ್ಮುಖದಲ್ಲಿ ನಡೆಸಿದ ಪರಿಶೀಲನೆ ವೇಳೆ ಅದು ಸಾಮಾನ್ಯ ಗಡ್ಡೆಯಲ್ಲ, ಭ್ರೂಣವನ್ನು ಹೋಲುವ ಆಕೃತಿಯಾಗಿದೆ ಎಂಬುದು ಗೊತ್ತಾಗಿದೆ. ಮಗುವಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಉನ್ನತ ಮಟ್ಟದ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರಣ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಫೀಟಸ್ ಇನ್ ಫೀಟು ಪ್ರಕರಣ:

ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು 'ಫೀಟಸ್ ಇನ್ ಫೀಟು' (Fetus in Fetu) ಎಂದು ಕರೆಯಲಾಗುತ್ತದೆ. ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಅವಳಿ ಭ್ರೂಣಗಳು ರೂಪುಗೊಳ್ಳುವಾಗ ಉಂಟಾಗುವ ಅಸಹಜತೆಯಿಂದಾಗಿ, ಒಂದು ಭ್ರೂಣವು ಮತ್ತೊಂದು ಭ್ರೂಣದ ದೇಹದೊಳಗೆ ಸೇರಿಕೊಂಡು ಬೆಳೆಯಲು ಪ್ರಾರಂಭಿಸುತ್ತದೆ. ಇದು ಸುಮಾರು 50 ಲಕ್ಷ ಮಕ್ಕಳಲ್ಲಿ ಒಂದೆರಡು ಪ್ರಕರಣಗಳಲ್ಲಿ ಮಾತ್ರ ಕಂಡುಬರುವ ಅತ್ಯಂತ ವಿರಳ ವೈದ್ಯಕೀಯ ಸ್ಥಿತಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ವೈದ್ಯ ಡಾ. ಶಿವರಾಜ ಪಾಟೀಲ್, "ನಮ್ಮ ವೃತ್ತಿಜೀವನದಲ್ಲೇ ಇದು ಅತ್ಯಂತ ಅಪರೂಪದ ಪ್ರಕರಣ. ರಾಜ್ಯದಲ್ಲಿ ವರದಿಯಾಗಿರುವ ಇಂತಹ ಘಟನೆಗಳಲ್ಲಿ ಇದು ಮೂರನೆಯದು. ಮಗುವಿನ ದೇಹದೊಳಗಿರುವ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಬೇಕಾಗಿದೆ. ಇಂದು ಅಥವಾ ನಾಳೆ ಬೆಂಗಳೂರಿನಲ್ಲಿ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವ ಸಾಧ್ಯತೆಯಿದ್ದು, ಆ ಬಳಿಕ ಮಗುವಿನ ಚೇತರಿಕೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ" ಎಂದು ತಿಳಿಸಿದ್ದಾರೆ.