ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಘೋಷಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

DK Shivakumar: “ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಸರ್ಕಾರ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆಬ್ರವರಿ 14ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆʼʼ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ರಾಯಚೂರಿನಲ್ಲಿ ನಡೆದ ಕಾರುಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಭಾಗವಹಿಸಿದರು.

ರಾಯಚೂರು, ಫೆ. 8: “ತುಂಗಭದ್ರಾ ಅಣೆಕಟ್ಟಿನ 30 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿರುವುದನ್ನು ತಪ್ಪಿಸಲು ಈ ಭಾಗದ ನಾಯಕರು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಾನು ಇದಕ್ಕೆ ಬದ್ಧನಾಗಿದ್ದೇನೆ. ಆದರೆ ಆಂಧ್ರ ಸಿಎಂ ಈ ವಿಚಾರವಾಗಿ ಚರ್ಚೆ ಮಾಡಲು ನನಗೆ ಸಮಯಾವಕಾಶ ನೀಡುತ್ತಿಲ್ಲ. ಅವರು ನಮಗೆ ಅವಕಾಶ ಕೊಟ್ಟರೆ ಪೋಲಾಗುತ್ತಿರುವ 30 ಟಿಎಂಸಿ ತುಂಗಭದ್ರಾ ನೀರನ್ನು ನಿಲ್ಲಿಸಿ, ಈ ಭಾಗದ ರೈತರು, ಜನರಿಗೆ ನ್ಯಾಯ ಒದಗಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಭರವಸೆ ನೀಡಿದರು.

ರಾಯಚೂರು ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನಿಮ್ಮ ಜಿಲ್ಲೆಯ ಶಾಸಕರು ನನ್ನ ಮೇಲೆ ಒತ್ತಡ ತಂದು, ಕಾಲುವೆಗಳ ಕೊನೆ ಭಾಗದವರೆಗೂ ನೀರು ಹರಿಯುವಂತೆ ಮಾಡಲು ಕಾನೂನು ತರುವಂತೆ ಮಾಡಿದರು. ಕಾಲುವೆಗಳ ಮೇಲ್ಬಾಗದಲ್ಲಿ ನೀರೆತ್ತುವ ಮೂಲಕ ಕೊನೆ ಭಾಗದವರೆಗೆ ನೀರು ತಲುಪುತ್ತಿರಲಿಲ್ಲ. ಹೀಗಾಗಿ ನಾವು ಹೊಸ ಕಾನೂನು ತಂದಿದ್ದೇವೆ. ಕಳೆದ ಬಾರಿ ನೀರಾವರಿ ಸಚಿವನಾಗಿದ್ದಾಗ ಇಲ್ಲಿಗೆ ಬಂದಿದ್ದೆ. ಬಂಗಾರಪ್ಪನವರ ಕೆರೆಗೆ 300 ಕೋಟಿ ರುಪಾಯಿ ನೀಡಿದ್ದು ಆ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಟಿಬಿ ಅಣೆಕಟ್ಟಿನ ಎಲ್ಲ ಗೇಟ್ ಬದಲಾಯಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ನಾವು ಇನ್ನು ಮಾಡಿಯೇ ತೀರುತ್ತೇವೆ” ಎಂದು ತಿಳಿಸಿದರು.

ಭೂಮಿ ಗ್ಯಾರಂಟಿ

“ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಸರ್ಕಾರ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಫೆಬ್ರವರಿ 14ರಂದು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಮುಂದೆಯೂ ನೀವು ಈ ಕೈ ಅನ್ನು ಅಧಿಕಾರಕ್ಕೆ ತಂದು ಶಕ್ತಿ ಕೊಡಬೇಕು” ಎಂದು ಮನವಿ ಮಾಡಿದರು.

ಖರ್ಗೆ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿ

“ಈ ಹಿಂದೆ ಕಾಂಗ್ರೆಸ್ ಸರ್ಕಾರದ ಮಧ್ಯಾಹ್ನ ಬಿಸಿಯೂಟ, ಮನರೇಗಾ, ಸ್ತ್ರೀಶಕ್ತಿ ಕಾರ್ಯಕ್ರಮಗಳನ್ನು ಈ ಭಾಗದಿಂದಲೇ ನಾವು ಆರಂಭಿಸಿದೆವು. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಹೋರಾಟ ಮಾಡಿ ನಿಮ್ಮೆಲ್ಲರ ಅಭಿವೃದ್ಧಿಗೆ 371ಜೆ ಜಾರಿಗೆತಂದು ನಿಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದ್ದಾರೆ. ಹೀಗಾಗಿ ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಅವರನ್ನು ಸ್ಮರಿಸುವಂತೆ ಈ ಭಾಗದ ಜನ ಖರ್ಗೆ ಅವರನ್ನು ಸ್ಮರಿಸಬೇಕು. ಆ ಮೂಲಕ ಖರ್ಗೆ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕು ಎಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ” ಎಂದು ಮನವಿ ಮಾಡಿದರು.

ನರೇಗಾದಲ್ಲಿ ಅಕ್ರಮ ನಡೆದಿದೆ ಎನ್ನುವವರು ಬಹಿರಂಗ ಚರ್ಚೆಗೆ ಬರಲಿ: ಡಿಕೆಶಿ ಸವಾಲು

“ಶರಣರು, ದಾಸರು, ಸಂತರ ಪರಂಪರೆಯ ನೆಲೆಬೀಡು. ರೈತರನ್ನು ಕಾಪಾಡುವ ಕೃಷ್ಣ, ತುಂಗಭದ್ರೆಯ ಬೀಡು. ಎಡೆದೊರೆ ಖ್ಯಾತಿಯ ರಾಯಚೂರು ಜಿಲ್ಲೆ ಇಡೀ ರಾಜ್ಯಕ್ಕೆ ಬೆಳಕು ಕೊಟ್ಟ ಪವಿತ್ರವಾದ ನಾಡು. ನಮ್ಮೆಲ್ಲರಿಗೂ ಉತ್ತಮವಾದ ಸೋನಾ ಮಸೂರಿ ಅಕ್ಕಿ, ಹತ್ತಿ, ಚಿನ್ನ ನೀಡುತ್ತಿರುವ ಪವಿತ್ರವಾದ ನೆಲಕ್ಕೆ ಬಂದು, ರಾಯಚೂರು ಉತ್ಸವದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ” ಎಂದರು.

“ಇದು ಪರಂಪರೆಯ ಬೇರು, ಪ್ರಗತಿಯ ಗುರಿ ಇಲ್ಲಿದೆ. ರಾಯಚೂರು ಉತ್ಸವ ನಮ್ಮೆಲ್ಲರ ಹೆಮ್ಮೆ. ಕಲೆ, ಸಂಸ್ಕೃತಿ ಸಂಗಮವೇ ರಾಯಚೂರು ಉತ್ಸವ. ಇತ್ತೀಚೆಗೆ ನಾನು ಕನಕಪುರದಲ್ಲಿ ತಾಲ್ಲೂಕು ಮಟ್ಟದ ಕನಕೋತ್ಸವ ಕಾರ್ಯಕ್ರಮ ಮಾಡಿದೆ. ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಬೇಡಿಕೊಳ್ಳೋ – ಮಂಕುತಿಮ್ಮ ಎಂದು ಡಿವಿಜಿ ಹೇಳಿದ್ದಾರೆ. ಅದೇ ರೀತಿ 20 ವರ್ಷಗಳ ಬಳಿಕ ರಾಯಚೂರಿನಲ್ಲಿ ಈ ಉತ್ಸವವನ್ನು ಮಾಡುವ ಮೂಲಕ ನಿಮ್ಮನ್ನು ಸಂತೋಷವಾಗಿಡಲು ಈ ಪ್ರಯತ್ನ ಮಾಡಿದ್ದಾರೆ” ಎಂದು ಡಿಕೆಶಿ ಹೇಳಿದರು.

DK Shivakumar in Raichur

ಜನಪದವೇ ನಮ್ಮೆಲ್ಲರ ಗುರುತು

“ಈ ನಾಡಿನ ನಾಡಿ, ಜನರ ಸೌಹಾರ್ದತೆಯನ್ನು ರಾಯಚೂರು ಜಿಲ್ಲೆಯಲ್ಲಿ ಕಾಣುತ್ತಿದ್ದೇವೆ. ಕಳೆದ ಮೂರು ದಿನಗಳಲ್ಲಿ ಲಕ್ಷಾಂತರ ಜನ ಈ ಸಂಭ್ರಮದ ಉತ್ಸವದಲ್ಲಿ ಪಾಲ್ಗೊಂಡಿದ್ದೀರಿ ಎಂದು ನಮ್ಮ ನಾಯಕರು ಹೇಳಿದ್ದು ಕೇಳಿ ಬಹಳ ಸಂತೋಷವಾಯಿತು. ಜನಪದವೇ ನಮ್ಮೆಲ್ಲರ ಗುರುತು. ಸಂಸ್ಕೃತಿ, ಕಲೆಯೇ ನಮ್ಮೆಲ್ಲರ ಶಕ್ತಿ. ನಿಮ್ಮನ್ನು ಸಂತೋಷವಾಗಿಡುವುದು ನಮ್ಮ ಸರ್ಕಾರದ ಗುರಿ. ನಾನು ಚುನಾವಣೆ ಸಮಯದಲ್ಲಿ ಇಲ್ಲಿಗೆ ಬಂದಾಗ ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ ಎಂದು ಹೇಳಿದ್ದೆ. ಈ ದಾನ ಧರ್ಮ ಮಾಡುವ ಕೈ ಅಧಿಕಾರಕ್ಕೆ ಬಂದಿದ್ದಕ್ಕೆ ಈ ಸಂತೋಷ ಬಂದಿದೆ. ಎಲ್ಲರಿಗೂ 200 ಯೂನಿಟ್ ವರೆಗೂ ವಿದ್ಯುತ್ ಉಚಿತ, 10 ಕೆ.ಜಿ ಅಕ್ಕಿ, ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ, ನಿರುದ್ಯೋಗ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಈ ಐದು ಗ್ಯಾರಂಟಿ ಯೋಜನೆಗಳ ಮೂಲಕ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲಾಗುತ್ತಿದೆ” ಎಂದರು.

ಧರ್ಮ ಯಾವುದಾದರೂ ತತ್ವವೊಂದೇ

“ಆಕಾಶಕ್ಕೆ ಏಣಿ ಇಲ್ಲ, ಸಮುದ್ರಕ್ಕೆ ಸೇತುವೆ ಇಲ್ಲ. ಆದರೆ ರಾಯಚೂರು ನಾಡು, ಭತ್ತದ ಬೀಡು ನಮಗೆ ಶಕ್ತಿ ನೀಡುತ್ತಿದೆ. ಆಭರಣದ ರೂಪ ಬೇರೆಯಾದರೂ ಅದನ್ನು ಮಾಡುವ ಚಿನ್ನ ಒಂದೇ ಆಗಿದೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆಯಾಯವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ಇಲ್ಲಿ ನಾವು ಬೇರೆ ಬೇರೆ ಸಮುದಾಯದ ಜನ ಸೇರಿದ್ದೇವೆ. ಕಲೆಗಳು ಬೇರೆಯಾದರೂ ಕಲಾವಿದರೆಲ್ಲರೂ ಒಂದೇ. ಕಲಾವಿದರಿಗೆ ಜಾತಿ ಧರ್ಮದ ಬೇಧವಿಲ್ಲ. ಇದು ರೈತರ ನಾಡು. ಹಸಿದಾಗ ಅನ್ನ ಕೊಟ್ಟು, ಬದುಕಿದಾಗ ಶಿಕ್ಷಣ ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನೀವು ಹೊಸ ರೂಪ ನೀಡುತ್ತಿದ್ದೀರಿ” ಎಂದು ಹೇಳಿದರು.

ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಅನುಕೂಲ ಆಗಿಲ್ಲ, ಯಾವ ಹೈ ಸ್ಪೀಡ್‌ ರೈಲೂ ಬರಲ್ಲ: ಡಿಕೆಶಿ ಟೀಕೆ

image

ರಾಯಚೂರು ಚಾಲುಕ್ಯರು, ಚೋಳರು, ವಿಜಯನಗರ ಅರಸರು ಆಳಿದ ಭೂಮಿ. ಎಲ್ಲ ಧರ್ಮದ ನಾಯಕರು ಬಂದ ಭೂಮಿ. ನಮ್ಮ ಸರ್ಕಾರ ನಿಮ್ಮ ಜತೆಯಲ್ಲಿದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಬದ್ಧರಾಗಿದ್ದೇವೆ. ಈ ಜಿಲ್ಲೆಯ ಆಸ್ಪತ್ರೆ ವಿಚಾರದಲ್ಲಿ ಐತಿಹಾಸಿಕ ತೀರ್ಮಾನ ಮಾಡಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಕಲ್ಪ ಮಾಡಿದ್ದಾರೆ. ಈ ಭಾಗದಲ್ಲಿ ಏಮ್ಸ್ ತರಬೇಕು ಎಂದು ನಾಯಕರು ಪಣ ತೊಟ್ಟಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ

ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Ramesh Ballamoole

View all posts by this author