ರಾಯಚೂರು: ಫೋಟೋ ತೆಗೆಯಲು ನದಿಯ ಮೇಲಿನ ಬ್ರಿಡ್ಜ್ ಬದಿಗೆ ನಿಲ್ಲಿಸಿ ನೀರಿಗೆ ತಳ್ಳಿ ಕೊಲ್ಲಲು ಯತ್ನಿಸಿದಳು (Murder attempt) ಎಂದು ಪತ್ನಿಯ ವಿರುದ್ಧ ಆರೋಪ ಮಾಡಿದ್ದ ಪತಿ ತಾತಪ್ಪನ ವಿರುದ್ಧ ಈಗ ಪೋಕ್ಸೋ ಕೇಸ್ (POCSO case) ದಾಖಲಾಗಿದೆ. ಘಟನೆಯ ವಿಡಿಯೋಗಳು ವೈರಲ್ ಆಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ತನ್ನನ್ನು ನದಿಗೆ ನೂಕಿದಳು ಎಂದು ವರಾತ ತೆಗೆದಿದ್ದ ತಾತಪ್ಪ, ಈಕೆಯ ಜೊತೆ ಒಂದು ದಿನವೂ ದಾಂಪತ್ಯ ಮಾಡಲಾರೆ ಎಂದು ಹಠ ಹಿಡಿದಿದ್ದ.
ಬ್ರಿಡ್ಜ್ ಮೇಲಿನಿಂದ ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ತಾತಪ್ಪ ವಿರುದ್ಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ತಾತಪ್ಪ ಬಾಲ್ಯವಿವಾಹವಾಗಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಕೇಸ್ ದಾಖಲಾಗಿದೆ. ತಾತಪ್ಪ 15 ವರ್ಷ 8 ತಿಂಗಳ ಅಪ್ರಾಪ್ತೆಯನ್ನು ವಿವಾಹವಾಗಿದ್ದ. ಹೀಗಾಗಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ತಾತಪ್ಪ, ಆತನ ತಾಯಿ, ಅಪ್ರಾಪ್ತೆಯ ತಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ದೇವಸುಗೂರು ಪಿಡಿಒ ರವಿಕುಮಾರ್ ನೀಡಿದ್ದ ದೂರಿನ ಅಡಿಯಲ್ಲಿ ಕೇಸ್ ದಾಖಲಾಗಿದೆ. ಬಾಲಕಿಯ ರಕ್ಷಣೆ ಮಾಡಿರುವ ಯಾದಗಿರಿ ಮಹಿಳಾ ರಕ್ಷಣಾ ಘಟಕದವರು ಯಾದಗಿರಿ ಜಿಲ್ಲಾ ಬಾಲಕಿಯರ ಬಾಲಮಂದಿರಕ್ಕೆ ಆಕೆಯನ್ನು ಶಿಫ್ಟ್ ಮಾಡಿದ್ದಾರೆ.
ನೀರಿಗೆ ಬಿದ್ದ ತಾತಪ್ಪ ಈಜಿ ನಡುಗಡ್ಡೆಯಲ್ಲಿ ಕುಳಿತಿದ್ದ. ನಂತರ ಹಗ್ಗ ಎಸೆದು ಆತನನ್ನು ರಕ್ಷಿಸಲಾಗಿತ್ತು. ಮರಳಿ ಬಂದ ಬಳಿಕ ಆತ ನಾನು ಈಕೆಯ ಜೊತೆ ಸಂಸಾರ ಮಾಡುವುದಿಲ್ಲ ಎಂದು ಹಠ ಹಿಡಿದು ಆಕೆಯನ್ನು ತವರಿಗೆ ಕಳಿಸಿದ್ದಲ್ಲದೆ, ವಿಚ್ಛೇದನ ಮಾಡಿಕೊಂಡಿದ್ದ. ʼನಾನು ಆತನನ್ನು ತಳ್ಳಿಲ್ಲ, ಅವನೇ ಹಾರಿದ್ದಾನೆʼ ಎಂದು ಯುವತಿ ಆರೋಪಿಸಿದ್ದಳು. ಈಕೆಯ ಜೊತೆ ದಾಂಪತ್ಯ ಇಷ್ಟವಿಲ್ಲದೆ ತಾತಪ್ಪ ಈ ರೀತಿ ನಾಟಕವಾಡಿದ್ದಾನೆ ಎಂದೂ ಆರೋಪಿಸಲಾಗಿದೆ.
ಇದನ್ನೂ ಓದಿ: Raichur News: ಪತಿಯನ್ನು ನದಿಗೆ ತಳ್ಳಿದ ಪ್ರಕರಣಕ್ಕೆ ಟ್ವಿಸ್ಟ್; ಬಾಲ್ಯ ವಿವಾಹ ಆರೋಪ, ತಾತಪ್ಪಗೆ ಸಂಕಷ್ಟ!