ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Accident News: ಕರಾಳ ಭಾನುವಾರ: ಅಪಘಾತಗಳಲ್ಲಿ ರಾಜ್ಯದ ನಾನಾ ಕಡೆ 12 ಜನ ಸಾವು

ರಾಜ್ಯದ ಹಲವು ಕಡೆ ನಿನ್ನೆ ಹಲವು ಕಡೆ ಅಪಘಾತಗಳು ಸಂಭವಿಸಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಹಲವೆಡೆ ರಸ್ತೆ ಅಪಘಾತಗಳು ಸಂಭವಿಸಿದ್ದರೆ, ಇನ್ನೊಂದೆಡೆ ಮೀನು ಹಿಡಿಯಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ. ಅಂತೂ ನಿನ್ನೆ ಭಾನುವಾರ, ರಾಜ್ಯಕ್ಕೆ ಕರಾಳ ಭಾನುವಾರವಾಗಿ ಪರಿಣಮಿಸಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.09 : ರಾಜ್ಯದಲ್ಲಿ ನಿನ್ನೆ ಭಾನುವಾರ ಒಂದೇ ದಿನ ನಡೆದ ಹಲವು ಪ್ರತ್ಯೇಕ ಅಪಘಾತಗಳಲ್ಲಿ (Road Accident News) ಒಟ್ಟು 12 ಜನರು ಸಾವಿಗೀಡಾಗಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಬೀದರ್ ಕೋಲಾರ ಮುಂತಾದೆಡೆ ನಡೆದ ಪ್ರತ್ಯೇಕ ಅಪಘಾತಗಳಲ್ಲಿ 12 ಜನರು ಪ್ರಾಣ ತೆತ್ತಿದ್ದಾರೆ.

ಬ್ರಿಡ್ಜ್‌ಗೆ ಬೈಕ್ ಡಿಕ್ಕಿಯಾಗಿ ಮೂವರು ಸಾವು

ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಬ್ರಿಡ್ಜ್ ಗೆ ಬೈಕ್ ಡಿಕ್ಕಿಯಾಗಿ ದಂಪತಿ ಹಾಗೂ ಓರ್ವ ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಬಳಿಯ ನಾಗಣ್ಣ ಕ್ರಾಸ್ ಬಳಿ ನಡೆದಿದೆ. ರಾಜೇಶ್ವರ ಗ್ರಾಮದ ನಿವಾಸಿಗಳಾದ ವೆಂಕಟ ಕರಟ್ಮಲ್ (40) ಪತ್ನಿ ಶಿಲ್ಪ (35) ಹಾಗೂ ಅವರ ಪುತ್ರಿ ರಕ್ಷಿತ (12) ಮೃತಪಟ್ಟವರು. ಮಗ ದಿಗಂಬರ್ (15) ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀದರ್ ನಿಂದರಾಜೇಶ್ವರ ಗ್ರಾಮಕ್ಕೆ ನಾಲ್ವರು ಒಂದೇ ಬೈಕ್‌ನಲ್ಲಿ ಬರುವಾಗ ಈ ಅಪಘಾತ ಸಂಭವಿಸಿದೆ.

ಬೋಲೆರೋ ಪಲ್ಟಿಯಾಗಿ 3 ಕಾರ್ಮಿಕರು ದುರ್ಮರಣ

ಬೊಲೆರೋ ವಾಹನ ಪಲ್ಟಿಯಾಗಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಸಂಭವಿಸಿದೆ. ಆಂಧ್ರಪ್ರದೇಶದ ಮುನಿಯಮ್ಮ ವೆಂಕಟಪ್ಪ ಸೇರಿ ಮೂವರು ಸಾವಿಗೀಡಾಗಿದ್ದಾರೆ. ಅಪಘಾತದಲ್ಲಿ ಸುಮಾರು 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಆಂಧ್ರಪ್ರದೇಶದ ಮದನಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಲಿ ಕೆಲಸ ಮುಗಿಸಿಕೊಂಡು ಹೋಗುವಾಗ ಈ ದುರಂತ ಸಂಭವಿಸಿದೆ. ಅಪಘಾತದ ಕುರಿತು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ಹಿಡಿಯಲು ಹೋಗಿ ಇಬ್ಬರು ನೀರುಪಾಲು

ಕೃಷಿಹೊಂಡದಲ್ಲಿ ಮೀನು ಹಿಡಿಯಲು ಹೋಗಿ ಓರ್ವ ಬಾಲಕ ಸೇರಿ ಇಬ್ಬರು ನೀರು ಪಾಲಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಚಂದುರಾಯನ ಪಾಳ್ಯದಲ್ಲಿ ನಡೆದಿದೆ. ಮೃತಪಟ್ಟವರು ಶಂಕರ್ (32) ಹಾಗೂ ಬಾಲಕ ಮೋಹಿತ್ (17) ಎಂದು ತಿಳಿದು ಬಂದಿದೆ. ಘಟನೆ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಹರಿದು ಗರ್ಭಿಣಿ ಸಾವು

ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿಯಾಗಿ, ಸ್ಕೂಟಿಯಲ್ಲಿ ತೆರಳುತ್ತಿದ್ದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಬಾಗಲೂರಿನ ಗುಂಡಪ್ಪ ಕ್ರಾಸ್ ಬಳಿ ಸಂಭವಿಸಿದೆ. ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿ ಅಪಘಾತ ನಡೆದಿದೆ. ಬೂದಿಗೆರೆಯ ವಿರಗ ನಗರ ನಿವಾಸಿ ಮಾನಸ ಮೃತ ಗರ್ಭಿಣಿ ಎಂದು ತಿಳಿದು ಬಂದಿದೆ. ಹಿಂಬದಿಯಿಂದ ಡಿಕ್ಕಿ ಹೊಡೆದು ಗರ್ಭಿಣಿ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪೊಲೀಸರು ಸದ್ಯ ಸಿಮೆಂಟ್ ಮಿಕ್ಸರ್ ಲಾರಿ ಚಾಲಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟಿಗೆ ಆಟೋ ಡಿಕ್ಕಿಯಾಗಿ ವೃದ್ಧ ಸಾವು

ಆಟೋ ಡಿಕ್ಕಿ ಆಗಿ, ಸ್ಕೂಟಿಯಲ್ಲಿ ತೆರಳುತ್ತಿದ್ದ ವೃದ್ಧರು ಸಾವನ್ನಪ್ಪಿರುವ ಘಟನೆ ಚಿಕ್ಕಮಂಗಳೂರು ತಾಲೂಕಿನ ಕಬ್ಬಿಣ ಸೇತುವೆ ಗ್ರಾಮದ ಬಳಿ ಹೆದ್ದಾರಿಯಲ್ಲಿ ನಡೆದಿದೆ. ಆಟೋ ಡಿಕ್ಕಿಯಾಗಿ ಉದ್ದೆಗೌಡ (68) ಎನ್ನುವ ವೃದ್ಧರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ಆಟೋ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಆಟೋ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವು

ಕಾರು ಡಿಕ್ಕಿಯಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹೊರವಲಯದಲ್ಲಿ ಸಂಭವಿಸಿದೆ. ಬೈಕ್ ಸವಾರರಾದ ನಾಗರಾಜು (68) ಹಾಗು ವೆಂಕಟರೆಡ್ಡಿ (50) ಮೃತ ದುರ್ದೈವಿಗಳು. ಬೈಕಿಗೆ ಕಾರು ಡಿಕ್ಕಿ ಹೊಡೆದು ಸುಮಾರು 200 ಮೀಟರ್ ವರೆಗೂ ಎಳೆದೊಯ್ದಿದೆ. ಅಪಘಾತ ನಂತರ ಕಾರು ನಿಲ್ಲಿಸಿ ಚಾಲಕ ಮತ್ತು ಇತರರು ಪರಾರಿಯಾಗಿದ್ದಾರೆ. ಅಪಘಾತದ ಕುರಿತು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೀಶ್‌ ಕೇರ

View all posts by this author