ರಾಯಚೂರು, ಡಿ.26: ಕರ್ನಾಟಕದ ರಾಯಚೂರು (Raichuru) ಹಾಗೂ ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ (Mantralaya Sri Guru Raghavendra Swamy) ಮಠದಲ್ಲಿ ಇದೀಗ ಭಾಷಾ ಗೊಂದಲ ಉದ್ಭವಿಸಿದೆ. ದೇಗುಲದ ಮುಂಭಾಗದಲ್ಲಿ ''ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ'' ಎಂಬ ಮಂತ್ರವನ್ನು ಕನ್ನಡದಲ್ಲಿ ಬರೆದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಆಂಧ್ರ ಪ್ರದೇಶ ಗಡಿಯಲ್ಲಿರುವ ಮಂತ್ರಾಲಯಕ್ಕೆ ಕರ್ನಾಟಕ ಹಾಗೂ ಇನ್ನಿತರ ಹೊರ ರಾಜ್ಯಗಳಿಂದಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕರ್ನಾಟಕದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಾಯರ ಮಠಕ್ಕೆ ಭೇಟಿ ನೀಡುತ್ತಾರೆ. ಅಪಾರ ದೇಣಿಗೆ ನೀಡುತ್ತಾರೆ. ಮಂತ್ರಾಲಯ ಮಠದಲ್ಲಿ ಕನ್ನಡ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದ್ದು, ತೆಲುಗು ಭಾಷೆಯನ್ನು ಕಡೆಗಣಿಸಲಾಗುತ್ತಿದೆ ಎಂದು ಕೆಲ ತೆಲುಗು ಭಾಷಿಗರು ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಮಠದ ಮುಂಭಾಗದಲ್ಲಿ ''ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ' ಎಂಬ ರಾಯರ ಸ್ತೋತ್ರದ ಶ್ಲೋಕವನ್ನು ಕನ್ನಡದಲ್ಲಿ ಬರೆಯಲಾಗಿದೆ. ಈ ಕನ್ನಡ ಭಾಷೆಯ ಈ ಬರಹ ಇದೀಗ ಭಾಷಾ ಸಂಘರ್ಷಕ್ಕೆ ಕಾರಣವಾಗಿದೆ. ಮಠದಲ್ಲಿ ಕನ್ನಡ ಭಾಷೆ ಹಾಸುಹೊಕ್ಕಾಗಿರುವುದಕ್ಕೆ, ಮಂತ್ರಾಲಯದಲ್ಲಿ ಕನ್ನಡ ಬಳಕೆ ವಿರೋಧಿಸಿ ತೆಲುಗು ಭಾಷಿಗರು ಅಸಮಾಧಾನ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.
ಅಂಜನಾದ್ರಿ, ಮಂತ್ರಾಲಯಕ್ಕೆ ರಿಷಬ್ ಶೆಟ್ಟಿ ಕುಟುಂಬದೊಂದಿಗೆ ಭೇಟಿ
ರಾಯಚೂರಿನ ಗಡಿಯಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಆಂಧ್ರಪ್ರದೇಶದ ಭಾಗವಾಗಿದೆ. ಅಲ್ಲಿ ತೆಲುಗು ಭಾಷೆಯನ್ನು ಸಂಪೂರ್ಣವಾಗಿ ಕೈ ಬಿಡುವುದೇಕೆ? ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕೆಲವರು ಪೋಸ್ಟ್ ಮಾಡಿದ್ದು, ಆಂಧ್ರ ಪ್ರದೇಶ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಟ್ಯಾಗ್ ಮಾಡಲಾಗಿದೆ. ʼಕರ್ನಾಟಕದಿಂದ ಅತ್ಯಧಿಕ ಭಕ್ತರು ಬರುತ್ತಾರೆ, ಜೊತೆಗೆ ಇಲ್ಲಿ ಕನ್ನಡ ಭಾಷಿಕರೂ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆʼ ಎಂದು ಹಲವರು ಉತ್ತರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಎದ್ದಿರುವ ಈ ಹೊಸ ವಿವಾದ ಭಕ್ತರಲ್ಲಿ ಅನಗತ್ಯ ಗೊಂದಲಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಕಾಣಿಸಿದೆ. ಈ ಬಗ್ಗೆ ಎರಡೂ ರಾಜ್ಯಗಳ ಸರ್ಕಾರಗಳು ಯಾವ ರೀತಿ ಪ್ರತಿಕ್ರಿಯಿಸುತ್ತವೆ ನೋಡಬೇಕಿದೆ.