ದಾವಣಗೆರೆ, ಮಾ.23 : ಏಪ್ರಿಲ್ 9ರಂದು ಬಾಗಲಕೋಟೆ (bagalakote) ಹಾಗೂ ದಾವಣಗೆರೆ ದಕ್ಷಿಣ (Davanagere south) ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ (Byelection) ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದು ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಶಾಮನೂರು ನಾಮಪತ್ರ ಸಲ್ಲಿಕೆ ಮಾಡಿದರು. ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ವೇಳೆ ಅವರಿಗೆ ಸಿಎಂ ಸಿದ್ದರಾಮಯ್ಯ (cm siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಾಥ್ ನೀಡಿದರು.
ಸಮರ್ಥ್ ತಂದೆ ಮಲ್ಲಿಕಾರ್ಜುನ ಹಾಗೂ ತಾಯಿ ಪ್ರಭಾ ಮಲ್ಲಿಕಾರ್ಜುನ ಕೂಡ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಾವು ಸಮರ್ಥ್ ಅವರನ್ನು ಅಭ್ಯರ್ಥಿಯಾಗಿ ಮಾಡಿದ್ದೇವೆ. ನಾನು ಕೂಡ ಇವತ್ತು ನಾಮಪತ್ರ ಸಲ್ಲಿಸುವಾಗ ಭಾಗಿಯಾಗಿದ್ದೆ. ಬ್ಲಾಕ್ ಕಮಿಟಿ ಅಧ್ಯಕ್ಷ ಅಯುಬ್ ಕೂಡ ಇದ್ದರು. ನಮ್ಮದು ಎಲ್ಲರನ್ನೂ ಒಳಗೊಂಡಿರುವಂತಹ ಪಕ್ಷ. ಯಾವ ಶಾಸಕರು ಮೃತರಾಗುತ್ತಾರೋ ಅವರ ಕುಟುಂಬಕ್ಕೆ ಟಿಕೆಟ್ ನೀಡಲಾಗುತ್ತೆ.ಇದು ಕಾಂಗ್ರೆಸ್ ಪಕ್ಷದ ನೀತಿ. ಬಾಗಲಕೋಟೆಯಲ್ಲಿ ಮೇಟಿ ಅವರ ಚಿಕ್ಕಮಗನಿಗೆ ಟಿಕೆಟ್ ನೀಡಲಾಗಿದೆ. ದಾವಣಗೆರೆಯಲ್ಲಿ ಸಮರ್ಥ ಅವರಿಗೆ ಟಿಕೆಟ್ ನೀಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರ ಅಭ್ಯರ್ಥಿ ಘೋಷಣೆ ಹೈಕಮಾಂಡ್‌ಗೆ ತಲೆ ನೋವಾಗಿ ಪರಿಣಮಿಸಿತ್ತು. ಆದರೆ ಕಾಂಗ್ರೆಸ್ ಬಿ ಫಾರಂ ನೀಡುವ ಮುನ್ನವೇ ಸಮರ್ಥ್ ಅವರು ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಮುಸ್ಲಿಮರು ಪಟ್ಟು ಹಿಡಿದಿದ್ದರು.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡಬೇಕು ಎಂಬುದು ಸಚಿವ ಜಮೀರ್ ಅಹಮದ್ ಖಾನ್ ಅವರ ಬಲವಾದ ಬೇಡಿಕೆಯಾಗಿತ್ತು. ಆದರೆ, ಹೈಕಮಾಂಡ್ ಶಾಮನೂರು ಕುಟುಂಬದ ಕುಡಿ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಅಸಮಾಧಾನಗೊಂಡಿರುವ ಜಮೀರ್, ಇಂದು ಸಮರ್ಥ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.
ದಾವಣಗೆರೆ ದಕ್ಷಿಣ ಉಪಚುನಾವಣೆ; ಕಾಂಗ್ರೆಸ್ ಟಿಕೆಟ್ ಘೋಷಣೆಗೂ ಮುನ್ನವೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ!
ಸಾದಿಕ್ ಪೈಲ್ವಾನ್ ಬಂಡಾಯ
ಇತ್ತ ಕಾಂಗ್ರೆಸ್ ಒಳಗಿನ ಭಿನ್ನಮತದ ಲಾಭ ಪಡೆಯಲು ಸಿದ್ಧರಾಗಿರುವ ಜಮೀರ್ ಬೆಂಬಲಿತ ಅಲ್ಪಸಂಖ್ಯಾತ ನಾಯಕ ಸಾದಿಕ್ ಪೈಲ್ವಾನ್ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ಸಾದಿಕ್ ಪೈಲ್ವಾನ್ ಇಂದು ಬೃಹತ್ ಮೆರವಣಿಗೆಯ ಮೂಲಕ ಶಕ್ತಿ ಪ್ರದರ್ಶನ ಮಾಡಿ, ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ ಎದುರು ಸಾವಿರಾರು ಬೆಂಬಲಿಗರೊಂದಿಗೆ ಆಗಮಿಸಿದ ಸಾದಿಕ್, "ನನ್ನ ಹೋರಾಟ ಸಮುದಾಯದ ಹಕ್ಕಿಗಾಗಿ" ಎಂದು ಘೋಷಿಸಿದ್ದಾರೆ.