ಮಂಗಳೂರು, ಮಾ.21: ʼಯಕ್ಷರಂಗದ ಸವ್ಯಸಾಚಿʼ ʼದಶಾವತಾರಿʼ ಎಂದೇ ಹೆಸರಾಗಿದ್ದ, ತೆಂಕುತಿಟ್ಟು ಯಕ್ಷಗಾನ (Yakshagana) ರಂಗದ ಅತ್ಯಂತ ಪ್ರಭಾವಶಾಲಿ ಮತ್ತು ಮೇರು ಕಲಾವಿದರಲ್ಲಿ ಒಬ್ಬರಾದ ಸೂರಿಕುಮೇರು ಗೋವಿಂದ ಭಟ್ (Surikumeru Govinda Bhat) ಇನ್ನಿಲ್ಲ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ 1938ರ ಮಾರ್ಚ್ 22ರಂದು ಜನಿಸಿದ ಇವರು 70ಕ್ಕೂ ಹೆಚ್ಚು ವರ್ಷಗಳ ಕಾಲ ಯಕ್ಷರಂಗಕ್ಕೆ ತಮ್ಮ ಜೀವನ ಮುಡಿಪಾಗಿಟ್ಟರು. 1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರಿ ಸುಮಾರು ಏಳು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿದರು. ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ ಸೋಮನಾಥೇಶ್ವರ ಮೊದಲಾದ ಪ್ರಸಿದ್ಧ ಮೇಳಗಳಲ್ಲಿ ತಿರುಗಾಟ ನಡೆಸಿದರು. ಧರ್ಮಸ್ಥಳ ಮೇಳದ ಪ್ರಧಾನ ಕಲಾವಿದರಾಗಿ 54 ವರ್ಷ ಸೇವೆ ಸಲ್ಲಿಸಿದರು. ಕಂಚಿನ ಕಂಠ ಇವರದಾಗಿತ್ತು. ತೆಂಕುತಿಟ್ಟು ಶೈಲಿಯ ಪ್ರಬುದ್ಧ ಸ್ಪಷ್ಟ ಅರ್ಥಗಾರಿಕೆ, ಶಿಸ್ತುಬದ್ಧ ನಾಟ್ಯ, ಅಭಿನಯದಿಂದ ಕೂಡಿದ ಸರ್ವಾಂಗೀಣ ಕಲೆಗಾರಿಕೆ ಇವರ ಶಕ್ತಿಯಾಗಿತ್ತು. ನಾಟ್ಯವನ್ನು ಕುರಿಯ ವಿಠಲ ಶಾಸ್ತ್ರೀ, ಪರಮಶಿವನ್, ಮಾಧವ ಮೆನನ್, ರಾಜನ್ ಅಯ್ಯರ್ ಮುಂತಾದವವರಲ್ಲಿ ಕಲಿತಿದ್ದರು.
ಗೋವಿಂದ್ ಭಟ್ ಅವರು, ಯಕ್ಷಗಾನದಲ್ಲಿ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಿ ಸೈ ಎನ್ನಿಸಿಕೊಂಡಿದ್ದರಿಂದ ಅವರನ್ನು ʼಸವ್ಯಸಾಚಿʼ ಎಂದು ಕರೆಯಲಾಗುತ್ತಿತ್ತು. ಕೌರವ, ಇಂದ್ರಜಿತು, ಕರ್ಣ, ಹಿರಣ್ಯಕಶಿಪು, ಹಿರಣ್ಯಾಕ್ಷ, ರಕ್ತಬೀಜ, ಮಾಗಧ, ಅತಿಕಾಯ, ನರಕಾಸುರ,ದೇವೇಂದ್ರ, ಅರ್ಜುನ, ಹನುಮಂತ, ಭೀಷ್ಮ, ಬಾಹುಬಲಿ, ವಿಶ್ವಾಮಿತ್ರ ಮುಂತಾದ ವೇಷಗಳಲ್ಲಿ ಅದ್ವಿತೀಯ ಸಾಧನೆ ಮಾಡಿದರು. ಪ್ರೌಢ ಅರ್ಥಗಾರಿಕೆಗೂ ಹೆಸರುವಾಸಿಯಾಗಿದ್ದ ಅವರು ಮಹಾನ್ ಅರ್ಥಧಾರಿಗಳಾದ ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ರಾಮದಾಸ ಸಾಮಗ ಮುಂತಾದವರ ಜೊತೆಗೆ ಅರ್ಥ ಹೇಳಿ ಸೈ ಅನಿಸಿಕೊಂಡಿದ್ದಾರೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪುರಸ್ಕಾರ, ಪಾರ್ತಿಸುಬ್ಬ ಪುರಸ್ಕಾರ ಇತ್ಯಾದಿಗಳನ್ನು ಪಡೆದಿದ್ದಾರೆ. ʼಎಪ್ಪತ್ತು ತಿರುಗಾಟಗಳುʼ ಎಂಬ ಆತ್ಮಕತೆಯನ್ನು ಬರೆದಿದ್ದಾರೆ. ಯಕ್ಷಗಾನ ನಾಟ್ಯ ಹಾಗೂ ಅಭಿನಯಕ್ಕೆ ಸಂಬಂಧಿಸಿದ ಕಮ್ಮಟ- ಗೋಷ್ಠಿಗಳಿಗೆ ಇವರು ಸದಾ ಸಂಪನ್ಮೂಲ ವ್ಯಕ್ತಿಯಾಗಿರುತ್ತಿದ್ದರು. ಇವರಲ್ಲಿ ನಾಟ್ಯ ಹಾಗೂ ಅರ್ಥಗಾರಿಕೆ ಕಲಿತ ಶಿಷ್ಯರು ಇಂದು ಯಕ್ಷಗಾನದ ನಾನಾ ಮೇಳಗಳಲ್ಲಿ ಪ್ರಬುದ್ಧ ಕಲಾವಿದರಾಗಿ ಹೊಮ್ಮಿದ್ದಾರೆ. ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ.