ಬೆಂಗಳೂರು, ಫೆ.2: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ (Shakti Scheme) ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ (free bus ticket) ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಈ ಜನಪ್ರಿಯ ಯೋಜನೆಯನ್ನು ಕೆಲವರು ಅಕ್ರಮವಾಗಿ ಬಳಸಿಕೊಳ್ಳಲು ಅಡ್ಡದಾರಿ ಹಿಡಿಯುತ್ತಿರುವುದು ಬೆಳಕಿಗೆ ಬಂದಿದೆ. ಉಚಿತ ಟಿಕೆಟ್ ಪಡೆಯುವ ಭರಾಟೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಮಹಿಳೆಯ ಹೆಸರಿರುವ ಆಧಾರ್ ಕಾರ್ಡ್ ತೋರಿಸಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ರಾಜ್ಯದ ಸರ್ಕಾರಿ ಬಸ್ ಒಂದರಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಪ್ರಯಾಣಿಸುತ್ತಿದ್ದರು. ಕಂಡಕ್ಟರ್ ಟಿಕೆಟ್ ಕೇಳಲು ಬಂದಾಗ, ಮಹಿಳೆ ಉಚಿತ ಪ್ರಯಾಣದ ಶೂನ್ಯ ಟಿಕೆಟ್ ಪಡೆಯಲು ತಮ್ಮ ಗುರುತಿನ ಚೀಟಿಯನ್ನು ನೀಡಿದ್ದಾರೆ. ಮಹಿಳೆಯು ನೀಡಿದ ಆಧಾರ್ ಕಾರ್ಡ್ ಪರಿಶೀಲಿಸಿದ ಕಂಡಕ್ಟರ್ ದಂಗಾಗಿದ್ದಾರೆ. ಕಾರಣ, ಮಹಿಳೆ ಬುರ್ಖಾ ಧರಿಸಿದ್ದರೆ, ಅವರು ನೀಡಿದ ಆಧಾರ್ ಕಾರ್ಡ್ ನಲ್ಲಿ ಲಕ್ಷ್ಮಮ್ಮ ಎಂಬ ಹಿಂದೂ ಮಹಿಳೆಯ ಹೆಸರಿತ್ತು.
ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಫೋಟೋಗೂ, ಎದುರಿಗೆ ಇರುವ ಮಹಿಳೆಗೂ ಯಾವುದೇ ಸಂಬಂಧವಿಲ್ಲದಿರುವುದನ್ನು ಕಂಡಕ್ಟರ್ ತಕ್ಷಣವೇ ಗುರುತಿಸಿದ್ದಾರೆ. ಕೂಡಲೇ ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ತಡವರಿಸಿದ್ದಾರೆ. ಬೇರೊಬ್ಬರ ಆಧಾರ್ ಕಾರ್ಡ್ ತೋರಿಸಿ ಸರ್ಕಾರಿ ಸೌಲಭ್ಯ ಪಡೆಯಲು ಯತ್ನಿಸಿರುವುದು ಈ ಮೂಲಕ ಸಾಬೀತಾಗಿದೆ. ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಈ ವಂಚನೆ ಅಲ್ಲಿಯೇ ತಡೆಯಲ್ಪಟ್ಟಿದೆ.
Stree Shakti Scheme: ಇನ್ನು ಮುಂದೆ ಎಲೆಕ್ಟ್ರಿಕ್ ಎಸಿ ಬಸ್‌ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ!
ಈ ಘಟನೆಯ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡುತ್ತಲೇ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಟಿಕೆಟ್ ಉಳಿಸುವ ವಿಷಯವಲ್ಲ, ಬದಲಾಗಿ ಬೇರೊಬ್ಬರ ಗುರುತಿನ ಚೀಟಿಯನ್ನು ದುರ್ಬಳಕೆ ಮಾಡಿಕೊಳ್ಳುವುದು ಗಂಭೀರ ಅಪರಾಧ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಫೋರ್ಜರಿ ಅಥವಾ ವಂಚನೆ ಎಂದು ಪರಿಗಣಿಸಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.
ಶಕ್ತಿ ಯೋಜನೆಯು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಜಾರಿಗೆ ತರಲಾಗಿದೆ. ಆದರೆ ಇಂತಹ ಘಟನೆಗಳು ಯೋಜನೆಯ ಮೂಲ ಉದ್ದೇಶಕ್ಕೇ ಧಕ್ಕೆ ತರುತ್ತಿವೆ. ಅನ್ಯ ರಾಜ್ಯದವರು ಅಥವಾ ಅನರ್ಹರು ನಕಲಿ ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಿದ ವರದಿಗಳಿವೆ. ಸಾರಿಗೆ ನಿಗಮದ ಸಿಬ್ಬಂದಿಗಳು ಟಿಕೆಟ್ ನೀಡುವಾಗ ಗುರುತಿನ ಚೀಟಿಗಳನ್ನು ಕರಾರುವಾಕ್ಕಾಗಿ ಪರಿಶೀಲಿಸಬೇಕು ಮತ್ತು ಇಂತಹ ವಂಚನೆ ಕಂಡುಬಂದಲ್ಲಿ ಸ್ಥಳದಲ್ಲೇ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Shakti scheme: ಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ 2.5 ಪಟ್ಟು ಹೆಚ್ಚಳ: ಅಜೀಂ ಪ್ರೇಮ್‌ಜೀ ವಿವಿ ವರದಿ