92ನೇ ಇಳಿ ವಯಸ್ಸಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಶಾಮನೂರು ಶಿವಶಂಕರಪ್ಪ
Shamanur Shivashankarappa: 94 ವರ್ಷದ ಹಿರಿಯ ರಾಜಕಾರಣಿ, ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ದೇಶದ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2023ರಲ್ಲಿ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದಾಗ 92 ವರ್ಷ ವಯಸ್ಸಾಗಿತ್ತು.
ಶಾಮನೂರು ಶಿವಶಂಕರಪ್ಪ -
ಬೆಂಗಳೂರು, ಡಿ. 14: 94 ವರ್ಷದ ಹಿರಿಯ ರಾಜಕಾರಣಿ, ಕಾಂಗ್ರೆಸ್‌ನ ಅತ್ಯಂತ ಪ್ರಭಾವಿ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ (Shamanur Shivashankarappa) ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 1931ರ ಜೂನ್ 16ರಂದು ದಾವಣಗೆರೆಯಲ್ಲಿ ಜನಸಿದ ಶಾಮನೂರು ದೇಶದ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು 6 ಸಲ ಶಾಸಕ ಹಾಗೂ 1 ಬಾರಿ ಸಂಸದರಾಗಿದ್ದರು.
2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಗಳಿಸಿದ್ದರು. ಆಗ ಅವರಿಗೆ 92 ವರ್ಷ ವಯಸ್ಸಾಗಿತ್ತು.
92ನೇ ವರ್ಷದಲ್ಲೂ ಅಬ್ಬರದ ಪ್ರಚಾರ
2023ರಲ್ಲಿ 92ನೇ ವರಷಕ್ಕೆ ಕಾಲಿಟ್ಟ ಶಾಮನೂರು ಶಿವಶಂಕರಪ್ಪ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಹಲವರು ಸಂದೇಹ ಪಟ್ಟಿದ್ದರು. ಆದರೆ ಎಲ್ಲರನ್ನೂ ಅಚ್ಚರಿಗೆ ದೂಡಿ ಅವರು ಗೆದ್ದು ಬಂದಿದ್ದರು. ಪ್ರಚಾರದಲ್ಲಿ ಸಕ್ರೀಯವಾಗಿ ಭಾಗಿಯಾಗಿ ತಮಗೆ ವಯಸ್ಸು ಕೇವಲ ಸಂಖ್ಯೆಯಷ್ಟೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದರು. ಹೀಗೆ ತಮ್ಮ ಕ್ಷೇತ್ರದಲ್ಲಿ ಅವರು 6 ಚುನಾವಣೆಗಳಲ್ಲಿ ಸತತವಾಗಿ ಪ್ರಾಬಲ್ಯ ಸ್ಥಾಪಿಸಿದ್ದರು.
ಸಿದ್ದರಾಮಯ್ಯ ಅವರ ಎಕ್ಸ್ ಪೋಸ್ಟ್:
ಮಾಜಿ ಸಚಿವರು, ಶಾಸಕರು, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರು ಆದ ಶಾಮನೂರು ಶಿವಶಂಕರಪ್ಪ ಅವರ ನಿಧನವಾರ್ತೆ ನೋವುಂಟುಮಾಡಿದೆ.
— Siddaramaiah (@siddaramaiah) December 14, 2025
ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅಪವಾದ, ಆರೋಪಗಳಿಂದ ದೂರವಿದ್ದು, ಸಿಕ್ಕ ಅಧಿಕಾರವನ್ನು ಜನಕಲ್ಯಾಣಕ್ಕಾಗಿಯೇ ಮುಡುಪಿಟ್ಟಿದ್ದ ಮುತ್ಸದ್ದಿ ನಾಯಕನ… pic.twitter.com/Dqa5UA2AJY
ಶಿವಶಂಕರಪ್ಪ ವಿರುದ್ಧ ಸತತವಾಗಿ ಯಶವಂತರಾವ್ ಜಾದವ್ ಅವರನ್ನು ಕಣಕ್ಕಿಳಿಸುತ್ತ ಬಂದಿದ್ದ ಬಿಜೆಪಿ 2023ರಲ್ಲಿ ತನ್ನ ಅಭ್ಯರ್ಥಿಯನ್ನು ಬದಲಿಸಿ ಮಾಜಿ ಮೇಯರ್ ಬಿ.ಜೆ. ಅಜಯ ಕುಮಾರ್ ಅವರಿಗೆ ಟಿಕೆಟ್ ನೀಡಿತ್ತು. ಶಿವಶಂಕರಪ್ಪ ಅವರ ಹೆಸರು ಮತ್ತು ಅವರ ಕುಟುಂಬ ಟ್ರಸ್ಟ್, ಬಾಪೂಜಿ ಸಮೂಹ ಸಂಸ್ಥೆಗಳ ಮೂಲಕ ನಡೆಸಿದ ವಿವಿಧ ಜನಪರ ಕಾರ್ಯಕ್ರಮಗಳು ಶಿವಶಂಕರಪ್ಪ ಅವರನ್ನು ಮತ್ತೊಮ್ಮೆ ಗೆಲುವಿನ ದಡ ಸೇರಿಸಿತ್ತು. 1994ರಿಂದಲೂ ತನ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಂಡಿತ್ತು.
ಕಳಚಿದ ಕಾಂಗ್ರೆಸ್‌ನ ಹಿರಿಯ ಕೊಂಡಿ; ಶಾಮನೂರು ಶಿವಶಂಕರಪ್ಪ ನಿಧನಕ್ಕೆ ವಿವಿಧ ರಾಜಕೀಯ ನಾಯಕರಿಂದ ಸಂತಾಪ
ಶಿವಶಂಕರಪ್ಪ 1994ರಿಂದ 2004ರವರೆಗೆ ದಾವಣಗೆರೆ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2008ರಲ್ಲಿ ದಾವಣಗೆರೆ ದಕ್ಷಿಣದಿಂದ ಕಣಕ್ಕಿಳಿದಿದ್ದರು. 1997ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದು ಸಂಸದರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. 1994, 2004, 2008, 2013, 2018, 2023ರಲ್ಲಿ ಶಾಸಕರಾಗಿದ್ದರು.
ರಾಜ್ಯ ಸರ್ಕಾರದ ವಿರುದ್ಧವೇ ಅಸಮಾಧಾನ
ವಿಶೇಷ ಎಂದರೆ ಶಾಮನೂರು ಶಿವಶಂಕರಪ್ಪ ಹಿಂದೊಮ್ಮೆ ತಮ್ಮದೇ ಪಕ್ಷದ ರಾಜ್ಯ ಸರ್ಕಾರದ ವಿರುದ್ದ ಹೇಳಿಕೆ ನೀಡಿ ರಾಜಕೀಯ ಚರ್ಚೆಗೆ ಕಾರಣರಾಗಿದ್ದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಅವರು ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದರು.
ʼʼಸಂಪುಟದಲ್ಲಿ ಏಳು ಮಂದಿ ಲಿಂಗಾಯಿತ ಸಚಿವರು ಇದ್ದಾರೆ. ಆದರೆ ನಾನು ಹೇಳುತ್ತಿರುವುದು ಅಧಿಕಾರಿಗಳ ಬಗ್ಗೆ. ಲಿಂಗಾಯತ ಸಮಾಜದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಬಗ್ಗೆ ನಾನು ಹೇಳುತ್ತಿದ್ದೇನೆʼʼ ಎಂದಿದ್ದರು. ಅದಾದ ಬಳಿಕ ಶಿವಮೊಗ್ಗದ ಬೆಕ್ಕಿನಕಲ್ಮಠದಲ್ಲಿ ಜಗದ್ಗುರು ಶ್ರೀ ಗುರುಬಸವ ಸ್ವಾಮೀಜಿಗಳ 112ನೇ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಯಡಿಯೂರಪ್ಪ ಪುತ್ರ, ಬಿಜೆಪಿಯ ಬಿ.ವೈ. ರಾಘವೇಂದ್ರರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಹೇಳಿ ಅನೇಕರ ಹುಬ್ಬೇರುವಂತೆ ಮಾಡಿದ್ದರು.