ಶಿವಮೊಗ್ಗ: ಬಿಜೆಪಿ ಜನಾಕ್ರೋಶ ಯಾತ್ರೆ ವಿರೋಧಿಸಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾಕಾರರು ಬಿಜೆಪಿ ಸಭೆ ನಡೆಯುತ್ತಿದ್ದ ಗೋಪಿ ವೃತ್ತದ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದು, ಬಂಧಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡ ಹರ್ಷಿತ್ ಗೌಡ ಮಾತನಾಡಿ, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಜೀವನದ ಮೇಲೆ ಗದಾಪ್ರಹಾರ ಮಾಡುತ್ತಿರುವ ಬಿಜೆಪಿಗೆ ಜನಾಕ್ರೋಶ ಯಾತ್ರೆ ಮಾಡುವ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ನೈತಿಕತೆ ಇಲ್ಲ. ಬಿಜೆಪಿಯ ಜನಾಕ್ರೋಶ ಯಾತ್ರೆಯನ್ನು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ ಎಂದು ಕಿಡಿಕಾರಿದರು.
ಬಿಜೆಪಿ ಜನಾಕ್ರೋಶ ಯಾತ್ರೆ ವಿರುದ್ಧ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ (Shivamogga News) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹರ್ಷಿತ್ ಗೌಡ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ದುಬಾರಿಯಾಗಿದ್ದಾಗ ಯುಪಿಎ ಸರ್ಕಾರ ಕೇವಲ 63 ರೂಪಾಯಿಗೆ ಪೆಟ್ರೋಲ್ ಮಾರಾಟವಾಗುತ್ತಿತ್ತು. ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಬಿಜೆಪಿ 103 ರೂ.ಗೆ ಲೀಟರ್ ಪೆಟ್ರೋಲ್ ಮಾರಾಟ ಮಾಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯೇ ಕಾರಣ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ರಮೇಶ್ ಹೆಗಡೆ ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕೇಂದ್ರ ಸರ್ಕಾರದ ತಪ್ಪುಗಳನ್ನು ಮರೆಮಾಚಲು ಬಿಜೆಪಿ ಜನಾಕ್ರೋಶ ಯಾತ್ರೆಯ ನಾಟಕವಾಡುತ್ತಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಈಡೇರಿಸಿ ಜನಸಾಮಾನ್ಯರ ಮನ ಗೆದ್ದಿದೆ. ಇದನ್ನು ಸಹಿಸಲಾಗದೇ ಬಿಜೆಪಿ ಜನಾಕ್ರೋಶದ ನಾಟಕವಾಡುತ್ತಿದ್ದು ಇದನ್ನು ಜಿಲ್ಲಾ ಯುವ ಕಾಂಗ್ರೆಸ್ ಖಂಡಿಸುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Karnataka Weather: ಮುಂದಿನ 6 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸಾಧ್ಯತೆ!