ನವದೆಹಲಿ, ಜೂ. 5: ಕಾರ್ಯಕ್ಷಮತೆಯಲ್ಲಿ ಟಾಪರ್ ಆಗಿದ್ದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ನೇತೃತ್ವದ ಗ್ರಾಹಕ ವ್ಯವಹಾರ ಸಚಿವಾಲಯ ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ. ರಾಷ್ಟ್ರೀಯ ಇ-ಆಡಳಿತದಲ್ಲಿ 'ರಜತ ಪ್ರಶಸ್ತಿ'ಗೆ ಭಾಜನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಸಚಿವಾಲಯಗಳ ಕಾರ್ಯಕ್ಷಮತೆ ಮೌಲ್ಯಾಂಕನದಲ್ಲಿ ಪ್ರಲ್ಹಾದ್ ಜೋಶಿ ಅವರ ಗ್ರಾಹಕ ವ್ಯವಹಾರ ಸಚಿವಾಲಯ ನಂಬರ್ ಒನ್ ಆಗಿತ್ತು. ಇದೀಗ ಕೇಂದ್ರ ಸರ್ಕಾರ, 2026ರ "ಇ ಆಡಳಿತ"ಕ್ಕಾಗಿ ನೀಡುತ್ತಿರುವ ರಾಷ್ಟ್ರೀಯ ಬೆಳ್ಳಿ ಪುರಸ್ಕಾರವನ್ನು ಮುಡಿಗೇರಿಸಿಕೊಂಡಿದೆ.
ಸಚಿವ ಪ್ರಲ್ಹಾದ್ ಜೋಶಿ ಅವರ ಮಾರ್ಗದರ್ಶನ, ಸಲಹೆ-ಸೂಚನೆಯಂತೆ ಗ್ರಾಹಕರ ಹಿತರಕ್ಷಣೆಗೆ ಬದ್ಧವಾಗಿ, ಪಾರದರ್ಶಕತೆಗೆ ಒತ್ತು ನೀಡುತ್ತಿದೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ. ಇದಕ್ಕೆ ನಿದರ್ಶನವಾಗಿ 'ಇ-ಜಾಗೃತಿ' ಪೋರ್ಟಲ್ 'ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳಲ್ಲಿ ಪ್ರತಿಷ್ಠಿತ ಬೆಳ್ಳಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
₹ 5 ಲಕ್ಷ ಮತ್ತು ಟ್ರೋಫಿ
ದೇಶಾದ್ಯಂತ ಇ-ಆಡಳಿತದಲ್ಲಿ ಅತ್ಯುತ್ತಮ ಸೇವೆ ಒದಗಿಸುತ್ತಿರುವುದನ್ನು ಗುರುತಿಸಿ ಕೇಂದ್ರ ಸರ್ಕಾರ ಈ ಪ್ರಶಸ್ತಿ ಘೋಷಿಸಿದ್ದು, ಟ್ರೋಫಿ, ಪ್ರಮಾಣಪತ್ರ ಮತ್ತು ₹ 5 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ. ಈ ರಾಷ್ಟ್ರೀಯ ಪ್ರಶಸ್ತಿಗೆ ಕೇಂದ್ರ ಗ್ರಾಹಕ ಇಲಾಖೆಯ 'ಇ ಜಾಗೃತಿ ' ಪೋರ್ಟಲ್ ಸೇರಿದಂತೆ ಏಳು ವಿಭಾಗಗಳಿಂದ ಒಟ್ಟು 17 ಯೋಜನೆಗಳು ಆಯ್ಕೆಯಾಗಿದ್ದು, ಈ ಪೈಕಿ ಇ ಜಾಗೃತಿ ಡಿಜಿಟಲ್ ವೇದಿಕೆಯೂ ಒಂದು. ಪ್ರಶಸ್ತಿ ಮುಡಿಗೇರಿಸಿಕೊಂಡ 17 ಯೋಜನೆಗಳಲ್ಲಿ 10 ಚಿನ್ನದ ಪ್ರಶಸ್ತಿ (₹ 10 ಲಕ್ಷ ನಗದು) ಮತ್ತು 6 ಬೆಳ್ಳಿ ಪ್ರಶಸ್ತಿ (₹ 5 ಲಕ್ಷ ನಗದು) ಹಾಗೂ 1 ಜ್ಯೂರಿ ಪ್ರಶಸ್ತಿಯನ್ನು ಪಡೆದಿವೆ.
ʼʼಸೌರಶಕ್ತಿಯಲ್ಲಿ ಅಮೆರಿಕವನ್ನೇ ಮೀರಿಸಿದ ಭಾರತ, ಜಾಗತಿಕವಾಗಿ 2ನೇ ಸ್ಥಾನʼʼ: ಪ್ರಲ್ಹಾದ್ ಜೋಶಿ
ಇ ಆಡಳಿತ ಅನುಷ್ಠಾನದಲ್ಲಿನ ಶ್ರೇಷ್ಠತೆ ಗುರುತಿಸಲು ಮತ್ತು ಉತ್ತೇಜಿಸಲು ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳನ್ನು (NAeG) ನೀಡಲಾಗುತ್ತದೆ. ಅಂತೆಯೇ ಈ ವರ್ಷ ಏಳು ವಿಭಾಗಗಳಲ್ಲಿ 29ನೇ NAeG 2026 ಪ್ರಶಸ್ತಿ ಪುರಸ್ಕೃತರು ಗ್ರಾಮ ಪಂಚಾಯತ್‌ಗಳ ವರ್ಗವನ್ನು ಒಳಗೊಂಡಿದ್ದು, ಡಿಜಿಟಲೀಕರಣದ ಪಾರದರ್ಶಕ, ತ್ವರಿತ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ರಾಜಸ್ಥಾನದ ಜೈಪುರದಲ್ಲಿ ನಡೆಯುವ 29ನೇ ಇ-ಆಡಳಿತ ರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.