ಬೆಳಗಾವಿ: ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಿಂದ ಹಿಂದಿರುಗುವಾಗ ಭೀಕರ ಅಪಘಾತ (Road Accident) ಸಂಭವಿಸಿ, ಬೆಳಗಾವಿ ಮೂಲದ ನಾಲ್ವರು ಸೇರಿ 6 ಮಂದಿ ಮೃತಪಟ್ಟು, 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಬೆಳಗಾವಿ ಮೂಲದ ನಾಲ್ವರು ಸೇರಿ ಒಟ್ಟು 6 ಮಂದಿ ಪ್ರಾಣಕಳೆದುಕೊಂಡಿದ್ದಾರೆ. ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಟಿಟಿ ವಾಹನ ಮೊದಲಿಗೆ ಬೈಕ್‌ಗೆ ಡಿಕ್ಕಿ ಹೊಡೆದು, ನಂತರ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಇಂದೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮನ್ಪುರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಬಳಿ ಅಪಘಾತ ನಡೆದಿದೆ. ಉಜ್ಜಯಿನಿಯಿಂದ ಟಿಟಿ ವಾಹನದಲ್ಲಿ 19 ಮಂದಿ ವಾಪಸಾಗುತ್ತಿದ್ದರು. ಶುಕ್ರವಾರ ಬೆಳಗಿನ ಜಾವ ಅಪಘಾತ ನಡೆದಿದ್ದು, ಮೊದಲಿಗೆ ಬೈಕ್‌ಗೆ ಟಿಟಿ ಡಿಕ್ಕಿಯಾಗಿ ನಂತರ ಲಾರಿಗೆ ಗುದ್ದಿದೆ. ಈ ವೇಳೆ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಪೈಕಿ ಟಿಟಿಯಲ್ಲಿದ್ದ ಇಬ್ಬರನ್ನು ಬೆಳಗಾವಿಯ ಶಹಾಪುರ ನಿವಾಸಿ ಡ್ರೈವರ್ ಸಾಗರ್(55), ಗಣೇಶಪುರ ನಿವಾಸಿ ನಿತಿ ಪಾಟೀಲ್(50) ಎಂದು ಗುರುತಿಸಲಾಗಿದೆ. ಸವಿತಾ (40), ಸುಭಾಷ್ ರೆನ್ (35), ಶೀತಲ್ ರಾಮಚಂದ್ರ (27), ತೀರತ್ (48), ಶ್ರುತಿ (32), ಭಾವ್ ಸಿಂಗ್ (36), ಶಿವ ಸಿಂಗ್ (31), ಬಬಿತಾ (56), ರಾಜು (63), ಮಾಲ್ವಾ (60), ಸುನೀತಾ (50), ಪ್ರಶಾಂತ್ (52), ಶಂಕರ್ (60), ಲತಾ (62), ಬಂಗಲ್ ವಾಡಿಯಪ್ಪ (55) ಗಾಯಾಳುಗಳಾಗಿದ್ದಾರೆ. ಗಾಯಾಳುಗಳಿಗೆ ಇಂದೋರ್‌ನ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾನ್ಪುರ ಪ್ರದೇಶದ ಭೇರುಘಾಟ್‌ನಲ್ಲಿರುವ ದೇವಾಲಯದ ಬಳಿ ಅಪಘಾತ ಸಂಭವಿಸಿದೆ. ತಡರಾತ್ರಿ ಟ್ರಾವೆಲರ್ ಅತಿ ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಆಗ ಟ್ರಾವೆಲರ್ ಚಾಲಕನ ನಿಯಂತ್ರಣ ತಪ್ಪಿ ಮುಂದೆ ನಿಂತಿದ್ದ ಟ್ಯಾಂಕರ್‌ಗೆ ಗುದ್ದಿದೆ. ಟ್ರಾವೆಲರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಳಗಾವಿ ಮೂಲದವರು. ಎಲ್ಲರೂ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Illegal Immigrants: ದಟ್ಟ ಅರಣ್ಯದಲ್ಲಿ ಅಡಗಿ ಕುಳಿತು ಅಮೆರಿಕಗೆ ಎಂಟ್ರಿ ಕೊಟ್ಟಿದ್ದ ಅಕ್ರಮ ವಲಸಿಗರು! ಹಳೆಯ ವಿಡಿಯೊ ವೈರಲ್
ದೇಗುಲ ಕಳಸಾರೋಹಣ ವೇಳೆ ಕ್ರೇನ್ ಬಕೆಟ್ ಮುರಿದು ವ್ಯಕ್ತಿ ಸಾವು
ಹಾವೇರಿ: ಗಂಗಾಪರಮೇಶ್ವರಿ ದೇಗುಲದ ಕಳಸಾರೋಹಣ ಸಂದರ್ಭದಲ್ಲಿ ಕ್ರೇನ್ ಬಕೆಟ್ ಮುರಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ (Haveri News) ಹಾನಗಲ್ ತಾಲೂಕು ಶೇಷಗಿರಿ ಗ್ರಾಮದಲ್ಲಿ ನಡೆದಿದೆ. ಕಳಸವನ್ನು ದೇಗುಲದ ಗೋಪುರದ ಮೇಲೆ ಕೂರಿಸುವಾಗ ಅವಘಡ ಸಂಭವಿಸಿದೆ. ಈ ವೇಳೆ ಮಂಜು ಪಾಟೀಲ್ (42) ಮೃತಪಟ್ಟಿದ್ದು, ಮಂಜು ಬಡಿಗೇರ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ವ್ಯಕ್ತಿಯನ್ನು ಹಾನಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕ್ರೇನ್ ಮೂಲಕ ದೇವಸ್ಥಾನದ ಗೋಪುರದ ಹತ್ತಿರ ಹೋಗುತ್ತಿದ್ದಂತೆ ಕ್ರೇನ್ ಬಕೆಟ್ ಕಳಚಿ ಬಿದ್ದಿದೆ. ಹೀಗಾಗಿ , ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನದ ಗೋಪುರದ ಮೇಲೆ ಕಳಸ ಹಿಡಲು ಕ್ರೇನ್ ಮೂಲಕ ಹತ್ತಿರ ಹೋಗುತ್ತಿದ್ದಂತೆ ಕ್ರೇನ್ ಬಕೆಟ್ ಕಳಚಿ ಬಿದ್ದು ದುರಂತ ಸಂಭವಿಸಿದೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Road Accident: ರಾಜ್ಯದಲ್ಲಿ ನಾಲ್ಕು ಕಡೆ ಘೋರ ಅಪಘಾತ, ನಾಲ್ವರು ಸಾವು