SL Bhyrappa: ʼʼಪ್ರಶಸ್ತಿಯ ಹಣ ಕನ್ನಡ ಶಾಲೆಗಳ ಅಭಿವೃದ್ಧಿಗೆ ನೀಡಿದ್ದ ಭೈರಪ್ಪʼʼ: ಡಾ. ಮನು ಬಳಿಗಾರ
Sahitya Akademi: ಕನ್ನಡದ ಹೆಸರಾಂತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಸಾಹಿತ್ಯ ಅಕಾಡೆಮಿಯ ದೆಹಲಿಯ ಕೇಂದ್ರ ಕಚೇರಿಯ ರವೀಂದ್ರ ಭವನದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷ ಡಾ. ಮಾಧವ ಕೌಶಿಕ ಮತ್ತು ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸರಾವ್, ಕರ್ನಾಟಕದ ಸದಸ್ಯರಾದ ಡಾ. ಬಸವರಾಜ ಸಾದರ, ಡಾ. ಮನು ಬಳಿಗಾರ ಹಾಗೂ ಬೇರೆ ಬೇರೆ ರಾಜ್ಯಗಳ ಅಕಾಡೆಮಿಯ ಸದಸ್ಯರು ಪಾಲ್ಗೊಂಡಿದ್ದರು.

-

ನವದೆಹಲಿ: ಇತ್ತೀಚೆಗೆ ನಿಧನರಾದ ಕನ್ನಡದ ಹೆಸರಾಂತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ (SL Bhyrappa) ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಸಾಹಿತ್ಯ ಅಕಾಡೆಮಿಯ (Sahitya Akademi) ದೆಹಲಿಯ ಕೇಂದ್ರ ಕಚೇರಿಯ ರವೀಂದ್ರ ಭವನದಲ್ಲಿ ನಡೆಯಿತು. ಅಕಾಡೆಮಿಯ ಅಧ್ಯಕ್ಷ ಡಾ. ಮಾಧವ ಕೌಶಿಕ ಮತ್ತು ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸರಾವ್, ಕರ್ನಾಟಕದ ಸದಸ್ಯರಾದ ಡಾ. ಬಸವರಾಜ ಸಾದರ, ಡಾ. ಮನು ಬಳಿಗಾರ ಹಾಗೂ ಬೇರೆ ಬೇರೆ ರಾಜ್ಯಗಳ ಅಕಾಡೆಮಿಯ ಸದಸ್ಯರು ಪಾಲ್ಗೊಂಡಿದ್ದರು.
ಈ ವೇಳೆ ಡಾ. ಬಸವರಾಜ ಸಾದರ ಮಾತನಾಡಿ, ಕನ್ನಡದ ಪ್ರಮುಖ ಕಾದಂಬರಿಕಾರ ಡಾ. ಭೈರಪ್ಪ ಅವರ ಬಾಲ್ಯದ ಕಷ್ಟದ ಬದುಕು, ವಾರಾನ್ನ ಉಂಡು ವಿದ್ಯಾಭ್ಯಾಸ ಮಾಡಿದ ದಿನಗಳು, ಸಿನಿಮಾ ಥೇಟರಿನ ಗೇಟ್ ಕೀಪರ್ ಆಗಿದ್ದು, ನಾಟಕ ಕಂಪನಿಯ ಲೆಕ್ಕ ಬರೆಯುವ ಕೆಲಸ ಮಾಡಿದ್ದು, ರೈಲು ನಿಲ್ದಾಣದಲ್ಲಿ ಕೂಲಿ ಮಾಡಿದ್ದು ಇವೆಲ್ಲ ಸಂದರ್ಭಗಳನ್ನು ಪ್ರಸ್ತಾಪಿಸಿದರು, ಏನೆಲ್ಲ ಕಷ್ಟಗಳನ್ನೂ ಅನುಭವಿಸಿದ ಅವರು ಓದುವ ಹಂಬಲವೊಂದನ್ನೇ ಇಟ್ಟುಕೊಂಡ ಕಾರಣಕ್ಕಾಗಿ ಮಹತ್ವದ ಸಾಧಕರಾಗಿ ಹಾಗೂ ಕನ್ನಡದ ಶ್ರೇಷ್ಠ ಕಾದಂಬರಿಕಾರರಾಗಿ ಬೆಳೆದರು ಎಂದು ಹೇಳಿದರು.
ಡಾ. ಮನು ಬಳಿಗಾರ ಮಾತನಾಡಿ, ಡಾ. ಭೈರಪ್ಪ ಅವರ ಒಡನಾಟದ ಸಂದರ್ಭಗಳನ್ನು ಸ್ಮರಿಸಿಕೊಂಡರು. ತಾವು ಆಯುಕ್ತರಾಗಿದ್ದಾಗ, ಡಾ. ಭೈರಪ್ಪ ಅವರಿಗೆ ಸರಸ್ವತಿ ಸಮ್ಮಾನ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಕೊಡಮಾಡಿದ ಐದು ಲಕ್ಷ ರೂ. ಅನ್ನು ಸರ್ಕಾರಕ್ಕೆ ಹಿಂದಿರುಗಿಸಿದ ಸಂದರ್ಭವನ್ನು ಪ್ರಸ್ತಾಪಿಸಿ, ಆ ಹಣವನ್ನು ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಸಲು ಸೂಚಿಸಿದ್ದನ್ನು ಹೇಳಿದರು. ಅದರಂತೆ ಸರ್ಕಾರವು ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಅವರನ್ನು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಕೇಳಿದಾಗ, ಅದನ್ನು ನಯವಾಗಿ ತಿರಸ್ಕರಿಸಿ, ಲೇಖಕನೊಬ್ಬನನ್ನು ಆತನ ಬರವಣಿಗೆಯ ಮೂಲಕವೇ ಗೌರವಿಸಬೇಕೇ ಹೊರತಾಗಿ, ಯಾವುದೇ ಹುದ್ದೆಯಿಂದಲ್ಲ ಎಂದುದನ್ನು ಸ್ಮರಿಸಿಕೊಂಡರು. ತಮ್ಮ ಗ್ರಂಥಗಳಿಗೆ ಬರುವ ಗೌರವಧನವನ್ನು ತಮ್ಮ ಹೆಸರಿನ ಪ್ರತಿಷ್ಠಾನಕ್ಕೇ ಸಲ್ಲಬೇಕು ಹಾಗೂ ಆ ಹಣವು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉಪಯೋಗವಾಗಬೇಕು ಎಂದು ಹೇಳಿದ್ದನ್ನು ತಿಳಿಸಿದರು.
ಅಕಾಡೆಮಿಯ ಅಧ್ಯಕ್ಷ ಡಾ. ಮಾಧವ ಕೌಶಿಕ ಮಾತನಾಡಿ, ಡಾ. ಭೈರಪ್ಪ ಭಾರತದ ಮಹಾನ್ ಕಾದಂಬರಿಕಾರರು ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | SL Bhyrappa: ಎಸ್‌ಎಲ್ ಭೈರಪ್ಪ ಕಾದಂಬರಿಗಳಿಗೆ ಮತ್ತೆ ಹೆಚ್ಚಿದ ಬೇಡಿಕೆ, ಹಲವೆಡೆ ಪುಸ್ತಕಗಳು ಖಾಲಿ
ಅಕಾಡೆಮಿಯ ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸರಾವ್, ಭೈರಪ್ಪ ಅವರ ಕೆಲವು ಕಾದಂಬರಿಗಳ ಮಹತ್ವವನ್ನು ವಿವರಿಸಿದರು. ಹಿಂದಿ, ಮರಾಠಿ, ಗುಜರಾಥಿ, ಬಂಗಾಲಿ ಹಾಗೂ ತೆಲುಗು ಭಾಷೆಯ ಸದಸ್ಯರು ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊನೆಯಲ್ಲಿ ಎಲ್ಲ ಸದಸ್ಯರೂ ಮೌನಾಚರಣೆ ಮಾಡುವ ಮೂಲಕ ಡಾ. ಎಸ್. ಎಲ್. ಭೈರಪ್ಪ ಅವರ ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.