ಬೆಂಗಳೂರು ಬಿಸಿನೆಸ್ ಕಾರಿಡಾರ್‌ಗೆ ಸಚಿವ ಸಂಪುಟ ಅನುಮೋದನೆ; ಪರಿಹಾರಕ್ಕೆ ರೈತರಿಗೆ 4 ಆಯ್ಕೆ: ಡಿ.ಕೆ. ಶಿವಕುಮಾರ್
DK Shivakumar: ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ (ಈ ಹಿಂದಿನ ಪೆರಿಫೆರಲ್ ರಿಂಗ್ ರಸ್ತೆ)ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಭೂ ಸಂತ್ರಸ್ತ ರೈತರಿಗೆ ಪರಿಹಾರ ಪಡೆಯಲು ನಾಲ್ಕು ಆಯ್ಕೆಗಳನ್ನು ಕಲ್ಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್. -

ಬೆಂಗಳೂರು: 117 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ (ಈ ಹಿಂದಿನ ಪೆರಿಫೆರಲ್ ರಿಂಗ್ ರಸ್ತೆ) ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಭೂಸಂತ್ರಸ್ತ ರೈತರಿಗೆ ಪರಿಹಾರ ಪಡೆಯಲು ನಾಲ್ಕು ಆಯ್ಕೆಗಳನ್ನು ಕಲ್ಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ದೊಡ್ಡ ತೀರ್ಮಾನ ಕೈಗೊಂಡಿದ್ದು, ಈ ಹಿಂದಿನ ಸರ್ಕಾರ ಉದ್ದೇಶಿಸಿದ್ದ ಪೆರಿಫೆರಲ್ ರಿಂಗ್ ರಸ್ತೆಯನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂದು ಮರುನಾಮಕರಣ ಮಾಡಿ 117 ಕಿ.ಮೀ ಉದ್ದದ ರಸ್ತೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಇಷ್ಟು ಪ್ರಮಾಣದ ಹೊಸ ರಸ್ತೆಯನ್ನು ಸೇರಿಸುವ ಮೂಲಕ ರಾಜ್ಯ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯುತ್ತಿದೆ. ತುಮಕೂರು ರಸ್ತೆಯಿಂದ ಆರಂಭವಾಗಿ ಯಲಹಂಕ, ವೈಟ್ ಫೀಲ್ಡ್, ಆನೇಕಲ್, ಎಲೆಕ್ಟ್ರಾನಿಕ್ ಸಿಟಿ ಮೂಲಕ ಮೈಸೂರು ರಸ್ತೆ ಮಾರ್ಗವಾಗಿ ಬೆಂಗಳೂರನ್ನು ಸುತ್ತುವರೆದು ಮತ್ತೇ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಎಕ್ಸಿಬಿಷನ್ ಸೆಂಟರ್ ಬಳಿ ಸಂಪರ್ಕ ಸಾಧಿಸಲಿದೆ. ಈ ರಸ್ತೆಯು ಬೆಂಗಳೂರಿನ ಉತ್ತರ ಭಾಗದಲ್ಲಿ 73 ಕಿ.ಮೀ. ಸಾಗಲಿದ್ದು, ಉಳಿದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಗಲಿದೆ ಎಂದು ತಿಳಿಸಿದರು.
ಈ ಹಿಂದಿನ ಸರ್ಕಾರ ಈ ಯೋಜನೆಗೆ ಅಧಿಸೂಚನೆ ಹೊರಡಿಸಲಾಗಿತ್ತಾದರೂ ಇದನ್ನು ಹಿಂಪಡೆದಿರಲಿಲ್ಲ. ಈಗ ಬೆಂಗಳೂರಿನಲ್ಲಿ ನೈಸ್ ರಸ್ತೆಗೆ ಪರ್ಯಾಯ ರಸ್ತೆ ಅಗತ್ಯವಿದೆ. ಯಾವುದೇ ಕಾರಣಕ್ಕೂ ಡಿನೋಟಿಫಿಕೇಶನ್ ಮಾಡಬಾರದು ಎಂದು ಈ ಯೋಜನೆ ಕೈಗೊತ್ತಿಕೊಂಡಿದೆ. ಈ ಯೋಜನೆಗೆ ಸರ್ಕಾರದ ಖಾತರಿಯೊಂದಿಗೆ ಹುಡ್ಕೋ ಮೂಲಕ 27 ಸಾವಿರ ಕೋಟಿ ಸಾಲ ಪಡೆಯಲಾಗಿದೆ ಎಂದರು.
ಈ ಯೋಜನೆಗಾಗಿ 100 ಮೀ. ಅಗಲ ಜಾಗಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಸರ್ಕಾರ ಬೆಂಗಳೂರು ಮೈಸೂರು ಹೆದ್ದಾರಿ ಗಾತ್ರ (65 ಮೀ.) ದಲ್ಲೇ ಈ ರಸ್ತೆ ಮಾಡಲು ತೀರ್ಮಾನಿಸಿದೆ. ರಸ್ತೆಯ ಎರಡೂ ಭಾಗದಲ್ಲಿ ಸರ್ವೀಸ್ ರಸ್ತೆ ಇರಲಿದ್ದು, ಪ್ರಮುಖ ರಸ್ತೆ ಟೋಲ್ ರಸ್ತೆಯಾಗಲಿದೆ. ಈ ರಸ್ತೆಯ ಮಧ್ಯೆ ಮೆಟ್ರೋ ಯೋಜನೆ ರೂಪಿಸಲು ಜಾಗ (5 ಮೀ.) ಕಲ್ಪಿಸಲಾಗುವುದು. ಉಳಿದ 35 ಮೀ. ಜಾಗವನ್ನು ರೈತರಿಗೆ ಪರಿಹಾರ ರೂಪದಲ್ಲಿ ಮರಳಿ ನೀಡಲು ತೀರ್ಮಾನಿಸಿದ್ದೇವೆ. ಈ ಜಾಗವನ್ನು ಹರಾಜು ಹಾಕಬೇಕು ಎಂಬ ಸಲಹೆಗಳು ಬಂದಿತ್ತಾದರೂ ರೈತರಿಗೆ ನೀಡಲು ನಿರ್ಧರಿಸಿದ್ದೇವೆ. ಇದು ವಾಣಿಜ್ಯ ಉದ್ದೇಶಕ್ಕೆ ನೆರವಾಗಲಿರುವ ಹಿನ್ನೆಲೆಯಲ್ಲಿ ರೈತರ ಮನವಿ ಮೇರೆಗೆ ಜಾಗವನ್ನು ಅವರಿಗೆ ನೀಡುವ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಪರಿಹಾರ ಪಡೆಯಲು ನಾಲ್ಕು ಆಯ್ಕೆ
ಸರ್ಕಾರ ಹಾಗೂ ಬಿಡಿಎ ಮೇಲೆ ಆರ್ಥಿಕ ಹೊರೆ ಕಡಿಮೆ ಮಾಡಲು ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನಾಲ್ಕು ರೀತಿಯಲ್ಲಿ ಪರಿಹಾರ ನೀಡಲು ಸರ್ಕಾರ ಮುಂದಾಗಿದೆ. ಮಾರುಕಟ್ಟೆ ದರದಲ್ಲಿ ನಗರ ಭಾಗದಲ್ಲಿ ಎರಡು ಪಟ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂರುಪಟ್ಟು ನಗದು ಪರಿಹಾರ ಅಥವಾ ಟಿಡಿಆರ್ ಅಥವಾ ಎಫ್ಎಆರ್ ಅಥವಾ 35% ವಾಣಿಜ್ಯ ಭೂಮಿಯನ್ನು ಪಡೆಯುವ ಅವಕಾಶವನ್ನು ನೀಡಲಾಗಿದೆ. ಒಂದು ವೇಳೆ ವಾಣಿಜ್ಯ ಭೂಮಿ ಬೇಡ ವಸತಿ ಪ್ರದೇಶದಲ್ಲಿ ಜಾಗ ಬೇಕು ಎಂದರೆ ಬಿಡಿಎ ವತಿಯಿಂದ ರೂಪಿಸಲಾಗಿರುವ ನೂತನ ಬಡಾವಣೆಗಳಲ್ಲಿ 40% ಜಾಗ ನೀಡಲಾಗುವುದು. ಬಿಡಿಎ ಕಾಯ್ದೆಯಲ್ಲಿ ಹೊಸ ಕಾಯ್ದೆ ಅನುಸಾರ ಹೆಚ್ಚಿನ ಪರಿಹಾರ ನೀಡಲು ಅವಕಾಶವಿಲ್ಲ. ಆದರೂ ರೈತರಿಗೆ ನೆರವಾಗಲು ಸರ್ಕಾರ ಮಹತ್ವದ ತೀರ್ಮಾನ ಮಾಡಿದೆ ಎಂದು ಮಾಹಿತಿ ನೀಡಿದರು.
2 ವರ್ಷಗಳಲ್ಲಿ ಯೋಜನೆ ಪೂರ್ಣ
ಮುಂದಿನ 2 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳಿಸಲಾಗುವುದು. ಸರ್ಕಾರದ ಈ ತೀರ್ಮಾನಕ್ಕಾಗಿ ರೈತರು ಕಾತುರರಾಗಿದ್ದರು. ಒಂದು ವೇಳೆ ಯಾರಾದರೂ ಭೂಮಿ ನೀಡಲು ನಿರಾಕರಿಸಿದರೆ, ನಾವು ಸಹಜ ಸ್ವಾಧೀನ ಪ್ರಕ್ರಿಯೆ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಟ್ಟು ಯೋಜನೆ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ಡಿನೋಟಿಫಿಕೇಶನ್ ಮಾಡುವುದಿಲ್ಲ. ಸಂಚಾರ ದಟ್ಟಣೆಯಿಂದ ಬೆಂಗಳೂರಿನಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದ್ದು, ಈ ಯೋಜನೆ ಅಗತ್ಯವಾಗಿದೆ. ಈ ಯೋಜನೆಯಿಂದ 1900 ಕುಟುಂಬಗಳಿಗೆ ಪರಿಣಾಮ ಬೀರುತ್ತದೆಯಾದರೂ ಬೆಂಗಳೂರು ನಗರಕ್ಕೆ ದೊಡ್ಡ ಮಟ್ಟದ ನಿರಾಳತೆ ನೀಡಲಿದೆ. ಹೀಗಾಗಿ ರಾಜ್ಯ ಸರ್ಕಾರ ಈ ಮಹತ್ತರ ತೀರ್ಮಾನ ಕೈಗೊಂಡಿದೆ ಎಂದರು.
ಟಿಡಿಆರ್ ವಿನಿಮಯ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ನಾನು ಸೂಚನೆ ನೀಡಿದ್ದೇನೆ. ಈ ಪ್ರಕ್ರಿಯೆ ಸುಗಮವಾಗಿ ಆಸ್ತಿಗಳ ವಿನಿಮಯ ಮಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಭೂಮಿ ಕಳೆದುಕೊಳ್ಳುವವರು ನೋಂದಣಿ ಮಾಡಿಕೊಂಡು, ಈ ಟಿಡಿಆರ್ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರಶ್ನೋತ್ತರ
ಈ ಯೋಜನೆಗೆ ಎಷ್ಟು ಖರ್ಚಾಗಲಿದೆ ಎಂದು ಕೇಳಿದಾಗ, ʼಈ ಹಿಂದೆ ಈ ಯೋಜನೆಗೆ 27 ಸಾವಿರ ಕೋಟಿ ಅಂದಾಜು ಮಾಡಲಾಗಿತ್ತು. ಈಗ ರೂಪಿಸಿರುವ ಯೋಜನೆ ಮೂಲಕ ಹೆಚ್ಚಿನ ರೈತರು ಜಮೀನನ್ನೇ ಆಯ್ಕೆ ಮಾಡಿಕೊಳ್ಳುವುದರಿಂದ ಸುಮಾರು 10 ಸಾವಿರ ಕೋಟಿಗಿಂತ ಕಡಿಮೆ ವೆಚ್ಚವಾಗಲಿದೆʼ ಎಂದು ತಿಳಿಸಿದರು.
ಈ ಯೋಜನೆಯಿಂದ ಸಂಚಾರ ದಟ್ಟಣೆ ಎಷ್ಟು ನಿಯಂತ್ರಿಸಬಹುದು ಎಂದು ಕೇಳಿದಾಗ, ʼಸುಮಾರು 40% ನಷ್ಟು ಸಂಚಾರ ದಟ್ಟಣೆ ತಗ್ಗಲಿದೆ. ಎಲೆಕ್ಟ್ರಾನಿಕ್ ಸಿಟಿ, ತುಮಕೂರು ರಸ್ತೆ, ನೆಲಮಂಗಲ, ಮೈಸೂರು ರಸ್ತೆ ಕಡೆ ಹೋಗುವ ವಾಹನಗಳು ಈ ರಸ್ತೆಯಲ್ಲಿ ಸಾಗಲಿವೆʼ ಎಂದು ತಿಳಿಸಿದರು.
ಎಷ್ಟು ಎಕರೆ ಬಳಕೆಯಾಗುತ್ತಿದೆ, ಇದಕ್ಕೆ ಹೊಸದಾಗಿ ನೋಟಿಫಿಕೇಷನ್ ಮಾಡುತ್ತೀರಾ ಎಂದು ಕೇಳಿದಾಗ, ʼಈಗಾಗಲೇ 2007ರಲ್ಲೇ ನೋಟಿಫಿಕೇಶನ್ ಮಾಡಲಾಗಿದೆ. ಈ ಯೋಜನೆಯಲ್ಲಿ ಉತ್ತರ ಭಾಗದಲ್ಲಿ 1,800 ಎಕರೆ, ದಕ್ಷಿಣ ಭಾಗದಲ್ಲಿ ಕೆಲವು ವಸತಿ ಪ್ರದೇಶಗಳನ್ನು ಸೇರಿಸಿದ್ದೇವೆ. ಅನೇಕ ರೈತರು, ಕೆಲವು ವಿರೋಧ ಪಕ್ಷಗಳ ಶಾಸಕರು ಕೂಡ ಇದು ಅತ್ಯುತ್ತಮ ಯೋಜನೆಯಾಗಿದೆ ಎಂದು ನನ್ನ ಬಳಿ ಹೇಳಿದ್ದಾರೆ. ನಾನು ಅವರ ಹೆಸರು ಹೇಳಿದರೆ ಅವರ ಪಕ್ಷದಲ್ಲಿ ಅವರಿಗೆ ತೊಂದರೆಯಾಗಲಿದೆʼ ಎಂದರು.
ಟೋಲ್ ಪ್ರಮಾಣ ಎಷ್ಟಿರುತ್ತದೆ ಎಂದು ಕೇಳಿದಾಗ, ʼಈಗ ಆ ವಿಚಾರ ಹೇಳುವುದಿಲ್ಲ. ತಾಂತ್ರಿಕ ವಿಚಾರವನ್ನು ನಂತರ ಮಾಹಿತಿ ನೀಡುತ್ತೇವೆ. ಟೋಲ್ ಇಲ್ಲದೆ ಯಾವುದೇ ರಸ್ತೆಯನ್ನು ನಿಭಾಯಿಸಲು ಸಾಧ್ಯವಿಲ್ಲʼ ಎಂದು ತಿಳಿಸಿದರು. ಈ ರಸ್ತೆಯನ್ನು ಬಿಡಿಎ ಮೂಲಕ ಮಾಡಲಾಗುವುದೇ ಎಂದು ಕೇಳಿದಾಗ, ʼಈ ಯೋಜನೆ ಬಿಡಿಎ ಮೂಲಕ ಮಾಡಲಾಗುವುದುʼ ಎಂದು ತಿಳಿಸಿದರು.
ಪರಿಹಾರದಲ್ಲಿ ರೈತರಿಗೆ ಒಂದು ಆಯ್ಕೆ ಮಾತ್ರ ಮಾಡಬೇಕಾ ಅಥವಾ ಬಹು ಆಯ್ಕೆ ಮಾಡುವ ಅವಕಾಶವಿದೆಯೇ ಎಂದು ಕೇಳಿದಾಗ, ʼ20 ಗುಂಟೆಗಿಂತ ಒಳಗಿರುವವರಿಗೆ ನಗದು ಪರಿಹಾರ ಮಾತ್ರ ನೀಡಲಾಗುವುದು. ಅದಕ್ಕಿಂತ ಹೆಚ್ಚಿನ ಭೂಮಿ ಕಳೆದುಕೊಳ್ಳುವವರಿಗೆ ಈ ಆಯ್ಕೆಗಳನ್ನು ನೀಡಲಾಗಿದ್ದು, ಯಾವುದಾದರೂ ಒಂದು ಆಯ್ಕೆಯನ್ನು ಆರಿಸಿಕೊಳ್ಳಬಹುದುʼ ಎಂದು ಸ್ಪಷ್ಟಪಡಿಸಿದರು.
ಈ ಯೋಜನೆ 2 ದಶಕಗಳ ಕಾಲ ನೆನೆಗುದಿಗೆ ಬೀಳಲು ಕಾರಣವೇನು ಎಂದು ಕೇಳಿದಾಗ, ʼಈ ಹಿಂದಿನ ಸರ್ಕಾರಗಳಲ್ಲಿ ಯಾರೂ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿಲ್ಲ. ನಾನು ಬಂದ ಮೇಲೆ ನಾನು ಸಚಿವನಾಗಿದ್ದರೂ ಈ ಯೋಜನೆಗೆ ಅಧಿಕಾರಿ ಅತೀಕ್ ಅವರಿಗೆ ಜವಾಬ್ದಾರಿ ನೀಡಿದೆ. ಈ ಯೋಜನೆ ತ್ವರಿತವಾಗಿ ನಡೆಯಬೇಕು, ಇದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸಬೇಕು ಎಂದು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆʼ ಎಂದು ತಿಳಿಸಿದರು.
ಬಿ ಖಾತಾಗಳನ್ನು ಎ ಖಾತವಾಗಿ ಪರಿವರ್ತಿಸುವುದರಲ್ಲಿ 15 ಸಾವಿರ ಕೋಟಿ ಲೂಟಿ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ, ʼಬಹಳ ಸಂತೋಷ. ಅವರ ಬಳಿ ಇರುವ ತನಿಖಾ ತಂಡವನ್ನು ಹಾಕಲಿʼ ಎಂದರು.
ಈ ಸುದ್ದಿಯನ್ನೂ ಓದಿ | Utthana Prabandha Spardhe 2025: ಉತ್ಥಾನ ವಾರ್ಷಿಕ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳ ಆಹ್ವಾನ
ನಿಮ್ಮ ಸಮುದಾಯಗಳ ಹಿತಕ್ಕಾಗಿ ಸಮೀಕ್ಷೆಯಲ್ಲಿ ಭಾಗವಹಿಸಿ
ಜಾತಿಗಣತಿ ವಿಚಾರವಾಗಿ ಕೇಳಿದಾಗ, ʼನಮ್ಮ ಸಮುದಾಯದ ಸಂಖ್ಯೆ ಕಡಿಮೆ ಇದೆ ಎಂದು ಹಲವರು ಆಪಾದನೆ ಮಾಡಿದ ಪರಿಣಾಮ ಕಾಂಗ್ರೆಸ್ ಪಕ್ಷದ ವರಿಷ್ಠರು, ನಾವು ಕೂತು ಚರ್ಚೆ ಮಾಡಿ, ಕಳೆದ ಗಣತಿ ಮಾಡಿ ಹತ್ತು ವರ್ಷವಾಗಿದೆ ಎಂದು ಮತ್ತೆ ಗಣತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸಮೀಕ್ಷೆ ಆರಂಭವಾಗಿದ್ದು, ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ. ಎಲ್ಲಾ ಸಮುದಾಯದಲ್ಲಿ ಹಿಂದುಳಿದವರಿದ್ದು, ಹೀಗಾಗಿ ಈ ಸಮೀಕ್ಷೆ ಮಾಡುತ್ತಿದ್ದೇವೆ. ಕೋರ್ಟ್ ಕೂಡ ಯಾರಿಗೂ ಬಲವಂತ ಮಾಡಿ ಮಾಹಿತಿ ಪಡೆಯಬೇಡಿ ಎಂದು ಸೂಚಿಸಿದೆ. ಬಡವರು ಹಾಗೂ ನೊಂದವರಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ನಮ್ಮ ಮನೆಗೆ ಗಣತಿದಾರರು ಬಂದಿಲ್ಲ ಎಂದು ದೂರಬೇಡಿ. ಆನ್‌ಲೈನ್ ಮೂಲಕವೂ ಈ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದೇವೆ. ಇದಕ್ಕೆ ಇನ್ನು ಮೂರು ದಿನಗಳ ಕಾಲ ಅವಕಾಶವಿದ್ದು, ನಾನು ಹಾಗೂ ಸಿಎಂ ಅವರು ಕೂತು ಚರ್ಚಿಸಿ ಸರ್ಕಾರಿ ಶಾಲೆಗಳಿಗೆ ಏಳು ದಿನ ರಜೆ ನೀಡಿ ಈ ಸಮೀಕ್ಷೆ ಅವಧಿ ವಿಸ್ತರಿಸಿದ್ದೇವೆ. ಮತ್ತೆ ಇದನ್ನು ವಿಸ್ತರಿಸಲು ಆಗುವುದಿಲ್ಲ. ನಿಮ್ಮ ಸಮಾಜದ ಹಿತಕ್ಕೆ ನೀವು ಈ ಸಮೀಕ್ಷೆಯಲ್ಲಿ ಭಾಗವಹಿಸಿ. ಅಗತ್ಯ ಪ್ರಶ್ನೆಗಳಿಗೆ ಉತ್ತರ ಕೊಟ್ಟರೂ ಸಾಕು. ನಿಮಗೆ ಅನಗತ್ಯ ಎನಿಸಿದ ಪ್ರಶ್ನೆಗಳಿಗೆ ಉತ್ತರ ನಿರಾಕರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಎಲ್ಲರೂ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಸರ್ಕಾರ ಹಾಗೂ ಕಾಂಗ್ರೆಸ್ ಪರವಾಗಿ ನಾನು ಮನವಿ ಮಾಡುತ್ತೇನೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.